ಹೊಳೆಹೊನ್ನೂರಿನಲ್ಲಿ ಅಡಕೆಯ ಸಿಪ್ಪೆಗೋಟು ದರ ಕುಸಿತ: ಖೇಣಿದಾರರು ಕಂಗಾಲು

| Published : Jan 12 2025, 01:20 AM IST

ಹೊಳೆಹೊನ್ನೂರಿನಲ್ಲಿ ಅಡಕೆಯ ಸಿಪ್ಪೆಗೋಟು ದರ ಕುಸಿತ: ಖೇಣಿದಾರರು ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ರಾಶಿ ಅಡಕೆಯ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದರೆ, ಹೊಳೆಹೊನ್ನೂರಿನಲ್ಲಿ ಸಿಪ್ಪಗೋಟು ಮತ್ತು ಗೊರಬಲಿನ ದರ ಕುಸಿದಿರುವುದು ಖೇಣಿದಾರರನ್ನು ಕಂಗೆಡಿಸಿದೆ.

ಗೊರಬಲಿನ ಬೆಲೆಯಲ್ಲೂ ಇಳಿಕೆ । ಅಡಕೆ ಸೋದರ ತಳಿಗಳು ಕಡಿಮೆ ಬೆಲೆಯಲ್ಲಿ ಬಿಕರಿ । ಮಿಶ್ರಣ ದಂಧೆಗೆ ಕಡಿವಾಣದಿಂದ ನಷ್ಟ ಆರೋಪ

ಅರಹತೊಳಲು ಕೆ.ರಂಗನಾಥ್

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ರಾಶಿ ಅಡಕೆಯ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದರೆ, ಸಿಪ್ಪಗೋಟು ಮತ್ತು ಗೊರಬಲಿನ ದರ ಕುಸಿದಿರುವುದು ಖೇಣಿದಾರರನ್ನು ಕಂಗೆಡಿಸಿದೆ.

ಪ್ರಸ್ತುತ ರಾಶಿ ಅಡಕೆಯ ದರ 50 ಸಾವಿರ ರು.ನಿಂದ 51 ಸಾವಿರ ರು. ವರೆಗೆ ಇದೆ. ಆದರೆ ಸಿಪ್ಪೆಗೋಟು ಮತ್ತು ಗೊರಬಲು ಅಡಕೆಯ ದರ ತೀರ ಕಡಿಮೆಯಾಗಿದೆ. ಸಿಪ್ಪೆಗೋಟು 14 ಸಾವಿರ ರು. ಇದ್ದರೆ, ಗೊರಬಲು 23 ರಿಂದ 24 ಸಾವಿರ ರು. ವರೆಗೆ ಇದೆ. ಇದರಿಂದಾಗಿ ಖೇಣಿದಾರನಿಗೆ ಮಾತ್ರ ನಿದ್ದೆ ಬರದಂತಾಗಿದೆ.

ಒಂದು ಕ್ವಿಂಟಲ್ ಹಸಿ ಅಡಕೆಗೆ 13 ರಿಂದ 14 ಕೆ.ಜಿ. ಒಣ ರಾಶಿ ಅಡಕೆ ನೀಡುವಂತೆ ರೈತರಿಂದ ತೋಟವನ್ನು ಖೇಣಿ ಪಡೆಯಲಾಗಿತ್ತು. ಇನ್ನೂ ಕೆಲವರು ಇದಕ್ಕಿಂತಲೂ ಹೆಚ್ಚು ಒಣ ರಾಶಿ ಅಡಕೆ ನೀಡುತ್ತೇವೆ ಎಂದು ಖೇಣಿ ಪಡೆದಿದ್ದಾರೆ. ಒಂದು ಕ್ವಿಂಟಲ್ ಹಸಿ ಅಡಕೆಯನ್ನು ಸುಲಿದು, ಬೇಯಿಸಿ, ಒಣಗಿಸಿದರೆ 13 ರಿಂದ 14 ಕೆಜಿ ಒಣಗಿದ ರಾಶಿ ಅಡಕೆ, 2 ಕೆ.ಜಿ. ಗೊರಬಲು, 1 ಕೆ.ಜಿ. ಸಿಪ್ಪೆಗೋಟು ಸಿಗುತ್ತದೆ. ಹೀಗಿರುವಾಗ ಖೇಣಿದಾರರು ರೈತರಿಗೆ 14 ಕೆಜಿ ಒಣಗಿದ ರಾಶಿ ಅಡಕೆ ನೀಡಿದರೆ ಖೇಣಿದಾರರಿಗೆ ಉಳಿಯೋದು ಕೇವಲ 2 ಕೆಜಿ ಗೊರಬಲು, 1 ಕೆಜಿ ಸಿಪ್ಪೆಗೋಟು ಮಾತ್ರ.

ಕಳೆದ ವರ್ಷ ಗೊರಬಲು 32 ಸಾವಿರ ರು. ಇದ್ದರೆ, ಸಿಪ್ಪೆಗೋಟು 18 ರಿಂದ 20 ಸಾವಿರ ರು. ಇತ್ತು. ಮಧ್ಯವರ್ತಿಗಳು ಮತ್ತು ಖಾಸಗಿ ಮಂಡಿಯವರು ಗೊರಬಲು ಮತ್ತು ಸಿಪ್ಪೆಗೋಟನ್ನು ಹೊಯ್ದು ಸುಲಿಸಿ, ಅದರಲ್ಲೇ ಚೆನ್ನಾಗಿರುವ ಅಡಕೆಯನ್ನು ತೆಗೆದುಕೊಂಡು ಕೃತಕ ಬಣ್ಣ ಬಳಸಿ ಒಣಗಿದ ರಾಶಿ ಅಡಕೆಗೆ ಮಿಶ್ರಣ ಮಾಡಿ ಮಾರಾಟ ಮಾಡಿ ಹೆಚ್ಚು ಲಾಭ ಗಳಿಸುತ್ತಿದ್ದರು. ಆದರೆ ಈ ಬಾರಿ ಕಲಬೆರಕೆ ಮಾಡಿದ ಒಣ ಅಡಕೆ ಮಾರುಕಟ್ಟೆಯಲ್ಲಿ ತಿರಸ್ಕಾರವಾಗುತ್ತಿದೆ. ಆದ್ದರಿಂದ ಮಿಕ್ಸಿಂಗ್ ದಂಧೆಗೆ ಬ್ರೇಕ್ ಬಿದ್ದಂತಾಗಿದೆ. ಇದರಿಂದ ಸಿಪ್ಪೆಗೋಟು ಮತ್ತು ಗೊರಬಲು ಅಡಕೆಯ ದರ ಕುಸಿದಿದೆ ಎಂದು ಮಾರುಕಟ್ಟೆ ಅನುಭವ ಉಳ್ಳವರು ಹೇಳುತ್ತಾರೆ. ದುಬಾರಿ ಕೂಲಿ, ಸಾಗಾಣಿಕೆ ವೆಚ್ಚ, ಅತಿಯಾದ ಮಳೆಯಿಂದ ಅಡಕೆ ಸರಿಯಾಗಿ ಒಣಗದೆ ಟೊಳ್ಳಾಗಿ ತೂಕದಲ್ಲಿ ವ್ಯತ್ಯಾಸ ಆಗಿದೆ. ಇದರಿಂದ ಖೇಣಿದಾರರು ನಷ್ಟ ಅನುಭವಿಸುವಂತಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಣ ರಾಶಿ ಅಡಕೆಯ ದರ ಸ್ಥಿರವಾಗಿದೆ. ಆದರೆ ಸಿಪ್ಪೆಗೋಟು ಮತ್ತು ಗೊರಬಲು ಅಡಕೆಯ ದರ ಕುಸಿದಿರುವುದು ಎಲ್ಲಾ ಖೇಣಿದಾರರು ನಷ್ಟ ಅನುಭವಿಸುವಂತಾಗಿದೆ.

ಎ.ಸಿ.ಚಂದ್ರಶೇಖರ್, ಖೇಣಿದಾರ, ಅರಹತೊಳಲು.

ರೈತರಿಗೆ ಕೊಡುವ 13 ಕೆಜಿ ಒಣ ರಾಶಿ ಅಡಕೆಯನ್ನು ಸರಿದೂಗಿಸಲು ಉಳಿಯುವ ಸಿಪ್ಪೆಗೋಟು ಮತ್ತು ಗೊರಬಲನ್ನು ಸೇರಿಸಬೇಕು. ಇದರಿಂದ ಖೇಣಿ ಮಾಡಿದವರಿಗೆ ಏನೂ ಉಳಿಯುವುದಿಲ್ಲ. ಇದಕ್ಕೆ ಬರುವ ಖರ್ಚುವೆಚ್ಚ ಮತ್ತು ಶ್ರಮ ಎಲ್ಲವೂ ವ್ಯರ್ಥ. ಖೇಣಿದಾರರು ಇನ್ನಾದರೂ ಅರಿತುಕೊಂಡು ಪೈಪೋಟಿಯನ್ನು ನಿಲ್ಲಿಸಬೇಕು. ಇಲ್ಲವಾದರೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ.

ಸಿ.ಪಿ.ಚಂದ್ರಶೇಖರ್, ಖೇಣಿದಾರ.