ಸಾರಾಂಶ
ಪಟ್ಟಣದ ಈದ್ಗಾ ಮೊಹಲ್ಲಾ ಬಡಾವಣೆಯ ಮನೆಯೊಂದರಲ್ಲಿ ಕೌಟುಂಬಿಕ ಕಲಹಕ್ಕಾಗಿ ಅಣ್ಣನೇ ತನ್ನ ತಂಗಿಯನ್ನು ಕತ್ತು ಕೊಯ್ದು ಕೊಲೆ ಮಾಡಿರುವ ದಾರುಣ ಘಟನೆ ಬುಧವಾರ ತಡರಾತ್ರಿ ಜರುಗಿದೆ. ಆರೋಪಿಯನ್ನು ತಕ್ಷಣ ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ಈದ್ಗಾ ಮೊಹಲ್ಲಾ ಬಡಾವಣೆಯ ಮನೆಯೊಂದರಲ್ಲಿ ಕೌಟುಂಬಿಕ ಕಲಹಕ್ಕಾಗಿ ಅಣ್ಣನೇ ತನ್ನ ತಂಗಿಯನ್ನು ಕತ್ತು ಕೊಯ್ದು ಕೊಲೆ ಮಾಡಿರುವ ದಾರುಣ ಘಟನೆ ಬುಧವಾರ ತಡರಾತ್ರಿ ಜರುಗಿದೆ. ಆರೋಪಿಯನ್ನು ತಕ್ಷಣ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಸಹೋದರ ಸೈಯಿದ್ ಫರ್ಮಾನ್ ಎಂಬಾತನಿಂದ ಐಮನ್ ಬಾನು (26) ಕೊಲೆಯಾದ ದುರ್ದೈವಿ ತಂಗಿ. ತನ್ನ ಸಹೋದರ ಕೌಟುಂಬಿಕ ಕಲಹದಿಂದ ಮಾತನಾಡುತ್ತಿದ್ದಂತೆ ಮಾತಿಗೆ ಮಾತು ಬೆಳೆದು ತಂಗಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತಕ್ಷಣ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.ಏನಿದು ಘಟನೆ?:
ತಂಗಿಯ ಮಗು ಮಲಗಿದ್ದು ಮಗುವನ್ನು ಆರೋಪಿ ಎಬ್ಬಿಸಲು ತೆರಳಿದ ವೇಳೆ, ಮಗು ಮಲಗಲಿ, ಅದಕ್ಕೆ ತೊಂದರೆ ನೀಡಬೇಡಿ ಎಂದು ಕೊಲೆಯಾದ ಐಮನ್ ಬಾನು ಹೇಳುತ್ತಿದ್ದಂತೆ ಗಲಾಟೆ ತೆಗೆದು ಸೈಯಿದ್ ಫರ್ಮಾನ್, ತಂಗಿಯನ್ನು ಬಾಯಿಗೆ ಬಂದಂತೆ ಬೈದು, ಕುತ್ತಿಗೆ ಕೊಯ್ಯಲು ತೆರಳುತ್ತಿದ್ದಂತೆ ಅಡ್ಡಬಂದ ಎಲ್ಲ ಸಂಬಂಧಿಗಳ ಮೇಲೂ ಹಲ್ಲೆ ನಡೆಸಿದ್ದಾನೆ. ಅದರ ಪರಿಣಾಮ ತಂದೆಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು ಪ್ರಶ್ನಿಸಿದ ಅತ್ತಿಗೆ ಮೇಲೂ ಸಹಾ ಚಾಕುವಿನಿಂದ ಇರಿದು ರಕ್ತಗಾಯಗೊಳಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಅಕ್ಕ, ಪಕ್ಕದ ನಿವಾಸಿಗಳು ತಕ್ಷಣ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡ ಸೈಯದ್ ಪಾಶಾ, ತಸ್ಲಿಂಬಾನು ಅವರನ್ನು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾ.ನಗರಕ್ಕೆ ಕಳುಹಿಸಿಲಾಗಿದ್ದು ತೀವ್ರ ಗಾಯಗೊಂಡ ತಸ್ಲಿಂಬಾನು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಯದ್ ಪಾಶಾ ಅವರಿಗೆ ರಕ್ತಗಾಯದ ಜೊತೆ ಕೈ ಮೂಳೆ ಸಹಾ ಮುರಿದಿದ್ದು ಈ ಸಂಬಂಧ ಸೈಯೀದ್ ರೋಷನ್ ಪಟ್ಟಣ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ದೂರಿನಲ್ಲೆನಿದೆ?:ಆರೋಪಿ ಅಣ್ಣ ಸೈಯದ್ ರೋಷನ್ ಪಟ್ಟಣ ಠಾಣೆಗೆ ದೂರು ನೀಡಿದ್ದು ಬುಧವಾರ 9ಗಂಟೆ ಸುಮಾರಿಗೆ ನನ್ನ ತಮ್ಮ ಮನೆಗೆ ಬಂದು ಪಾಪು ಮಲಗುವ ವಿಚಾರದಲ್ಲಿ ತಗಾದೆ ತೆಗೆದು ಗಲಾಟೆ ಪ್ರಾರಂಭಿಸಿ, ನನ್ನ ತಂಗಿ ಕೊಲೆಗೈದಿದ್ದು, ನನ್ನ ಪತ್ನಿ ಹಾಗೂ ತಂದೆಗೂ ಮಾರಣಾಂತಿಕ ಹಲ್ಲೆಗೈದಿದ್ದು ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಗುರುವಾರ ಬೆಳಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಗೆ ಕೌಟುಂಬಿಕ ಕಲಹ ಕಾರಣವೇ ಇಲ್ಲ ಯಾವ ಕಾರಣಕ್ಕಾಗಿ ಕೊಲೆ ನಡೆಯಿತು ಎಂಬುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬರಬೇಕಿದೆ.
ಆರೋಪಿ ಕೋಪಿಷ್ಟನಾಗಿದ್ದೇ ಕೊಲೆಗೆ ಕಾರಣ:ಆರೋಪಿ ಸೈಯಿದ್ ಫರ್ಮಾನ್ ತೀವ್ರ ಕೋಪಿಷ್ಟನಾಗಿದ್ದು ಈತನಿಗೆ ನನ್ನದೆ ನಡೆಯಬೇಕು ಎಂಬ ಹಠವಿತ್ತಂತೆ. ಕಾರ್ ಮೆಕಾನಿಕ್ ಆಗಿ ಮಾಡುತ್ತಿದ್ದ ಕೆಲಸ ಬಿಟ್ಟು ಆಗಲೆ ಮೂರು ತಿಂಗಳಾಗಿತ್ತಂತೆ. ಈ ಹಿನ್ನೆಲೆಯಲ್ಲಿ ನನಗೆ ಪ್ರತ್ಯೇಕವಾಗಿ ಕಾರ್ ಗ್ಯಾರೇಜ್ ಮಾಡಿಕೊಡಿ ಎಂಬ ವಿಚಾರಕ್ಕೆ ಆಗಾಗ್ಗೆ ಕುಟುಂಬದಲ್ಲಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಬುಧವಾರ ಮನೆಗೆ ಬಂದ ಈತ ಊಟ ಮಾಡುತ್ತಿದ್ದ ವೇಳೆ ಅಣ್ಣನ ಮಗುವಿಗೆ ಹುಷಾರಿಲ್ಲದ ಕಾರಣ ಮಲಗಿಸಲು ತೆರಳುತ್ತಿದ್ದ ಅತ್ತಿಗೆಗೆ ನಾನು ಊಟ ಮಾಡುವತನಕ ಮಗು ಮಲಗುವುದು ಬೇಡ ಎಂದು ಹೇಳಿದಾಗ ಮಧ್ಯ ಪ್ರವೇಶಿಸಿದ ತಂಗಿ ಪಾಪುಗೆ ಹುಷಾರಿಲ್ಲ ಮಲಗಲಿ ಬಿಡು, ನೀನು ಊಟ ಮಾಡುವ ತನಕ ಮಗು ಮಲಗದಂತೆ ತಡೆಯಲು ಸಾಧ್ಯವೇ? ಮಲಗಿಕೊಳ್ಳಲಿ ಎಂದು ಹೇಳುತ್ತಿದ್ದಂತೆ ನನಗೆ ತಿರುಗಿಸಿ ಮಾತನಾಡುತ್ತಿಯಾ ಎಂದು ತಗಾದೆ ತೆಗೆದ ಆರೋಪಿ ತಂಗಿ ಮೇಲೆ ಹಲ್ಲೆ ಮಾಡಿದ್ದಾನೆ, ಮಾತಿಗೆ ಮಾತು ಬೆಳೆದು ಕೊಲೆ ಹಂತಕ್ಕೂ ತಲುಪಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.