ಕನ್ನಡಪ್ರಭ ವಾರ್ತೆ ಕಾರವಾರನನ್ನ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣ ತನಿಖೆಯ ಹಾದಿ ತಪ್ಪಿಸಲು ಹಾಗೂ ತಮ್ಮ ರಾಜಕೀಯ ಪುನರುಜ್ಜೀವನಕ್ಕಾಗಿ ವಕೀಲ ನಾಗರಾಜ ವಿ. ನಾಯಕ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಆರೋಪಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಾಜ ನಾಯಕ ಮಾಡುತ್ತಿರುವ ಸತ್ಯಾಗ್ರಹದ ಹಿಂದೆ ರಾಜಕೀಯ ಪ್ರೇರಿತ ಸಂಚು ಅಡಗಿದೆ ಎಂದು ದೂರಿದರು.ಮೇ 6ರಂದು ವಂದಿಗೆ ಗ್ರಾಮದಲ್ಲಿ ಕೇವಲ ವಾಗ್ವಾದವಾಗಿದ್ದರೂ, ವಕೀಲ ವೃತ್ತಿಯ ರಕ್ಷಣೆಯ ನೆಪದಲ್ಲಿ ಅದನ್ನು ಕೊಲೆ ಬೆದರಿಕೆ ಎಂದು ಬಿಂಬಿಸಿ ದೂರು ನೀಡಲಾಗಿದೆ. ಘಟನೆ ನಡೆದಾಗ ನಾನು ಬೆಂಗಳೂರಿನಲ್ಲಿದ್ದರೂ ನನ್ನ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂದು ಸುಳ್ಳು ದೂರು ನೀಡಲಾಗಿದೆ. ಯಾರ ಒತ್ತಡಕ್ಕೆ ಮಣಿದು ಪೊಲೀಸರು ಎಫ್‌ಐಆರ್‌ನಲ್ಲಿ ನನ್ನ ಹೆಸರು ಸೇರಿಸಿದ್ದಾರೆ ಎಂಬುದು ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.ನಾಗರಾಜ ನಾಯಕರು ತಹಶೀಲ್ದಾರ್ ಕಚೇರಿ ಬಳಿಯ ಗೋಡೆ ಗಣಪತಿ ಮುಂದೆ ಆಣೆ ಮಾಡಲು ಸವಾಲು ಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿ ನಾನು ದೇವರ ಮುಂದೆ ಈ ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ ಎಂದು ಆಣೆ ಮಾಡಿ ಬಂದಿದ್ದೇನೆ. ಆದರೆ ನಾಗರಾಜ ನಾಯಕರು ಅಲ್ಲಿಂದ ಪಲಾಯನ ಮಾಡಿದ್ದಾರೆ ಎಂದರು.ವಿಶೇಷವೆಂದರೆ, ನನ್ನ ಮೇಲೆ ಹಲ್ಲೆ ನಡೆಸಿ ಜೈಲಿನಲ್ಲಿರುವ ಆರೋಪಿಗಳ ಕುಟುಂಬಸ್ಥರನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವರು ಧರಣಿ ನಡೆಸುತ್ತಿದ್ದಾರೆ. ಇದು ಅವರ ಹೋರಾಟದ ಅಸಲಿ ಮುಖವನ್ನು ತೋರಿಸುತ್ತದೆ ಎಂದು ಗೋಪಾಲಕೃಷ್ಣ ನಾಯಕ ಆರೋಪಿಸಿದರು.ನಾನು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದೇನೆ ಎಂದು ಆರೋಪಿಸುವ ನಾಗರಾಜ ನಾಯಕರಿಗೆ ಅಕ್ರಮ-ಸಕ್ರಮದ ಬಗ್ಗೆ ಮಾಹಿತಿ ಕೊರತೆಯಿದೆ. ಸೋಶಿಯಲ್ ಮೀಡಿಯಾ ಸ್ಟಾರ್ ಆಗಲು ಅವರು ಹವಣಿಸುತ್ತಿದ್ದಾರೆ. ಬಾಸ್ಕೋಡ ಸೊಸೈಟಿಯಲ್ಲಿ ಮನೆ ನವೀಕರಣಕ್ಕೆಂದು ಸಾಲ ಪಡೆದು ಬೆಂಗಳೂರಿನ ಕೋಣನಕುಂಟೆಯಲ್ಲಿ ಮನೆ ಖರೀದಿ ಮಾಡಿದ್ದಾರೆ. ಇದು ಸುಳ್ಳಾಗಿದ್ದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಸವಾಲು ಹಾಕಿದರು.ನಗರಸಭಾ ಮಾಜಿ ಸದಸ್ಯ ರಾಜೇಶ್ ಮಾಜಾಳಿಕರ್, ವಂದಿಗೆ ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣ ನಾಯಕ, ಸೂರಜ್ ನಾಯಕ, ಪ್ರೀತಮ್ ನಾಯಕ, ವಿಶಾಲ್, ಕಿಶೋರ್ ಮತ್ತಿತರರಿದ್ದರು.ನಾನು ಸಾರ್ವಜನಿಕ ಜೀವನದಲ್ಲಿ ಸಭ್ಯನಾಗಿರಲು ಇಚ್ಛಿಸುತ್ತೇನೆ. ನಾಗರಾಜ ನಾಯಕರು ಕೇವಲ ಮಾಜಿ ಶಾಸಕಿಯ ವಿರೋಧಿಗಳ ಪ್ರಾಯೋಜಕತ್ವದಲ್ಲಿ ಈ ಹೋರಾಟ ಮಾಡುತ್ತಿದ್ದಾರೆ. ಇದು ಕೇವಲ ರಾಜಕೀಯ ಗಿಮಿಕ್ ಎಂದು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ತಿಳಿಸಿದ್ದಾರೆ.