ಬೆಸ್ಕಾಂ ಕಚೇರಿ ದ್ವಾರದಲ್ಲಿ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ

| Published : Sep 18 2025, 01:10 AM IST

ಸಾರಾಂಶ

ಒಂದು ವರ್ಷದ ಹಿಂದೆ ಬಿಡದಿ ಹೋಬಳಿ ಕೆಂಪನಹಳ್ಳಿ ಬಳಿ ವಿದ್ಯುತ್ ಕಂಬ ಏರಿ ಸೂರ್ಯ ಕುಮಾರ್ ಕೆಲಸದಲ್ಲಿ ತೊಡಗಿದ್ದರು.

ಕನ್ನಡಪ್ರಭ ವಾರ್ತೆ ರಾಮನಗರ

ವಿದ್ಯುತ್ ಕಂಬದಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಗುತ್ತಿಗೆ ನೌಕರನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ನೀಲಕಂಠನಹಳ್ಳಿ ಗ್ರಾಮಸ್ಥರು ನಗರದ ಬೆಸ್ಕಾಂ ಕಚೇರಿ ಎದುರು ಬುಧವಾರ ಶವವಿಟ್ಟು ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ ತಾಲೂಕು ನೀಲಕಂಠನಹಳ್ಳಿ ಗ್ರಾಮದ ಸೂರ್ಯ ಕುಮಾರ್ (42) ಮೃತರು.

ಒಂದು ವರ್ಷದ ಹಿಂದೆ ಬಿಡದಿ ಹೋಬಳಿ ಕೆಂಪನಹಳ್ಳಿ ಬಳಿ ವಿದ್ಯುತ್ ಕಂಬ ಏರಿ ಸೂರ್ಯ ಕುಮಾರ್ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿದ್ದರಿಂದ ಅವರು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಎಇ ಪ್ರಕಾಶ್ ರವರ ಕರ್ತವ್ಯ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.

ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಸೂರ್ಯಕುಮಾರ್ ಮನೆಯಲ್ಲಿ ಹಾಸಿಗೆ ಹಿಡಿದಿದ್ದರು. ಬುಧವಾರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನೀಲಕಂಠನಹಳ್ಳಿಯಿಂದ ಶವವನ್ನು ರಾಮನಗರ ಬೆಸ್ಕಾಂ ಕಚೇರಿ ದ್ವಾರದಲ್ಲಿಟ್ಟು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೆಸ್ಕಾಂ ಇಲಾಖೆಯಾಗಲಿ ಅಥವಾ ಗುತ್ತಿಗೆದಾರನಾಗಲಿ ಸ್ಪಂದಿಸಿಲ್ಲ. ಮೃತ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಪಟ್ಟು ಹಿಡಿದರು.

ದಲಿತ ಸಮುದಾಯದ ಮುಖಂಡರು ಹಾಗೂ ಮೃತರ ಸಂಬಂಧಿಕರು ಬೆಸ್ಕಾಂ ಅಧಿಕಾರಿಗಳೊಂದಿಗೆ ಪರಿಹಾರ ವಿಚಾರವಾಗಿ ಚರ್ಚೆಯಲ್ಲಿ ತೊಡಗಿದ್ದರು. ಸಂಜೆಯಾದ ಕಾರಣ ಕುಟುಂಬಸ್ಥರು ಶವವನ್ನು ಗ್ರಾಮಕ್ಕೆ ಕೊಂಡೊಯ್ದರು. ಬೆಸ್ಕಾಂ ಕಚೇರಿ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.17ಕೆಆರ್ ಎಂಎನ್ 4,5.ಜೆಪಿಜಿ

4.ರಾಮನಗರ ಬೆಸ್ಕಾಂ ಕಚೇರಿ ದ್ವಾರದಲ್ಲಿ ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.

5.ಬೆಸ್ಕಾಂ ಕಚೇರಿ ಬಳಿ ಪೊಲೀಸರು ಬಂದೋಬಸ್ತಿನಲ್ಲಿ ತೊಡಗಿರುವುದು.