ಅನುದಾನ ಪೋಲಾಗುತ್ತಿದೆಯೆಂದು ಪಟ್ಟಭದ್ರರಿಂದ ಅಪಪ್ರಚಾರ

| Published : Sep 25 2025, 01:00 AM IST

ಸಾರಾಂಶ

ಪಟ್ಟಣದಲ್ಲಿ ಗ್ಯಾಸ್ ಲೈನ್, ಚರಂಡಿ, ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಗ್ಯಾಸ್ ಲೈನ್ ಕಾಮಗಾರಿಗೆ ಪುರಸಭೆ ಅನುದಾನವನ್ನು ಬಳಕೆ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ರಾಮನಗರಬಿಡದಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಮಾದರಿ ಪಟ್ಟಣವನ್ನಾಗಿ ರೂಪಿಸಲು ಎಲ್ಲ ಸದಸ್ಯರು ಪಕ್ಷಾತೀತವಾಗಿ ಶ್ರಮಿಸುತ್ತಿದ್ದೇವೆ. ಇದನ್ನು ಸಹಿಸದ ಕೆಲ ಪಟ್ಟಭದ್ರರು ಅನುದಾನ ಪೋಲು ಮಾಡುತ್ತಿದ್ದಾರೆಂದು ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಬಿಡದಿ ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮತ್ತು ವಿಪಕ್ಷ ನಾಯಕ ಸಿ.ಉಮೇಶ್ ಕಿಡಿಕಾರಿದರು.ಬಿಡದಿ ಪುರಸಭೆ ಸಭಾಂಗಣದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪುರಸಭೆ ನಿಧಿ, ವಿಶೇಷ ಅನುದಾನಗಳನ್ನು ಬಳಸಿಕೊಂಡು ಬಿಡದಿ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಪ್ರಚಾರಕ್ಕಾಗಿ ನಾಗರೀಕರಿಗೆ ತಪ್ಪು ಸಂದೇಶ ನೀಡುವುದು ಸರಿಯಲ್ಲ ಎಂದರು.ಅಧ್ಯಕ್ಷ ಹರಿಪ್ರಸಾದ್ ಮಾತನಾಡಿ, ಡಿಸೆಂಬರ್ ತಿಂಗಳ ವೇಳೆಗೆ ಬಿಡದಿ ಮಾದರಿ ಪಟ್ಟಣವಾಗಿ ಕಾಣಲಿದೆ. ಪುರಸಭೆಯಲ್ಲಿ ಜೆಡಿಎಸ್ ಆಡಳಿತದಲ್ಲಿದ್ದರು, ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಅನುದಾನ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಯಾವ ವಾರ್ಡುಗಳನ್ನು ನಿರ್ಲಕ್ಷ್ಯ ಮಾಡಿಲ್ಲ ಎಂದು ಹೇಳಿದರು.

ಪಟ್ಟಣದಲ್ಲಿ ಗ್ಯಾಸ್ ಲೈನ್, ಚರಂಡಿ, ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಗ್ಯಾಸ್ ಲೈನ್ ಕಾಮಗಾರಿಗೆ ಪುರಸಭೆ ಅನುದಾನವನ್ನು ಬಳಕೆ ಮಾಡಿಲ್ಲ. ಇದನ್ನು ತಿಳಿಯದ ಕೆಲವರು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಜೆಡಿಎಸ್ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡಿದ್ದು, ವಿಪಕ್ಷ ದವರು ಅಭಿವೃದ್ಧಿ ಗೆ ಕೈ ಜೋಡಿಸುತ್ತಿದ್ದಾರೆ ಎಂದರು.ವಿಪಕ್ಷದವರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುತ್ತಿದ್ದೇವೆ. ಯಾವುದೇ ಕಳ್ಳ ಬಿಲ್ ಗಳನ್ನು ಮಾಡಿಲ್ಲ. ಕಾಮಗಾರಿಗಳು ನಡೆಯುತ್ತಿರುವ ಕಾರಣ ಮಾಹಿತಿ ಹಕ್ಕುದಾರರ ಹಾವಳಿಯೂ ಹೆಚ್ಚಾಗಿದೆ. ಎಲ್ಲ ಮಾಹಿತಿ ಪಡೆದುಕೊಂಡು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ‌. ಹಾಗಾಗಿ ವಾರ್ಡಿನ ಸದಸ್ಯರಿಂದ ಮಾಹಿತಿ ಪಡೆದು ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವಂತೆ ಮನವಿ ಮಾಡಿದರು.ವಿಪಕ್ಷ ನಾಯಕ ಸಿ.ಉಮೇಶ್ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಆಗದಿರುವ ಅಭಿವೃದ್ಧಿ ಕಾರ್ಯಗಳು ಈ ಅವಧಿಯಲ್ಲಿ ನಡೆಯುತ್ತಿವೆ. ಪುರಸಭೆಯ 23 ವಾರ್ಡುಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದರಿಂದ ನಾಗರೀಕರಿಗೆ ಕುಡಿಯುವ ನೀರು, ಯುಜಿಡಿಯಂತಹ ಸಮಸ್ಯೆಗಳು ಉಂಟಾಗಿರಬಹುದು. ಕೆಲ ದಿನಗಳ ಕಾಲ ನಾಗರೀಕರು ಅನುಸರಿಸಿಕೊಂಡು ಸಹಕಾರ ನೀಡಬೇಕು ಎಂದು ಹೇಳಿದರು.ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ ಎಂದು ನಿರ್ಧರಿಸಿ ಆಡಳಿತ ಮತ್ತು ವಿರೋಧ ಪಕ್ಷದವರು ಒಟ್ಟಾಗಿ ಪಟ್ಟಣದ ಅಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತಿದ್ದೇವೆ. ಶಾಸಕ ಬಾಲಕೃಷ್ಣ ಮತ್ತು ಮಾಜಿ ಶಾಸಕ ಎ.ಮಂಜುನಾಥ್ ರವರ ಸಲಹೆ ಮಾರ್ಗದರ್ಶನಗಳನ್ನು ಪಡೆದು ಕೆಲಸ ಮಾಡುತ್ತಿದ್ದೇವೆ. ಆದರೆ, ಕೆಲ ವಿರೋಧಿಗಳು ಸಣ್ಣಪುಟ್ಟ ಲೋಪಗಳನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.ರಾಜ್ಯ ಸರ್ಕಾರ ಬಿ ಖಾತೆ ವಿಚಾರವಾಗಿ ಆದೇಶ ಹೊರಡಿಸಿದ ಮೇಲೆ ಹತ್ತಾರು ಕೋಟಿ ರುಪಾಯಿ ಪುರಸಭೆಗೆ ಬಂದಿದೆ. ಪುರಸಭೆ ನಿಧಿ, ವಿಶೇಷ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗ ಮಾಡಲಾಗುತ್ತಿದೆ. ಪಟ್ಟಣದ ಅಭಿವೃದ್ಧಿಗಾಗಿ ಶೇಕಡ 30ರಷ್ಟು ಅನುದಾನವನ್ನು ಹೆಚ್ಚುವರಿಯಾಗಿ ಮೀಸಲಿಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಪುರಸಭೆ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ದೇವರಾಜು, ಹೊಂಬಯ್ಯ, ನವೀನ್ ಕುಮಾರ್, ಶ್ರೀನಿವಾಸ್, ರಮೇಶ್, ರೇಣುಕಯ್ಯ ಇದ್ದರು....ಕೋಟ್ ...ಬಿಡದಿ ಪಟ್ಟಣದಲ್ಲಿ ಕೆಲವೆಡೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅನಧಿಕೃತ ಬಡಾವಣೆ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಅನೇಕ ಸಮಸ್ಯೆಗಳ ಬಗ್ಗೆಯೂ ಚರ್ಚೆ ಮಾಡಬೇಕಾಗಿದೆ. ಅಧ್ಯಕ್ಷ ಹರಿಪ್ರಸಾದ್ ರವರು ರಾಜೀನಾಮೆ ಸಲ್ಲಿಸಿರುವ ಕಾರಣ ಉಪಾಧ್ಯಕ್ಷರು ಕೂಡಲೇ ಪುರಸಭೆ ಸಾಮಾನ್ಯ ಸಭೆ ಕರೆಯಲಿ.- ಸಿ.ಉಮೇಶ್ , ವಿಪಕ್ಷ ನಾಯಕ, ಬಿಡದಿ ಪುರಸಭೆ.24ಕೆಆರ್ ಎಂಎನ್ 1.ಜೆಪಿಜಿಬಿಡದಿ ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಮತ್ತು ವಿಪಕ್ಷ ನಾಯಕ ಸಿ.ಉಮೇಶ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.