ವಿಶ್ವಕ್ಕೇ ಕನ್ನಡದ ಸೊಗಡು ಪರಿಚಯಿಸುತ್ತಿರುವ ಅಭಿಮಾನಿಗಳು: ಡಾ.ಜಿ.ಎಂ.ಗಣೇಶ್

| Published : Nov 25 2025, 01:15 AM IST

ವಿಶ್ವಕ್ಕೇ ಕನ್ನಡದ ಸೊಗಡು ಪರಿಚಯಿಸುತ್ತಿರುವ ಅಭಿಮಾನಿಗಳು: ಡಾ.ಜಿ.ಎಂ.ಗಣೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಇಂಗ್ಲಿಷ್‌ ಸೇರಿದಂತೆ ಇತರ ಭಾಷೆಗಳನ್ನು ಕಲಿತು ಕನ್ನಡದ ಸಂಸ್ಕೃತಿ, ಶ್ರೀಮಂತಿಕೆಯನ್ನು ಪ್ರಪಂಚಕ್ಕೇ ಪರಿಚಯಿಸುವ ಕೆಲಸವನ್ನು ಮಾಧ್ಯಮಗಳು, ಕಲಾವಿದರು, ಸಾಹಿತಿಗಳು, ಸಂಘ-ಸಂಸ್ಥೆಗಳು, ಕನ್ನಡದ ಅಭಿಮಾನಿಗಳಿಂದ ನಡೆಯುತ್ತಿದೆ ಇದು ಕನ್ನಡದ ಅಸ್ಮಿತೆ ಉಳಿಸುವ ಕಾರ್ಯ ಎಂದು ಎಂ.ಎಲ್.ಎಂ.ಎನ್. ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಂ.ಗಣೇಶ್ ಹೇಳಿದರು.

ಕನ್ನಡ ರಾಜ್ಯೋತ್ಸವ, ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ । ಪೂರ್ವಿ ಗಾನಯಾನ 113ರ ಸರಣಿ ಉದ್ಘಾಟನೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಇಂಗ್ಲಿಷ್‌ ಸೇರಿದಂತೆ ಇತರ ಭಾಷೆಗಳನ್ನು ಕಲಿತು ಕನ್ನಡದ ಸಂಸ್ಕೃತಿ, ಶ್ರೀಮಂತಿಕೆಯನ್ನು ಪ್ರಪಂಚಕ್ಕೇ ಪರಿಚಯಿಸುವ ಕೆಲಸವನ್ನು ಮಾಧ್ಯಮಗಳು, ಕಲಾವಿದರು, ಸಾಹಿತಿಗಳು, ಸಂಘ-ಸಂಸ್ಥೆಗಳು, ಕನ್ನಡದ ಅಭಿಮಾನಿಗಳಿಂದ ನಡೆಯುತ್ತಿದೆ ಇದು ಕನ್ನಡದ ಅಸ್ಮಿತೆ ಉಳಿಸುವ ಕಾರ್ಯ ಎಂದು ಎಂ.ಎಲ್.ಎಂ.ಎನ್. ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಂ.ಗಣೇಶ್ ಹೇಳಿದರು.ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ, ಕಲ್ಕಟ್ಟೆ ಪುಸ್ತಕದ ಮನೆ, ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಹಿಳಾ ಘಟಕ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಆಶ್ರಯದಲ್ಲಿ ನಗರದ ಎಂಇಎಸ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪೂರ್ವಿ ಗಾನಯಾನ 113 ರ ಸರಣಿ ಉದ್ಘಾಟಿಸಿ ಮಾತನಾಡಿದರು. ಇಂಗ್ಲಿಷ್ ಕಲಿತು ಕನ್ನಡದ ಸಂಸ್ಕೃತಿಯನ್ನು ಪ್ರಪಂಚಕ್ಕೆ ಪರಿಚಯಿಸುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ನಮಗೆ ಬೇರೆ ಭಾಷೆಗಳ ಬಗ್ಗೆ ದುರಭಿಮಾನ ಬೇಡ. ಹೀಗಾಗಿ ನಾವು ನಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಮೂಲಕ ನಮ್ಮ ಕನ್ನಡದ ಸಂಸ್ಕೃತಿ, ಶ್ರೀಮಂತಿಕೆಯನ್ನು ಇತರರಿಗೆ ಪರಿಚಯಿಸುವ ಕೆಲಸ ಮಾಡಬೇಕು. ಭಾಷೆಗಳ ಕನ್ನಡ ಭಾಷೆ ಉಳಿದರೆ ಇಲ್ಲಿ ಬೇರು ಬಿಟ್ಟಿರುವ ನಮ್ಮ ಸಂಸ್ಕೃತಿ, ಸಾಹಿತ್ಯ, ಸಂಗೀತ, ವಿಜ್ಞಾನ, ಇತಿಹಾಸ ಉಳಿಯುತ್ತದೆ ಎಂದು ಪ್ರತಿಪಾದಿಸಿದರು.

ಇಂದು ಭಾಷೆಗಳು ನಾಶವಾಗುತ್ತಿದೆ. ಭಾಷೆ ನಾಶವಾದರೆ, ಒಂದು ನದಿ ಬತ್ತಿದಲ್ಲಿ ಆಗುವ ನಷ್ಟಕ್ಕಿಂತಲೂ ಹೆಚ್ಚಿನ ನಷ್ಟ ವಾಗುತ್ತದೆ. ಈ ನಿಟ್ಟಿನಲ್ಲಿ ಭಾಷೆ ನಶಿಸದಂತೆ ನೋಡಿಕೊಳ್ಳುವುದು ಅಗತ್ಯ. ಈ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕಾಗಿದೆ ಎಂದರು. ವಿಶ್ವದ ಸುಮಾರು 3 ಸಾವಿರಕ್ಕೂ ಅಧಿಕ ಭಾಷೆಗಳಲ್ಲಿ ಭಾರತವೊಂದರಲ್ಲೇ ಸುಮಾರು 1680 ಭಾಷೆಗಳಿವೆ. ಪ್ರಪಂಚದ ಐದು ಭಾಷಾ ವರ್ಗಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ, ವಿಶ್ವದ ಯಾವುದೇ ಭಾಷೆಗಳ ಜೊತೆಗೆ ಜ್ಞಾತಿ ಸಂಬಂಧ ಹೊಂದಿರದ ದ್ರಾವಿಡ ಭಾಷಾ ವರ್ಗದಲ್ಲಿ ಮೂರು ಸಾವಿರ ವರ್ಷಗಳ ಇತಿಹಾಸದ ಕನ್ನಡ ಅತ್ಯಂತ ಶ್ರೀಮಂತ ಭಾಷೆ ಎನ್ನುವುದನ್ನು ತಜ್ಞರು ಗುರುತಿಸಿದ್ದಾರೆ. ಈ ನಡುವೆ ಕನ್ನಡದ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಮಾಧ್ಯಮಗಳು, ಕಲಾವಿದರು, ಸಾಹಿತಿಗಳು, ಸಂಘ-ಸಂಸ್ಥೆಗಳು, ಕನ್ನಡದ ಅಭಿಮಾನಿಗಳು ಕನ್ನಡದ ಅಸ್ಮಿತೆಯನ್ನು ಉಳಿಸಲು ಪ್ರಯತ್ನದಲ್ಲಿ ಭಾಷೆಯ ಶ್ರೀಮಂತಿಕೆಯನ್ನು ಪ್ರಪಂಚಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನವೆಂಬರ್ ಕನ್ನಡಿಗರಿಗೆ ಸಂಭ್ರಮದ ಮಾಸ. ಕನ್ನಡ ನಾಡು-ನುಡಿ ಕುರಿತ ಗೀತಗಾಯನ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷ. ಇಲ್ಲಿನ ಸಂಸ್ಕೃತಿ ಶ್ರೀಮಂತಿಕೆಯನ್ನು ಜೀವಂತವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಕೂಡ ಒಂದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ ಅವರಿಗೆ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ನವೆಂಬರ್‌ಗೆ ಸೀಮಿತ ವಾಗಬಾರದು. ಅದು ನಿತ್ಯ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು. ಇಂದು ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಾಹಿತ್ಯ, ಸಂಸ್ಕೃತಿ ಲೇಪನ ಬೇಕೇ ಬೇಕು. ಕನ್ನಡ ಬಳಸಿದರೆ ಅದು ತನ್ನಷ್ಟಕ್ಕೆ ಉಳಿಯುತ್ತದೆ, ಬೆಳೆಯುತ್ತದೆ. ನಾವು ಪರಭಾಷಾ ಸಹಿಷ್ಣುಗಳು. ಅಂತೆಯೇ ನಮ್ಮ ಭಾಷೆ ಮೇಲೆ ವಿಶೇಷ ಪ್ರೀತಿ ಹೊಂದಿರಬೇಕು. ಈ ಭಾಷೆಗೆ ಸಾಧು ಸಂತರು, ದಾಸವರೇಣ್ಯರು ತಮ್ಮ ಸಾಹಿತ್ಯದ ಮೂಲಕ ಈ ಭಾಷೆಗೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿದರು. ಸುಗಮ ಸಂಗೀತ ಗಂಗಾದ ಡಾ.ಜೆ.ಪಿ. ಕೃಷ್ಣೇಗೌಡ, ಲಯನ್ಸ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ಸಿ.ಪಿ.ಸುರೇಶ, ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ವಿಶ್ವನಾಥ್, ಕಲ್ಕಟ್ಟೆ ಪುಸ್ತಕದ ಮನೆ ಅಧ್ಯಕ್ಷೆ ರೇಖಾ ನಾಗರಾಜರಾವ್ ಕಾರ್ಯಕ್ರಮದಲ್ಲಿದ್ದರು. ಇದೇ ವೇಳೆ ಕರುನಾಡ ತಾಯಿ ಸದಾ ಚಿನ್ಮಯಿ ಶೀರ್ಷಿಕೆಯಡಿ ಪೂರ್ವಿ ಗಾನಯಾನ ೧೧೩ರ ಸರಣಿಯಲ್ಲಿ ಕನ್ನಡ ಚಿತ್ರ ಗಳಿಂದ ಆಯ್ದ ಕನ್ನಡ ಪರ ಗೀತೆಗಳ ಗಾಯನದಲ್ಲಿ ಪೂರ್ವಿ ತಂಡದ ಮುಖ್ಯಸ್ಥ ಎಂ.ಎಸ್.ಸುಧೀರ್ ಗಾಯಕ ಎಚ್.ಎಂ.ನಾಗರಾಜರಾವ್, ಚೇತನ್‌ರಾಮ್, ಶ್ರೀಕಾಂತ್, ಅನುಷ, ಪೃಥ್ವಿಶ್ರೀ, ಮೇಘ, ಮನು, ಚಿನ್ಮಯಿ ಕೆ.ಎಸ್., ಮಾನ್ಯತ ಎಸ್. ಹಾಗೂ ಮಾನ್ಯ ಭಟ್ ಎಸ್.ಆರ್. ವಿವಿಧ ಗೀತೆಗಳಿಗೆ ಧ್ವನಿಯಾಗಿ ರಂಜಿಸಿದರು.