ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕೀಯ: ಕೆ.ಎಸ್. ಈಶ್ವರಪ್ಪ

| Published : May 01 2024, 01:16 AM IST

ಸಾರಾಂಶ

ಹೊಳೆಹೊನ್ನೂರಿನ ಸಮೀಪದ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಮಾಜಿ ಶಾಸಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಮೋದಿ ಕುಟುಂಬ ರಾಜಕಾರಣ ಬೇಡ ಎನ್ನುತ್ತಾರೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕೀಯ ಎದ್ದು ಕಾಣುತ್ತಿದೆ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಅವರು ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಪಕ್ಷ ಅಪ್ಪ-ಮಕ್ಕಳ ಹಿಡಿತದಲ್ಲಿದೆ. ಕುಟುಂಬ ರಾಜಕಾರಣದಿಂದ ಪಕ್ಷ ಮುಕ್ತಗೊಳಿಸಬೇಕು ಎಂದು ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.

ನಾನು ಮೋದಿ ಭಕ್ತನಾಗಿದ್ದು, ಮೋದಿ ಹೆಸರಲ್ಲಿ ಚುನಾವಣೆ ನಡೆಸುತ್ತಿದ್ದೇನೆ. ಅವರು ದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈಗಾಗಿ ಅನೇಕ ಕಾನೂನು ಜಾರಿಗೊಳಿಸುವುದರ ಜೊತೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೊಮ್ಮೆ ಸ್ವತಂತ್ರ ನೀಡುವಲ್ಲಿ ಸಫಲಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ಮುಸ್ಲಿಂರನ್ನು ತುಷ್ಠೀಕರಣ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ನೇಹಾ ಎಂಬ ಕಾಲೇಜು ಓದುವ ಹೆಣ್ಣು ಮಗಳ ಹತ್ಯೆ ಪ್ರಕರಣ ರಾಜ್ಯ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ನಿಷ್ಠಾವಂತ ಹಿಂದೂ ಕಾರ್ಯಕರ್ತರು ಕ್ಷೇತ್ರದ ಮನೆ ಮನೆಗೆ ಹೋಗಿ ನಮ್ಮ ಗುರುತು ಮತ್ತು ಕ್ರಮಸಂಖ್ಯೆಯನ್ನು ನಮ್ಮ ತಾಯಂದಿರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ನೆರೆದಿದ್ದ ಸಾವಿರಾರು ಕಾರ್ಯಕರ್ತರಿಗೆ ಮನವಿ ಮಾಡಿದರು.

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ರಾಜ್ಯ ಬಿಜೆಪಿಯಲ್ಲಿ ಎಸ್ಸಿ-ಎಸ್ಟಿ ಸಮಾಜದ ಮುಖಂಡರು ಯಾರು ಅಧಿಕಾರಕ್ಕೆ ಬರಲು ಬಿಡುತ್ತಿಲ್ಲ. ಈಶ್ವರಪ್ಪ ಚುನಾವಣೆ ಮಾಡಲು, ಅವರನ್ನು ಬೆಂಬಲಿಸಲು ಜನ ಎಲ್ಲಿದ್ದಾರೆ ಎಂದು ಅಪಹಾಸ್ಯ ಮಾಡುತ್ತಿರುವವರು ಇಂದು ಸೇರಿರುವ ಜನರನ್ನು ನೋಡಿ ತಲೆತಿರುಗಿ ಬೀಳುತ್ತಾರೆ ಎಂದು ತಿರುಗೇಟು ನೀಡಿದರು.

ಕ್ಷೇತ್ರದಲ್ಲಿ ಮಹಾನ್ ನಾಯಕರು ಕಡೇ ದಿನದ ಆಟಕ್ಕೆ ಕಾಯುತ್ತಿದ್ದಾರೆ. ಅಂದರೆ ಹಣಬಲದಿಂದ ಜನರ ಮನಸ್ಸನ್ನು ಗೆಲ್ಲಬಹುದು ಅಂದುಕೊಂಡಿದ್ದಾರೆ. ಪ್ರತಿಯೊಬ್ಬರೂ ತಪ್ಪದೆ ಅವರಿಂದ ಹಣ ಪಡೆದು ಕೆ.ಎಸ್.ಈಶ್ವರಪ್ಪಗೆ ಮತನೀಡಿ ಎಂದು ಕರೆ ನೀಡಿದರು.

ಸಭೆಯಲ್ಲಿ ಓಂಕಾರ ಮೂರ್ತಿ, ಕೋಟ್ರೇಶ್, ಶಿವಮೊಗ್ಗದ ಶಿವಾಜಿ, ಮಂಜುನಾಥ, ನಂಜುಂಡಪ್ಪ, ಬಸವರಾಜ್, ಮೂರ್ತಪ್ಪ, ಶಾಂತಕುಮಾರ್, ರಂಗನಾಥ, ಸಂದೀಪ್. ಆರ್, ಡಿಎಸ್ಎಸ್ ರಂಗನಾಥ್, ಸೇರಿದಂತೆ ಇನ್ನಿತರರು ಹಾಜರಿದ್ದರು.