ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ । ದಲಿತ ಸಮಾಜದ ಪ್ರಭಾವಿ ನಾಯಕ: ರಂಗಸ್ವಾಮಿ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಅವರಿಗೆ ನೂತನ ಮುಖ್ಯಮಂತ್ರಿಗಳಾಗಿ ನಿಯೋಜನೆಗೊಂಡಿರುವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಮಂತ್ರಿ ಮಂಡಲದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂದು ಎಚ್.ಸಿ. ಮಹಾದೇವಪ್ಪ ಅಭಿಮಾನಿಗಳ ಸಂಘ ಆಗ್ರಹಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಶ್ರೀಕಂಠಯ್ಯ ವೃತ್ತದ ಮಾರ್ಗವಾಗಿ ಕೆ.ಆರ್. ಸರ್ಕಲ್ ಮುಖಾಂತರ ಮೆರವಣಿಗೆ ನಡೆಸಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಎಸ್.ಸಿ. ಮಹದೇವಪ್ಪಗೆ ಜೈಕಾರ ಕೂಗುವ ಮೂಲಕ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.ನಂತರ ಎಂ.ಆರ್. ರಂಗಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಎಚ್.ಸಿ. ಮಹಾದೇವಪ್ಪ ಅವರು ತುಂಬಾ ನಿಷ್ಠೆಯಿಂದ ಕೆಲಸ ಮಾಡುತ್ತಾ ಬಂದಿದ್ದಾರೆ, ಹಳೆ ಮೈಸೂರು ಭಾಗದ ದಲಿತ ಸಮಾಜದ ಪ್ರಭಾವಿ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಿಷ್ಠಾವಂತ ನಾಯಕರಾಗಿ ಜನಸೇವೆ ಮಾಡುತ್ತಾ ಬಂದಿದ್ದಾರೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಸಾರ್ವಜನಿಕರೊಂದಿಗೆ ತುಂಬಾ ಬಾಂಧವ್ಯದಿಂದ ಸಕ್ರಿಯವಾಗಿ ಜನಪರವಾದ ಸೇವೆ ಸಲ್ಲಿಸುತ್ತಾ ಬರುತ್ತಿರುವ ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಅವರಿಗೆ ಡಿಸಿಎಂ ಸ್ಥಾನವನ್ನು ನೀಡಬೇಕು ಎಂದು ಒತ್ತಾಯ ಮಾಡಿದರು.
ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟಲು ಮಹಾದೇವಪ್ಪನವರಿಗೆ ಡಿಸಿಎಂ ಮಾಡುವ ಮೂಲಕ ಜನಸೇವೆ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯ ಮಾಡಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಸ್.ಎಲ್. ದೊರೆರಾಜು, ಕರವೇ ಮುಖಂಡ ಬಿ.ಪಿ. ಧರ್ಮರಾಜ್, ತಾಲೂಕು ಆಶ್ರಯ ಸಮಿತಿಯ ಮಾಜಿ ಸದಸ್ಯರಾದ ಕೆ.ಎನ್. ನಾಗೇಶ್, ತಾಲೂಕು ಭೂ ಮಂಜೂರಾತಿ ಕಮಿಟಿಯ ಮಾಜಿ ಸದಸ್ಯರಾದ ಮತಿಗಟ್ಟ ರಂಗಸ್ವಾಮಿ, ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶ್ರವಣೇರಿ ದೊರೆರಾಜು, ತಾಲೂಕು ಆರೋಗ್ಯ ರಕ್ಷಾ ಸಮಿತಿಯ ನಿರ್ದೇಶಕರಾದ ನಾಗಸಮುದ್ರ ಬಾಲು, ಕೆಡಿಪಿ ಸದಸ್ಯರಾದ ಕಬ್ಬಾಳು ಮಹೇಶ್, ತಾಲೂಕು ಎಸ್.ಸಿ., ಎಸ್.ಟಿ. ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ಸಂತೋಷ್ ನಲ್ಲೂರು, ದಲಿತಪರ ಸಂಘಟನೆಗಳ ಹೋರಾಟಗಾರರಾದ ಸಿ ಪಿ ಮಂಜುನಾಥ್, ಎ.ಕೆ. ಕಾಲೋನಿ ಕೃಷ್ಣ, ಗಾಯಕ ಮಂಜುನಾಥ್, ನವೀನ್ ರಂಗಸ್ವಾಮಿ, ಕುರುವಂಕ ಮಂಜುನಾಥ್, ಮಿಮಿಕ್ರಿಗೋವಿಂದ , ಡೆಕೋರೇಷನ್ ಹರೀಶ್, ಪ್ರಸನ್ನ ಹೊಸೂರು, ಹರಿಪ್ರಸಾದ್, ಡೊನಾಲ್ಡ್ ರಂಗಸ್ವಾಮಿ, ಗಾಯತ್ರಿ ಬಡಾವಣೆ ಮಂಜುನಾಥ್, ಜಿ ಕೆ ಮಂಜುನಾಥ್, ಸ್ವಾಗತಹಳ್ಳಿ ಮನೋಹರ್, ಎ.ಕೆ. ಕಾಲೋನಿ ರವಿರಾಜ್, ಸೇರಿದಂತೆ ಇತರರು ಹಾಜರಿದ್ದರು.