ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಹದಿನೆಂಟು ವರ್ಷಗಳ ಬಳಿಕ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಕ್ಕೆ ಅಭಿಮಾನಿಗಳು ನಗರದಲ್ಲಿ ಅದ್ಧೂರಿಯಾಗಿ ಸಂಭ್ರಮಾಚರಣೆ ನಡೆಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಾಹನಗಳನ್ನು ತಡೆದು ವಿಜಯೋತ್ಸವ ಆಚರಿಸುತ್ತಿದ್ದ ಅಭಿಮಾನಿಗಳನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಕೇಕ್ ಕತ್ತರಿಸಿ ಕುಣಿದು ಕುಪ್ಪಳಿಸಿ ‘ಆರ್‌ಸಿಬಿ’......, ‘ಆರ್‌ಸಿಬಿ’........ ಎಂದು ಹರ್ಷೋದ್ಘಾರ ವ್ಯಕ್ತಪಡಿಸಿದರು.
ಮಂಗಳವಾರ ಮಧ್ಯರಾತ್ರಿ ೧೧.೩೦ರ ವೇಳೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಾಳಿ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಸೇರಿದರು. ಹೆದ್ದಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿ ಸಂಭ್ರಮಾಚರಣೆ ನಡೆಸಿದರು.ದ್ವಿಚಕ್ರವಾಹನಗಳಲ್ಲಿ ಬಂದಿದ್ದ ಅಭಿಮಾನಿಗಳು ಜೋರಾಗಿ ಕೂಗುತ್ತಾ, ಕಿರುಚಾಡುತ್ತಾ, ಕನ್ನಡ ಬಾವುಟಗಳನ್ನು ಹಾರಿಸುತ್ತಾ ಪಟಾಕಿಗಳನ್ನು ಸಿಡಿಸಿ ಶಿಳ್ಳೆ ಹಾಕುತ್ತಾ ಸಂತಸ ವ್ಯಕ್ತಪಡಿಸುತ್ತಿದ್ದರು. ವಾಹನಗಳು ಶಬ್ಧ ಮಾಡುತ್ತಿದ್ದರೂ ಮುಂದೆ ಸಾಗದಂತೆ ಅಭಿಮಾನಿಗಳು ಅಡ್ಡಿಯಾಗಿದ್ದರು. ವೃತ್ತದಲ್ಲಿಯೇ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದರು.
ಇದರಿಂದ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಯಿತು. ಸುಮಾರು ಅರ್ಧಗಂಟೆಯಾದರೂ ಅಭಿಮಾನಿಗಳು ವೃತ್ತ ಬಿಟ್ಟು ಕದಲಲಿಲ್ಲ. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸುವುದರೊಂದಿಗೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.‘ಈ ಸಲಾ ಕಪ್ ನಮ್ದೇ’:ನಗರದ ಹೊಸಹಳ್ಳಿ ವೃತ್ತದಲ್ಲೂ ಆರ್‌ಸಿಬಿ ಗೆಲುವಿಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಹದಿನೆಂಟು ವರ್ಷಗಳ ಬಳಿಕ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಕ್ಕೆ ವಿಜಯೋತ್ಸವ ಆಚರಿಸಿದರು. ಪಟಾಕಿಗಳನ್ನು ಸಿಡಿಸುತ್ತಾ, ‘ಕಿಂಗ್ ಕೊಹ್ಲಿ’ ಭಾವಚಿತ್ರವನ್ನು ಹಿಡಿದು ಮೆರೆಸಿದರು. ‘ಈ ಸಲಾ ಕಪ್ ನಮ್ದೇ’ ಎಂದು ಜೋರಾಗಿ ಕೂಗಿ ಸಂತಸ ವ್ಯಕ್ತಪಡಿಸಿದರು. ೧೮ ವರ್ಷಗಳಾದರೂ ಆರ್‌ಸಿಬಿ ಟೀಂ ಬಿಡದೆ ತಾಳ್ಮೆಯಿಂದ ಆಡಿದ ವಿರಾಟ್ ಕೊಹ್ಲಿಯನ್ನು ಕೊಂಡಾಡಿದರು. ಕೊಹ್ಲಿ ಕೂಡ ಸಮಯಪ್ರಜ್ಞೆಯಿಂದ ಆಡಿ ೪೩ ರನ್ ಗಳಿಸುವುದರೊಂದಿಗೆ ತಂಡದ ಪರ ಉತ್ತಮ ಆಟವಾಡಿದರು. ಕ್ಷೇತ್ರರಕ್ಷಣೆ, ಬಿಗಿಯಾದ ಬೌಲಿಂಗ್‌ನಿಂದಾಗಿ ಆರ್‌ಸಿಬಿ ಪಂಜಾಬ್ ಕಿಂಗ್ಸ್‌ನ್ನು ಮಣಿಸಿ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡು ಅಭಿಮಾನಿಗಳು ಹಬ್ಬ ಆಚರಿಸುವಂತೆ ಮಾಡಿದ್ದಾರೆ. ‘ಐ ಲವ್ ಯೂ ಕೊಹ್ಲಿ’..., ‘ಐ ಲವ್ ಯೂ ಆರ್‌ಸಿಬಿ’...., ‘ಮುಂದಿನ ಐಪಿಎಲ್‌ನಲ್ಲೂ ನಮ್ದೇ ಹವಾ’.... ಎಂದೆಲ್ಲಾ ಕೂಗುತ್ತಾ, ಹರ್ಷೋದ್ಘಾರದೊಂದಿಗೆ ಸಂಭ್ರಮಿಸಿದರು.
ಮಧ್ಯರಾತ್ರಿ ಸಂಭ್ರಮ ಇಮ್ಮಡಿ:ವಿಶೇಷವೆಂದರೆ ಯುವತಿಯರು, ಮಕ್ಕಳು ಕೂಡ ಮಧ್ಯರಾತ್ರಿಯಾದರೂ ಹೊಸಹಳ್ಳಿ ಸರ್ಕಲ್‌ಗೆ ಆಗಮಿಸಿ ಕುಣಿದು ನಲಿದಾಡುವುದರೊಂದಿಗೆ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಿದರು.
ಮಂಡ್ಯದ ಹಲವು ಬಡಾವಣೆಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ರಸ್ತೆಗಿಳಿದು ಪಟಾಕಿ ಸಿಡಿಸಿದರು. ಆರ್‌ಸಿಬಿ ಗೆಲುವು ಸಾಧಿಸುವ ವಿಶ್ವಾಸದೊಂದಿಗೆ ಹಲವರು ಮುಂಚಿತವಾಗಿಯೇ ಕೇಕ್ ಸಿದ್ಧಪಡಿಸಿಟ್ಟುಕೊಂಡು ಪಂದ್ಯ ಗೆದ್ದ ಖುಷಿಯನ್ನು ಕೇಕ್ ಕತ್ತರಿಸುವುದರೊಂದಿಗೆ ಹಂಚಿಕೊಂಡರು. ಯುವಕರೇ ಅಧಿಕ ಸಂಖ್ಯೆಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.ಫೈನಲ್ ಪಂದ್ಯ ಆರಂಭವಾಗುವ ವೇಳೆಗೆ ನಗರದೊಳಗೆ ಜನರ ಸಂಚಾರ ಕಡಿಮೆಯಾಗಿತ್ತು. ಪಂದ್ಯ ಮುಗಿದ ಬಳಿಕ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಭಿಮಾನಿಗಳು ಜಯಚಾಮರಾಜೇಂದ್ರ ವೃತ್ತ, ಹೊಸಹಳ್ಳಿ ವೃತ್ತ ಹಾಗೂ ಬಡಾವಣೆಗಳ ಅಲ್ಲಲ್ಲಿ ನೆರೆದು ಒಂದೇ ಸಮನೆ ಪಟಾಕಿ ಸಿಡಿಸಿದರು. ಅಕ್ಕ-ಪಕ್ಕದ ಮನೆಗಳಲ್ಲಿ ನಿದ್ರೆಯಲ್ಲಿದ್ದ ಜನರು ಎಚ್ಚೆತ್ತು ಏನಾಯಿತು ಎಂದು ಅಚ್ಚರಿಯಿಂದ ನೋಡುತ್ತಿದ್ದರು.
ಪಂಜಾಬ್ ಕಿಂಗ್ಸ್ ವಿರುದ್ಧ ಸಾಧಿಸಿದ ಜಯದಿಂದ ಆರ್‌ಸಿಬಿ ಹೊಸ ಕ್ರೇಜ್ ಹುಟ್ಟಿಸಿತ್ತು. ಆ ಕ್ರೇಜ್ ಜಿಲ್ಲಾದ್ಯಂತ ವ್ಯಾಪಕವಾಗಿ ಹರಡಿತ್ತು. ಎಲ್ಲೆಡೆಯಿಂದ ಆರ್‌ಸಿಬಿ, ಆರ್‌ಸಿಬಿ ಎನ್ನುತ್ತಲೇ ಹೆಜ್ಜೆ ಹಾಕುತ್ತಾ, ಕುಣಿದಾಡಿ, ನಲಿದಾಡಿ ಅಭಿಮಾನಿಗಳು ಸಂಭ್ರಮಿಸಿದರು.)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))