ಒಂದು ವಾರದಿಂದ ಟೊಮೆಟೋ ಬೆಲೆ ಕುಸಿತ, ಲಕ್ಷ್ಮೇಶ್ವರದಲ್ಲಿ ರಸ್ತೆಗೆ ಚೆಲ್ಲಿ ರೈತರ ಆಕ್ರೋಶ

| Published : Aug 08 2024, 01:42 AM IST / Updated: Aug 08 2024, 12:55 PM IST

ಸಾರಾಂಶ

ಕಳೆದ ಒಂದು ವಾರದಿಂದ ಟೊಮೆಟೋ ಬೆಲೆ ಕುಸಿಯುತ್ತಿರುವುದರಿಂದ ಆಕ್ರೋಶಗೊಂಡ ರೈತರು ಬುಧವಾರ ಲಕ್ಷ್ಮೇಶ್ವರ ತರಕಾರಿ ಹರಾಜು ಮಾರುಕಟ್ಟೆಯಲ್ಲಿ ಟೊಮೆಟೋ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೇಶ್ವರ: ಕಳೆದ ಒಂದು ವಾರದಿಂದ ಟೊಮೆಟೋ ಬೆಲೆ ಕುಸಿಯುತ್ತಿರುವುದರಿಂದ ಆಕ್ರೋಶಗೊಂಡ ರೈತರು ಬುಧವಾರ ತರಕಾರಿ ಹರಾಜು ಮಾರುಕಟ್ಟೆಯಲ್ಲಿ ಟೊಮೆಟೋ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಪಟ್ಟಣದ ಸೋಮನಗೌಡ ಪಾಟೀಲ ಮಾತನಾಡಿ, ಕಳೆದ ಒಂದು ವಾರದಿಂದ ಟೊಮೆಟೋ ಬೆಲೆ ಕುಸಿತವಾಗುತ್ತಿದ್ದರಿಂದ ರೋಸಿ ಹೋಗಿ, ರೈತರು ತಾವು ಬೆಳೆದ ಹಣ್ಣನ್ನು ರಸ್ತೆಗೆ ಚೆಲ್ಲಿದ್ದಾರೆ. ಹಲವು ದಿನಗಳ ಹಿಂದೆ ಬಾಕ್ಸ್‌ ಒಂದಕ್ಕೆ ₹ 200-300ಗಳಿಗೆ ಮಾರಲಾಗುತ್ತಿತ್ತು. ಈಗ ₹ 50-60ಕ್ಕೆ ಮಾರಾಟವಾಗುತ್ತಿದೆ. ಹೀಗೆ ಏಕಾಏಕಿ ದರ ಕುಸಿತ ಕಾಣುತ್ತಿರುವುದರಿಂದ ನಾವು ಖರ್ಚು ಮಾಡಿದ ಹಣವೂ ಮರಳಿ ಬರದಂತಾಗಿದೆ. ಒಂದು ಬಾಕ್ಸ್ ಟೊಮೆಟೋ ಮಾರುಕಟ್ಟೆಗೆ ತರಲು ₹ 25 ಖರ್ಚಾಗುತ್ತದೆ. ಹಣ್ಣನ್ನು ಕೀಳಲು ಒಂದು ಆಳಿಗೆ ₹ 250 ಕೊಡಬೇಕು. ಕಳೆದ 2 ತಿಂಗಳಿಂದ ಟೊಮೆಟೋ ಬೆಳೆಯಲು ಸಾವಿರಾರೂ ರು. ಖರ್ಚು ಮಾಡಲಾಗಿದೆ. ನಾವು ಖರ್ಚು ಮಾಡಿದ ಹಣಕ್ಕೆ ಹಾಗೂ ಶ್ರಮಕ್ಕೆ ಬೆಲೆ ಇಲ್ಲದೆ ಹೋಗಿದ್ದರಿಂದ ಅನಿವಾರ್ಯವಾಗಿ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದೇವೆ ಎಂದರು.

ರೈತರು ಟಂಟಂ ವಾಹನದಿಂದ ರಸ್ತೆಗೆ ಚೆಲ್ಲಿದ ಟೊಮೆಟೋವನ್ನು ಕೆಲವರು ಚೀಲದಲ್ಲಿ ತುಂಬಿಕೊಂಡು ಹೋದರು. ಕೆಲವರು ರೈತರ ಪರಿಸ್ಥಿತಿ ನೋಡಿ ಮರುಕ ವ್ಯಕ್ತಪಡಿಸಿದರು.

ಈ ವೇಳೆ ತರಕಾರಿ ಹರಾಜು ವ್ಯಾಪಾರಸ್ಥ ಮಂಜುನಾಥ ಹೊಗೆಸೊಪ್ಪಿನ ಮಾತನಾಡಿ, ಒಂದು ತಿಂಗಳಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ಟೊಮೆಟೋ ಬೇಡಿಕೆ ಕಡಿಮೆಯಾಗಿದೆ. ಅಲ್ಲದೆ ಹಣ್ಣಿನ ಗುಣಮಟ್ಟವೂ ಉತ್ತಮವಾಗಿಲ್ಲ, ಆದ್ದರಿಂದ ಟೊಮೆಟೋ ಬೆಲೆ ಕುಸಿತವಾಗುತ್ತಿದೆ. ಅಲ್ಲದೆ ರೈತರು ಹೆಚ್ಚಾಗಿ ಟೊಮೆಟೋ ಬೆಳೆದಿದ್ದು ಅವು ಒಮ್ಮೇಲೆ ಮಾರುಕಟ್ಟೆಗೆ ತರುತ್ತಿರುವುದರಿಂದ ಬೆಲೆ ಕುಸಿತವಾಗುತ್ತಿದೆ ಎಂದು ಹೇಳಿದರು.