ಫಕೀರ ಸಿದ್ದರಾಮ ಶ್ರೀ ಸ್ವರ್ಣ ತುಲಾಭಾರ ಕೈಬಿಟ್ಟ ಶಿರಹಟ್ಟಿ ಮಠ!

| Published : Aug 14 2025, 01:00 AM IST

ಫಕೀರ ಸಿದ್ದರಾಮ ಶ್ರೀ ಸ್ವರ್ಣ ತುಲಾಭಾರ ಕೈಬಿಟ್ಟ ಶಿರಹಟ್ಟಿ ಮಠ!
Share this Article
  • FB
  • TW
  • Linkdin
  • Email

ಸಾರಾಂಶ

13ನೇ ಪೀಠಾಧಿಪತಿ ಫಕೀರ ಸಿದ್ಧರಾಮ ಸ್ವಾಮೀಜಿಯವರ 75ನೇ ಜನ್ಮದಿನ ಸಂದರ್ಭದಲ್ಲಿ ಅವರಿಗೆ ಸ್ವರ್ಣ ತುಲಾಭಾರ ಮಾಡುವ ಮೂಲಕ ಗೌರವ ಅರ್ಪಿಸಲು 2023ರಲ್ಲಿ ಈ ಯೋಜನೆ ರೂಪಿಸಲಾಗಿತ್ತು.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಹಳದಿ ಲೋಹ ಬಂಗಾರದ ದರ ಲಕ್ಷ ರು. ದಾಟಿ ಸಾಗಿರುವ ಹಿನ್ನೆಲೆಯಲ್ಲಿ ಶಿರಹಟ್ಟಿ ಫಕೀರೇಶ್ವರ ಮಠದ ಪೀಠಾಧಿಪತಿ ಫಕೀರ ಸಿದ್ಧರಾಮ ಮಹಾಸ್ವಾಮಿಗಳ "ಸ್ವರ್ಣ ತುಲಾಭಾರ " ಕಾರ್ಯಕ್ರಮ ರದ್ಧಾಗಿದೆ!ಫಕೀರೇಶ್ವರ ಮಠ ನಾಡಿನ ಕೋಟ್ಯಂತರ ಭಕ್ತರ ಆರಾಧನಾ ಕೇಂದ್ರ. ಫಕೀರೇಶ್ವರರು ಹಿಂದೂಗಳಿಗೆ ಸ್ವಾಮೀಜಿಯಾಗಿ, ಮುಸ್ಲಿಂ ಬಾಂಧವರಿಗೆ ಫಕೀರನಾಗಿ ಜನರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಶ್ರೀಮಠದ 13ನೇ ಪೀಠಾಧಿಪತಿ ಫಕೀರ ಸಿದ್ಧರಾಮ ಸ್ವಾಮೀಜಿಯವರ 75ನೇ ಜನ್ಮದಿನ ಸಂದರ್ಭದಲ್ಲಿ ಅವರಿಗೆ ಸ್ವರ್ಣ ತುಲಾಭಾರ ಮಾಡುವ ಮೂಲಕ ಗೌರವ ಅರ್ಪಿಸಲು 2023ರಲ್ಲಿ ಈ ಯೋಜನೆ ರೂಪಿಸಲಾಗಿತ್ತು.

ಶ್ರೀಮಠದಲ್ಲೇ ನಾಲ್ಕು ದಶಕ: ಶ್ರೀಮಠದ 13ನೇ ಪೀಠಾಧಿಪತಿ ಫಕೀರ ಸಿದ್ದರಾಮ ಶ್ರೀಗಳು 1988ರ ಅಕ್ಟೋಬರ್‌ 22ರಂದು ಪೀಠಾಧಿಪತಿಯಾಗಿ ಆಗಮಿಸಿದ್ದಾರೆ. 1984ರಿಂದಲೇ ಅವರು ಮಠದಲ್ಲಿ ಇರುವುದು ವಿಶೇಷ. 4 ದಶಕ ಪೂರ್ಣಗೊಂಡಿದ್ದು, ಶ್ರೀಮಠದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಾ, ಹಿಂದೂ-ಮುಸ್ಲಿಂರ ಸಾಮರಸ್ಯದ ಸಂದೇಶ ಸಾರುತ್ತ ಮಠದ ಕೀರ್ತಿ ಎಲ್ಲೆಡೆ ಹೆಚ್ಚಿಸಿದ್ದಾರೆ.

"ಯೋಜನೆ ಆರಂಭಿಕ ಹಂತದಲ್ಲೇ ಸ್ವರ್ಣ ತುಲಾಭಾರ ದೊಡ್ಡ ಜವಾಬ್ದಾರಿ ಕೆಲಸ, ಜವಾಬ್ದಾರಿ ತೆಗೆದುಕೊಳ್ಳುವವರು ಬೇಕು. ಕೊಟ್ಟಿದ್ದು ಕೊಟ್ಟಲ್ಲೇ- ಇಟ್ಟಿದ್ದು ಇಟ್ಟಲ್ಲೇ ಆಗಿ ಏನಾದರೂ ಹೆಚ್ಚು ಕಡಿಮೆಯಾದರೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ನಾವು ಅದನ್ನು ಒಪ್ಪಿಕೊಂಡಿಲ್ಲ. ಜತೆಗೆ ಬಂಗಾರದ ರೇಟ್‌ ಒಂದು ಲಕ್ಷ ಚಿಲ್ಲರ ಐತಿ, ಇದನ್ನು ಗಮನಿಸಿ ಭಕ್ತರ ಹಿತದೃಷ್ಟಿಯಿಂದ ನಾನೇ ಬೇಡ ಅಂದಿದ್ದೇನೆ " ಎಂದು ಫಕೀರ ಸಿದ್ದರಾಮ ಶ್ರೀಗಳು ''''''''ಕನ್ನಡಪ್ರಭ''''''''ಕ್ಕೆ ಸ್ಪಷ್ಟಪಡಿಸಿದರು.

ನಿಮ್ ಬಂಗಾರ ನೀವು ಒಯ್ಯಿರಿ: ಯೋಜನೆ ರೂಪಿಸಿದ ಮೇಲೆ ನಾವು ಕೆಲವು ಕಡೆ ತೆರಳಿದಾಗ ಭಕ್ತರು ವಾಗ್ದಾನ ಮಾತ್ರ ಕೊಟ್ಟಿದ್ದಾರೆ. ನಾವು ವಸೂಲಿ ಮಾಡಿಲ್ಲ, ಆಕಸ್ಮಾತ್‌ ಯಾರಾದರೂ ಕೊಟ್ಟಿದ್ರ, ನಿಮ್ ಬಂಗಾರ ನೀವು ಒಯ್ಯಿರಿ ಎಂದು ಭಕ್ತರ ಸಭೆ ಮಾಡಿ ಹೇಳಿದ್ದೇವೆ. ರಸೀದಿ ತಂದು ತೋರಿಸಿದವರಿಗೆ ವಾಪಸ್‌ ಕೊಟ್ಟಿದ್ದೇವೆ. ನನ್ನ ಮನಸ್ಸು ಒಪ್ಪಲಿಲ್ಲ. ಹೀಗಾಗಿ ಬೇಡ ಎಂದು ಹೇಳಿದೆ ಎಂದು ಸ್ವಾಮೀಜಿ ಹೇಳಿದರು.

ರೊಕ್ಕ ಕೊಟ್ಟವರಿಗೆ ರೊಕ್ಕ, ಬಂಗಾರ ಕೊಟ್ಟವರಿಗೆ ಬಂಗಾರ ಒಯ್ಯಲು ಹೇಳಿದ್ದೇವೆ. ಪಾವತಿ ತೋರಿಸಿದವರಿಗೆ ವಾಪಸ್‌ ಕೊಟ್ಟಿದ್ದೇವೆ. ಶಿರಹಟ್ಟಿಯಲ್ಲಿ 200 ತೊಲೆ ಬಂಗಾರ ನೀಡುವುದಾಗಿ ಭಕ್ತರಿಂದ ವಾಗ್ದಾನ ಬಂದಿತ್ತು, ಶೇ. 10ರಷ್ಟು ಬಂದಿರಬೇಕು, ಹುಬ್ಬಳ್ಯಾಗ 3 ಕಿಲೋ ಬಂಗಾರ ನನಗ್‌ ಕೊಟ್ಟರು, ತಿರುಗಿ ನಾನು ಅವರ ಉಡ್ಯಾಗ ಅದನ್ ಇಟ್ಟೇನೆ ಎಂದರು.

ಇನ್ನು ಕೆಲವರು ಬಂದಿಲ್ಲ, ಭಕ್ತರು ಕೊಟ್ಟ ಬಂಗಾರ ಪ್ಲಾಸ್ಟಿಕ್‌ ಚೀಲದಲ್ಲಿ ಪ್ಯಾಕ್‌ ಮಾಡಿ ಅವರ ಹೆಸರು, ಫೋನ್‌ ನಂಬರ್‌ ಸಮೇತ ಬರೆದು ಇಟ್ಟೇವೆ. ಪಾವತಿ ತೋರಿಸಿ ತೆಗೆದುಕೊಂಡು ಹನ್ಬಹುದು ಎಂದು ಶ್ರೀಗಳು ಮುಕ್ತ ಆಹ್ವಾನ ನೀಡಿದರು.

2023ರಲ್ಲಿ ಬಂಗಾರದ ಬೆಲೆ 10 ಗ್ರಾಂಗೆ ₹ 58 ಸಾವಿರ ಇತ್ತು. ತುಲಾಭಾರಕ್ಕೆ 10 ಗ್ರಾಂ ಬಂಗಾರ ನೀಡುವುದಾಗಿ ವಾಗ್ದಾನ ಮಾಡಿದವರಿಗೆ ₹ 60 ಸಾವಿರ ಕೊಡಿ ನಾವು ಹಣ ಸಂಗ್ರಹವಾದ ಮೇಲೆ ಶ್ರೀಮಠದಿಂದ ಒಟ್ಟಿಗೆ ಬಂಗಾರ ಖರೀದಿಸುತ್ತೇವೆ ಎಂದು ತಿಳಿಸಲಾಗಿತ್ತು. ಆದರೆ ಎರಡೇ ವರ್ಷದಲ್ಲಿ 10 ಗ್ರಾಂ ಬಂಗಾರಕ್ಕೆ ₹ 40 ಸಾವಿರ ಹೆಚ್ಚಳವಾಗಿದೆ. ಇದನ್ನು ಅರಿತು, ಭಕ್ತರ ಹಿತದೃಷ್ಟಿಯಿಂದ ಸ್ವರ್ಣ ತುಲಾಭಾರ ಶ್ರೀಮಠ ಕೈಬಿಟ್ಟಿದೆ. ಶಿರಹಟ್ಟಿ ಭಕ್ತರು ಸಹ ದೊಡ್ಡ ಅಜ್ಜನವರ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ನಮ್ಮ ಹಿರಿಯ ಗುರುಗಳ (ಸಿದ್ದರಾಮ ಸ್ವಾಮೀಜಿ) ಆದೇಶದ ಮೇರೆಗೆ ನಾನು ಸುಮ್ಮನೆ ಕುಳಿತಿದ್ದೇನೆ. ಸ್ವರ್ಣ ತುಲಾಭಾರದ ಕುರಿತು ಹೆಚ್ಚಿನ ಮಾಹಿತಿಯನ್ನು ಶ್ರೀಗಳಿಂದಲೇ ಪಡೆದುಕೊಳ್ಳಿ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.ಕಾರ್ಯಕ್ರಮಕ್ಕೆ ನಾನು ಸಹ 5 ತೊಲೆ ಬಂಗಾರ ಕೊಡುವುದಾಗಿ ವಾಗ್ದಾನ ಮಾಡಿದ್ದೆ. 2023ರಲ್ಲಿ 10 ಗ್ರಾಂಗೆ ₹ 58 ಸಾವಿರ ಇದ್ದ ದರ ದಿಢೀರ್ ಏರಿದ್ದರಿಂದ ಭಕ್ತರ ಹಿತದೃಷ್ಟಿಯಿಂದ ಸ್ವಾಮೀಜಿ ಶ್ರೀಮಠದಲ್ಲಿ ಭಕ್ತರ ಸಭೆ ಕರೆದು ಸ್ವರ್ಣ ತುಲಾಭಾರ ಕಾರ್ಯಕ್ರಮ ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ. ಅಜ್ಜನವರು ಹೇಳಿದ್ದಕ್ಕೆ ಭಕ್ತರು ಒಪ್ಪಿದ್ದಾರೆ ಶಿರಹಟ್ಟಿ ಫಕೀರೇಶ್ವರ ಮಠದ ಭಕ್ತ ಬಸವರಾಜ ಎಂ. ಬೋರಶೆಟ್ರ ಹೇಳಿದರು.