ಟೊಮೇಟೊ ಬೆಲೆ ಕುಸಿತ: ಕಂಗೆಟ್ಟ ರೈತ
KannadaprabhaNewsNetwork | Published : Oct 17 2023, 12:45 AM IST
ಟೊಮೇಟೊ ಬೆಲೆ ಕುಸಿತ: ಕಂಗೆಟ್ಟ ರೈತ
ಸಾರಾಂಶ
ಹೊಸಕೋಟೆ: ಕಳೆದ ಕೆಲವು ತಿಂಗಳುಗಳ ಹಿಂದೆ ಶರವೇಗದಲ್ಲಿ ಟೊಮೊಟೊ ಬೆಲೆ ಗಗನಕ್ಕೇರಿ 1 ಕೆ.ಜಿ. 100 ರಿಂದ 150 ರು.ಗಳವೆರೆಗೂ ಏರಿತ್ತು. ಬೆಳೆಯ ರಕ್ಷಣೆಗೆಂದು ರೈತರು ಟೊಮೇಟೊ ತೋಟಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಇಂತಹ ಬಂಪರ್ ಬೆಲೆ ದಿಢೀರ್ ಕುಸಿತದಿಂದ ಬೆಳೆ ಬೆಳೆದ ರೈತ ಕಂಗೆಡುವಂತಹ ಸನ್ನಿವೇಶ ಉಂಟಾಗಿದೆ.
ಹೊಸಕೋಟೆ: ಕಳೆದ ಕೆಲವು ತಿಂಗಳುಗಳ ಹಿಂದೆ ಶರವೇಗದಲ್ಲಿ ಟೊಮೊಟೊ ಬೆಲೆ ಗಗನಕ್ಕೇರಿ 1 ಕೆ.ಜಿ. 100 ರಿಂದ 150 ರು.ಗಳವೆರೆಗೂ ಏರಿತ್ತು. ಬೆಳೆಯ ರಕ್ಷಣೆಗೆಂದು ರೈತರು ಟೊಮೇಟೊ ತೋಟಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಇಂತಹ ಬಂಪರ್ ಬೆಲೆ ದಿಢೀರ್ ಕುಸಿತದಿಂದ ಬೆಳೆ ಬೆಳೆದ ರೈತ ಕಂಗೆಡುವಂತಹ ಸನ್ನಿವೇಶ ಉಂಟಾಗಿದೆ. ಈಗ ಕೆ.ಜಿ.ಗೆ 5 ರುಗಳಿಗೂ ಕೇಳುವವರಿಲ್ಲ. ಬೆಳೆ ಬೆಳೆದ ರೈತ ತಲೆ ಮೇಲೆ ಕೈ ಇಟ್ಟುಕೊಂಡು ಕೂರುವಂತಾಗಿದೆ. ಟೊಮೊಟೊಗೆ ಬೆಲೆಯಿಲ್ಲದ ಕಾರಣ ರೈತ ತೋಟಗಳಲ್ಲೆ ಪಸಲನ್ನು ಬಿಟ್ಟು ನಷ್ಟ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣ ಎದುರಾಗಿದೆ. ಇನ್ನೇನು ಕೈ ತುಂಬಾ ಹಣ ಸಿಗುತ್ತದೆ. ಅಲ್ಪ ಸ್ವಲ್ಪ ಸಾಲಬಾಧೆಯಿಂದ ಮುಕ್ತಿ ಆಗಬಹುದು ಎಂದು ಆಸೆ ಪಟ್ಟ ರೈತನಿಗೆ ಭಾರಿ ಹೊಡೆತ ಬಿದ್ದಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಲೆ ಏರಿಕೆಯಿಂದಾಗಿ ಅನೇಕ ರೈತರು ಟೊಮೇಟೋವನ್ನೇ ಬೆಳೆಯಲು ಪ್ರಾರಂಭಿಸಿದರು. ಲಕ್ಷಾಂತರ ರುಪಾಯಿ ಸಾಲ ಮಾಡಿ ಪಸಲು ಬೆಳೆದರೂ ದಿಢೀರ್ ಕುಸಿತಕ್ಕೆ ರೈತ ಕಂಗಲಾಗಿದ್ದಾನೆ. ಜೊತೆಗೆ ಕೀಟ ಬಾಧೆ ಬೇರೆ ವಕ್ಕರಿಸಿದೆ. ಕೀಟ ಬಾಧೆಯಿಂದಾಗಿ ಹೂ ಬಿಡುವ ಹೊತ್ತಿನಲ್ಲೇ ಕೆಲವು ಗಿಡ ಒಣಗಿ ಹೋಗುತ್ತಿವೆ. ನಂದಗುಡಿ ಹೋಬಳಿಯ ಚಿಕ್ಕ ಕೊರಟಿ, ದೊಡ್ಡ ಕೊರಟಿ, ಕಾರ ಹಳ್ಳಿ, ವಡ್ಡಹಳ್ಳಿ, ಗಿಡ್ಡನಹಳ್ಳಿ, ಹಳೇ ಊರು, ಗೋವಿಂದನಪುರ, ಶಿವನಾಪುರ ಇನ್ನಿತರ ಗ್ರಾಮಗಳಲ್ಲಿ ನೂರಾರು ಹೆಕ್ಟೇರ್ ಗಳಲ್ಲಿ ಟೊಮೇಟೊ ಬೆಳೆದು ರೈತರು ತಿಪ್ಪೆ ಗೊಬ್ಬರ, ಕೋಳಿ ಗೊಬ್ಬರ ಹಾಕಿ ಸ್ಪರ್ಧಾತ್ಮಕವಾಗಿ ಬೆಳೆ ಬೆಳೆದಿದ್ದಾರೆ. ತೋಟಗಳಲ್ಲಿ ಹಣ್ಣು ನಳನಳಿಸುತ್ತಿದೆ. ಒಂದು ಎಕರೆ ಟೊಮೇಟೊ ಬೆಳೆಯಲು ಸುಮಾರು 2 ಲಕ್ಷ ಖರ್ಚು ಬರುತ್ತದೆ ಎನ್ನುತ್ತಾರೆ ರೈತರು. ಹೆಚ್ಚಿನ ಬೆಳೆ, ಉತ್ತಮ ಇಳುವರಿ ಬರುತ್ತಿದ್ದು ಟೊಮೆಟೊ ಮಾರುಕಟ್ಟೆ ದಿನನಿತ್ಯ ತುಂಬಿ ತುಳುಕುತ್ತಿದೆ. ಮಹಾರಾಷ್ಟ್ರದ ನಾಸಿಕ್, ಔರಂಗಾಬಾದ್, ಮಧ್ಯಪ್ರದೇಶ ರಾಜ್ಯಗಳಲ್ಲೂ ಟೊಮೇಟೊ ಹೆಚ್ಚು ಬೆಳೆದಿದ್ದಾರೆ. ಹೀಗಾಗಿ ಟೊಮೇಟೊ ಬೆಲೆ ಕುಸಿದಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ. ಬಾಕ್ಸ್.................. ಹಾಕಿದ ಬಂಡಬಾಳವೂ ಸಿಗಲ್ಲ ಈಗಿನ ದರ 15 ಕೆಜಿ ಬಾಕ್ಸ್ 50 ರಿಂದ 60 ರು.ಗಳಾಗಿದೆ. 2 ಎಕರೆಯಲ್ಲಿ ಟೊಮೇಟೊ ಬೆಳೆಯಲು ಸುಮಾರು 6 ರಿಂದ 8 ಲಕ್ಷ ಖರ್ಚಾಗುತ್ತದೆ. ಹಣ್ಣು ಕೀಳಲು ಒಬ್ಬರಿಗೆ 300ರಿಂದ 400 ರು.ಗಳು ಕೂಲಿ ಕೊಡಬೇಕಾಗುತ್ತದೆ. ಬಾಕ್ಸ್ ಒಂದಕ್ಕೆ 15 ರುಪಾಯಿ ಲಗ್ಗೇಜ್ ಕೊಡಬೇಕಾಗುತ್ತದೆ. ದಲ್ಲಾಳಿಗಳಿಗೆ ಕಮಿಷನ್ ಕೊಡಬೇಕು. ಔಷಧಿಗೆ ಸಾವಿರಾರು ರು. ಬಂಡವಾಳ ಹಾಕಬೇಕಾಗುತ್ತದೆ. ಇಷ್ಟೆಲ್ಲಾ ಖರ್ಚು ಹೋಗಿ 10-20 ರು.ಗಳು ಕೈಗೆ ಸಿಗುತ್ತದೆ. ಹಾಕಿದ ಬಂಡವಾಳ ಇಲ್ಲ, ಕೂಲಿಯು ಇಲ್ಲದೆ ಹಾಕಿದ ಬಂಡವಾಳಕ್ಕೆ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ರೈತರು. ಮುಂದಿನ ದಿನಗಳಲ್ಲಿ ಈ ರೀತಿಯಾದರೆ ಟೊಮೇಟೊ ಬೆಳೆ ಬೆಳೆಯುವುದೆ ಬೇಡವೆನಿಸುತ್ತದೆ ಎಂದು ರೈತ ಮಂಜುನಾಥ್ ಅಳಲನ್ನು ತೋಡಿಕೊಂಡಿದ್ಧಾನೆ. ಫೋಟೋ: 16 ಹೆಚ್‌ಎಸ್‌ಕೆ 3 ಮತ್ತು 4 3: ನಂದುಗುಡಿ ಗ್ರಾಮದ ರೈತ ಮಂಜುನಾಥ್ ತೋಟದಲ್ಲಿ ಬೆಳೆದÀ ಟೊಮೊಟೊ ಗಿಡಗಳಿಗೆ ರೋಗ ತಗಲಿರುವುದು. 4: ರೋಗದ ನಡುವೆಯು ರೈತ ಮಂಜುನಾಥ್ ಬೆಳೆದಿರುವ ಟೊಮೇಟೊ