ಕರಾಟೆಯಿಂದ ಸ್ವರಕ್ಷಣೆಯೊಂದಿಗೆ ಕುಟುಂಬ ರಕ್ಷಣೆ ಸಾಧ್ಯ

| Published : Jan 08 2024, 01:45 AM IST

ಸಾರಾಂಶ

ಕರಾಟೆಯಲ್ಲಿ ಭಟ್ಕಳದ ಪ್ರತಿಭೆಗಳು ಸಾಕಷ್ಟು ಸಾಧನೆ ಮಾಡಿದ್ದು, ನನ್ನ ಕ್ಷೇತ್ರದ ೬ ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವದು ಸಂತಸದ ಸಂಗತಿ

ಭಟ್ಕಳ: ತಾಲೂಕಿನ ಬೇಂಗ್ರೆಯ ಮಾವಿನಕಟ್ಟೆಯಲ್ಲಿ ಭಾನುವಾರ ಏರ್ಪಡಿಸಲಾದ ರಾಜ್ಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯನ್ನು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್ ವೈದ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕರಾಟೆಯಿಂದ ಸ್ವರಕ್ಷಣೆ ಮಾತ್ರವಲ್ಲ, ಕುಟುಂಬದ ರಕ್ಷಣೆ ಮಾಡಬಹುದು.ಅದರಲ್ಲೂ ಹೆಣ್ಣುಮಕ್ಕಳಿಗೆ ಇದು ಅವಶ್ಯವಾದ ವಿದ್ಯೆಯಾಗಿದೆ. ದೇಶ, ರಾಜ್ಯದ ಹಲವಡೆ ಪ್ರತಿನಿತ್ಯ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ವರದಿಯಾಗುತ್ತಲೆ ಇದ್ದು, ಹೆಣ್ಣುಮಕ್ಕಳಿಗೆ ಕರಾಟೆಯಂತಹ ರಕ್ಷಣಾತ್ಮಕ ಕಲೆ ಇನ್ನಷ್ಟು ಸಂಖ್ಯೆಯಲ್ಲಿ ಕಲಿಯಬೇಕು ಎಂದ ಅವರು, ಕರಾಟೆಯಲ್ಲಿ ಭಟ್ಕಳದ ಪ್ರತಿಭೆಗಳು ಸಾಕಷ್ಟು ಸಾಧನೆ ಮಾಡಿದ್ದು, ನನ್ನ ಕ್ಷೇತ್ರದ ೬ ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವದು ಸಂತಸದ ಸಂಗತಿ. ಭಟ್ಕಳದಲ್ಲಿ ಕರಾಟೆ ಶಾಲೆ ಆರಂಭಿಸಿದ ವಾಸು ನಾಯ್ಕ ಅವರನ್ನು ಸ್ಮರಿಸಿದ ಸಚಿವರು ಅವರಿಂದಲೇ ಇಂದು ಭಟ್ಕಳದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಕರಾಟೆ ಕಲಿತು ಇತರರಿಗೂ ತರಬೇತಿ ನೀಡುತ್ತಿದ್ದಾರೆಂದರು.

ಎಲ್ ಐಸಿ ಶಾಖಾ ವ್ಯವಸ್ಥಾಪಕ ಗುರುದಾಸ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಗ್ರೆ ಗ್ರಾಪಂ ಉಪಾಧ್ಯಕ್ಷ ಗೋವಿಂದ ನಾಯ್ಕ, ಪತ್ರಕರ್ತರಾದ ವಿಷ್ಣು ದೇವಾಡಿಗ, ಮನಮೋಹನ ನಾಯ್ಕ, ಪ್ರಮುಖರಾದ ತಿಮ್ಮಪ್ಪ ಹೊನ್ನಿಮನೆ, ಎಸ್.ಪಿ. ಹಂದೆ, ಹನ್ಸಿ ರಾಜನ್, ಕಿರಣ ಶ್ಯಾನಭಾಗ, ವಿಠಲ್ ನಾಯ್ಕ, ಮಂಜುನಾಥ ದೇವಾಡಿಗ, ವಿಶಾಲ ನಾಯ್ಕ, ರವಿ ಶಾಲಿಯಾನ, ಸಾಗರ ಜಾದವ, ಶ್ರೀಧರ ಭೈರುಮನೆ, ಉಮೇಶ ಮೊಗೇರ ಇತರ ಸಭೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ ಸಹಸ್ರಾರು ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕ ನಾರಾಯಣ ನಾಯ್ಕ ನಿರ್ವಹಿಸಿದರು.