ಸುಳ್ಳು ವಾಸ ದೃಢೀಕರಣ ಪತ್ರ: ಅಧಿಕಾರಿಗಳ ಅಮಾನತಿಗೆ ಆಗ್ರಹ

| Published : Feb 12 2024, 01:37 AM IST

ಸಾರಾಂಶ

ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ರಾಜಕೀಯ ಮುಖಂಡರೋರ್ವರಿಗೆ ಸುಳ್ಳು ವಾಸದ ದೃಢೀಕರಣ ಪತ್ರ ನೀಡಿರುವ ದಂಡಿನಶಿವರ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರನ್ನು ಕೂಡಲೇ ಅಮಾನತು ಮಾಡಬೇಕೆಂದು ಮಾಜಿ ಶಾಸಕ ಮಸಾಲಾ ಜಯರಾಮ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ರಾಜಕೀಯ ಮುಖಂಡರೋರ್ವರಿಗೆ ಸುಳ್ಳು ವಾಸದ ದೃಢೀಕರಣ ಪತ್ರ ನೀಡಿರುವ ದಂಡಿನಶಿವರ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರನ್ನು ಕೂಡಲೇ ಅಮಾನತು ಮಾಡಬೇಕೆಂದು ಮಾಜಿ ಶಾಸಕ ಮಸಾಲಾ ಜಯರಾಮ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಲೂಕು ಕಚೇರಿಗೆ ಭೇಟಿ ನೀಡಿ ತಹಸೀಲ್ದಾರ್‌ರೊಂದಿಗೆ ಮಾತನಾಡಿದ ಅವರು, ತಾಲೂಕಿನ ಮಾಜಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾಗಿರುವ ಬಿ.ಎಸ್. ದೇವರಾಜ್ ಎಂಬುವವರು ಕಲ್ಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ದಂಡಿನಶಿವರ ಹೋಬಳಿ ದೊಡ್ಡಾ ಗೊರಾಘಟ್ಟದಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿದ್ದಾರೆಂದು ವಾಸ ದೃಢೀಕರಣ ಪತ್ರ ಪಡೆದುಕೊಂಡಿದ್ದಾರೆ.

ಆದರೆ ಇದೇ ಬಿ.ಎಸ್.ದೇವರಾಜ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆಯಲ್ಲಿ ವಾಸವಿದ್ದಾರೆ. ಪಟ್ಟಣ ಪಂಚಾಯ್ತಿಯಲ್ಲೂ ಇ ಖಾತಾ ಮಾಡಿಸಿದ್ದಾರೆ. ಅಲ್ಲದೇ ತುರುವೇಕೆರೆಯ ಮನೆಯ ವಿಳಾಸವಿರುವ ದಾಖಲೆಯ ಆಧಾರ್‌ ಕಾರ್ಡ್ ಸಹ ಇದೆ. ಇಷ್ಟೆಲ್ಲಾ ದಾಖಲೆಗಳು ಇದ್ದರೂ ಸಹ ದಂಡಿನಶಿವರ ಕಂದಾಯ ನಿರೀಕ್ಷರು ಮತ್ತು ಕಂದಾಯ ನಿರೀಕ್ಷಕರು ಆಮಿಷಕ್ಕೆ ಒಳಗಾಗಿ ಬಿ.ಎಸ್. ದೇವರಾಜ್ ಅವರಿಗೆ ಸುಳ್ಳು ವಾಸದ ಪ್ರಮಾಣ ಪತ್ರ ನೀಡಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದರು.

ಹಾಗಾಗಿ ಕೂಡಲೇ ಅವರಿಬ್ಬರನ್ನೂ ಅಮಾನತು ಮಾಡಬೇಕು ಹಾಗೂ ಸುಳ್ಳು ದಾಖಲೆ ನೀಡಿ ವಾಸದ ಪ್ರಮಾಣ ಪತ್ರ ಪಡೆದುಕೊಂಡಿರುವ ಬಿ.ಎಸ್. ದೇವರಾಜ್ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ಸಾವಿರಾರು ಬೆಂಬಲಿಗರೊಂದಿಗೆ ತಾಲೂಕು ಕಚೇರಿ ಬಳಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ವಿ.ಟಿ. ವೆಂಕಟರಾಮಯ್ಯ, ಬುಗುಡನಹಳ್ಳಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಇದ್ದರು.