ಕುಸಿದ ಬೆಲೆ: ಮೆಕ್ಕೆಜೋಳ ಖರೀದಿ ಗಗನಕುಸುಮ

| Published : Oct 19 2025, 01:00 AM IST

ಸಾರಾಂಶ

ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಪಾತಳಕ್ಕೆ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ಇಷ್ಟಾದರೂ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಪಾತಳಕ್ಕೆ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ಇಷ್ಟಾದರೂ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳಕ್ಕೆ ಬರೋಬ್ಬರಿ ₹2400 ಘೋಷಣೆ ಮಾಡಿದೆ. ಇಷ್ಟು ದರಕ್ಕೆ ಮಾರುಕಟ್ಟೆ ಸಿಕ್ಕರೆ ರೈತರ ಸಂತಸಕ್ಕೆ ಪಾರವೇ ಇರುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಆವಕ ಹೆಚ್ಚಳವಾಗಿದೆ ಎನ್ನುವ ಕಾರಣ ಮುಂದೆ ಮಾಡಿ, ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಮೆಕ್ಕೆಜೋಳ ಬೆಲೆ ಪಾತಾಳಕ್ಕೆ ಇಳಿಸಿದ್ದಾರೆ. ಇದರಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಕೊಪ್ಪಳ ಮಾರುಕಟ್ಟೆಯಲ್ಲಿ 1 ಲಕ್ಷ ಕ್ವಿಂಟಲ್‌ಗೂ ಅಧಿಕ ಆವಕವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ₹1800ಗೆ ಕುಸಿದಿದೆ. ಇಷ್ಟು ದರಕ್ಕೆ ಮಾರಿದರೆ ಮಾಡಿದ ಖರ್ಚು ಸಹ ಬರುವುದಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಅಷ್ಟಕ್ಕೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ರೈತರು ತಪಸ್ಸು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದಲಾಲಿ ಅಂಗಡಿಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ಸರದಿಯಲ್ಲಿ ಹಗಲು ರಾತ್ರಿ ನಿಲ್ಲಬೇಕು. ಮಾರುಕಟ್ಟೆಯಲ್ಲಿ ದರ ನಿಗದಿಯಾದ ಬಳಿಕವೇ ಬ್ರೀಡ್ಜ್ ಕಾಟಾ ಮಾಡಲು ಮತ್ತೆ ಹೆಣಗಾಡಬೇಕು. ಇದಕ್ಕಾಗಿ ಹಗಲು, ರಾತ್ರಿ ಎನ್ನದೆ ಕಾಯುತ್ತಾ ತಂದಿರುವ ಮೆಕ್ಕೆಜೋಳ ಲೋಡ್ ಮೇಲೆ, ಟ್ರ್ಯಾಕ್ಟರ್‌ನಲ್ಲಿಯೇ ಮಲಗಿಕೊಳ್ಳಬೇಕು. ಅಂತಹ ದುಸ್ಥಿತಿ ರೈತರದ್ದಾಗಿದೆ.