ಸಾರಾಂಶ
ಕನ್ನಡಪ್ರಭವಾರ್ತೆ ವಿರಾಜಪೇಟೆ
ವ್ಯಕ್ತಿಯೊಬ್ಬ ಕೋಪದಿಂದ ತನ್ನ ಒಂಟಿ ನಳಿಕೆಯ ಕೋವಿಯಿಂದ ಪತ್ನಿಯನ್ನೇ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗತನಾದ ಘಟನೆ ವಿರಾಜಪೇಟೆ ಹೊರವಲಯ ಬೇಟೋಳಿ ಗ್ರಾಮದಲ್ಲಿ ನಡೆದಿದೆ.ವಿರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿಯ ಬೇಟೋಳಿ ಗ್ರಾಮದ ನಿವಾಸಿ ನಾಯಕಂಡ ಚಿಟ್ಟಿಯಪ್ಪ ಮತ್ತು ಪಾರ್ವತಿ ದಂಪತಿ ಸೊಸೆ ಮತ್ತು ಎನ್.ಸಿ. ಬೋಪಣ್ಣ ಅವರ ಪತ್ನಿ ಶಿಲ್ಪ ಸೀತಮ್ಮ (37) ಪತಿಯಿಂದ ಹತ್ಯೆಯಾದ ದುರ್ದೈವಿ.
ಘಟನೆ ವಿವರ:ತೀತಿಮಾಡ ಪೂಣಚ್ಚ ಮತ್ತು ಜಾನಕಿ ದಂಪತಿಯ ಪುತ್ರಿ ಶಿಲ್ಪ ಸೀತಮ್ಮ ಅವರನ್ನು ಬೇಟೋಳಿ ಗ್ರಾಮದ ನಾಯಂಕಂಡ ಬೋಪಣ್ಣ ವಿವಾಹ ಆಗಿದ್ದರು. ಬೋಪಣ್ಣ ನಗರದ ಹೊರವಲಯದಲ್ಲಿ ಸರ್ವಿಸ್ ಸ್ಟೇಷನ್ ಹೊಂದಿದ್ದಾರೆ. ಬೋಪಣ್ಣ ಮತ್ತು ಶಿಲ್ಪ ದಂಪತಿಗೆ ಇರ್ವರು ಪುತ್ರಿಯರು. ಹಿರಿಯವಳು ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಕಿರಿಯ ಪುತ್ರಿ ಏಳನೇ ತರಗತಿ ಓದುತ್ತಿದ್ದಾರೆ. ಮೃತ ಶಿಲ್ಪ ಸೀತಮ್ಮ ಅವರು ಬೇಟೋಳಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯೆಯಾಗಿದ್ದರು. ಕೆಲವು ವರ್ಷಗಳಿಂದ ದಂಪತಿಗಳ ಮಧ್ಯೆ ವಿರಸ ಮೂಡಿತ್ತು. ಕೌಟುಂಬಿಕ ಕಲಹಗಳು ನಡೆದು ಬೇರೆ ಬೇರೆ ಅಡುಗೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಮಧ್ಯೆ ಶಿಲ್ಪ ಸೀತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಲು ತೀರ್ಮಾನಿಸಿ. ಗಂಡನಿಂದ ವಿವಾಹ ವಿಚ್ಛೇದನ ನೀಡುವಂತೆ ವಿರಾಜಪೇಟೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಈ ಸಂಬಂಧ ಜು. 19ರಂದು ಪತಿ ಬೋಪಣ್ಣನಿಗೆ ನ್ಯಾಯಾಲಯದಿಂದ ನೋಟಿಸು ಬಂದಿತ್ತು. ಇದರಿಂದ ಬೋಪಣ್ಣ ಹತಾಶರಾಗಿದ್ದರು. ಶನಿವಾರ ಬೋಪಣ್ಣ ಅವರ ತಾಯಿ ಪಾರ್ವತಿ ಮತ್ತು ಇರ್ವರು ಮಕ್ಕಳು ಇರುವ ಸಂದರ್ಭ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಯಲ್ಲಿ ಅಡುಗೆ ಮನೆಯಲ್ಲಿ ಬೆಳಗಿನ ಉಪಹಾರ ತಯಾರಿಸುತ್ತಿದ್ದ ವೇಳೆಯಲ್ಲಿ ತನ್ನ ಮನೆಯಲ್ಲಿದ್ದ ಒಂಟಿ ನಳಿಕೆಯ ಕೋವಿಯಿಂದ ಹಿಂಬದಿಯಿಂದ ಬೆನ್ನಿಗೆ ಗುಂಡು ಹೊಡೆದಿದ್ದಾನೆ. ಪರಿಣಾಮ ಗುಂಡು ಹೊಳಹೊಕ್ಕು ಎದೆಯನ್ನು ಸೀಳಿಕೊಂಡು ಹೊರ ಬಂದಿದೆ. ಶಿಲ್ಪ ಸ್ಥಳದಲ್ಲೇ ಮರಣ ಹೊಂದಿದ್ದಾರೆ.
ಗುಂಡಿನ ಸದ್ದು ಕೇಳಿ ಬೊಪಣ್ಣ ತಾಯಿ ಮತ್ತು ಇರ್ವರು ಮಕ್ಕಳು ಅಡುಗೆ ಮನೆಗೆ ತೆರಳಿದ್ದಾರೆ. ಇವರಿಗೆ ಗೋಚರಿಸಿದ್ದು ತಾಯಿಯ ರಕ್ತಸಿಕ್ತವಾದ ಮೃತದೇಹ. ಕೋವಿಯಿಂದ ಹೊಡೆದು ಕೊಲೆ ಮಾಡಿದ ಬೋಪಣ್ಣ ಕೃತ್ಯಕ್ಕೆ ಬಳಸಿದ್ದ ಕೋವಿಯೊಂದಿಗೆ ವಿರಾಜಪೇಟೆ ನಗರ ಠಾಣೆಗೆ ಶರಣಾಗಿದ್ದಾನೆ. ಆತನ ಕಿಸೆಯಲ್ಲಿ ಮತ್ತೊಂದು ತೋಟಿ (ಗುಂಡು) ಇತ್ತು. ಪೊಲೀಸರು ಪ್ರಶ್ನಿಸಿದಾಗ ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮನಸ್ಸಾಗಿತ್ತು. ಆದರೆ ತನ್ನ ಇರ್ವರು ಮಕ್ಕಳ ಭವಿಷ್ಯದ ಚಿತ್ರಣ ಕಣ್ಣೇದೆರು ಬಂದಿತ್ತು. ಆದುದರಿಂದ ಆತ್ಮಹತ್ಯೆ ಮಾಡಿಕೊಳ್ಳದೆ ಶರಣಾಗಿದ್ದೇನೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.ವಿಷಯ ತಿಳಿದು ನಗರ ಠಾಣೆಯ ಅಧಿಕಾರಿಗಳು ಮತ್ತು ವೃತ್ತ ನಿರೀಕ್ಷಕರಾದ ಬಿ.ಎಸ್. ಶಿವರುದ್ರ, ಸಿಬ್ಬಂದಿ ತೆರಳಿ ಮಹಜರು ಮಾಡಿರುತ್ತಾರೆ. ಸ್ಥಳಕ್ಕೆ ಮೈಸೂರಿನಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಕೃತ್ಯಕ್ಕೆ ಕೋವಿ ಬಳಸಿರುವುದರಿಂದ ಬೆಂಗಳೂರು ವಿಧಿ ವಿಜ್ಞಾನ ಕೇಂದ್ರದ ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೋವಿಯನ್ನು ವಶಕ್ಕೆ ಪಡೆದಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.