ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿಶ್ವವಿದ್ಯಾನಿಲಯ ಮುದ್ರಣಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ಈ ಮಾಸಾಂತ್ಯಕ್ಕೆ ನಿವೃತ್ತರಾಗುತ್ತಿರುವ ಪುರುಷೋತ್ತಮ ಅವರಿಗೆ ಮಾ.23 ರಂದು ಬೆಳಗ್ಗೆ 10.30ಕ್ಕೆ ನಗರದ ಕೃಷ್ಣಮೂರ್ತಿಪುರಂನ ಎರಡನೇ ಕ್ರಾಸಿನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಸಭಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ.ಕಲ್ಪತರು ಚಾರಿಟಬಲ್ ಟ್ರಸ್ಟ್, ಮೈಸೂರು ವಿವಿ ಮುದ್ರಣಾಲಯ ನೌಕರರ ವತಿಯಿಂದ ಏರ್ಪಡಿಸಿರುವ ಈ ಸಮಾರಂಭವನ್ನು ಖ್ಯಾತ ಹೃದ್ರೋಗ ತಜ್ಞ ಡಾ.ವಿ. ಲಕ್ಷ್ಮೀನಾರಾಯಣ ಉದ್ಘಾಟಿಸುವರು. ಕರ್ನಾಟಕ ವಸತಿ ಶಿಕ್ಷಣ ಶಾಲೆಗಳ ಸಂಘದ ಸಲಹೆಗಾರ ಡಾ.ಎಸ್. ತುಕಾರಾಂ ಆಶಯ ಭಾಷಣ ಮಾಡುವರು.
ಸಾಹಿತಿ ಪ್ರೊ.ಸಿ. ನಾಗಣ್ಣ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಎನ್. ಚಿನ್ನಸ್ವಾಮಿ ಸೋಸಲೆ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯಅತಿಥಿಗಳಾಗಿರುವರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಂ. ಮಾದಯ್ಯ ಅವರು ಗೌರವ ಸಮರ್ಪಿಸುವರು. ಮೈಸೂರು ವಿವಿ ಮುದ್ರಣಾಲಯ ನಿರ್ದೇಶಕ ಎಸ್. ಸತೀಶ್ ಉಪಸ್ಥಿತರಿರುವರು. ಕಲ್ಪತರು ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಡಾ.ಅಮ್ಮಸಂದ್ರ ಸುರೇಶ್ ಅಧ್ಯಕ್ಷತೆ ವಹಿಸುವರು.ಸಂಕ್ಷಿಪ್ತ ಪರಿಚಯ
ನಗರದ ಅಶೋಕಪುರಂನ ವಿ. ವೆಂಕಟರಾಮಯ್ಯ ಹಾಗೂ ಪುಟ್ಟತಾಯಮ್ಮ ಅವರ ತೃತೀಯ ಪುತ್ರರಾಗಿ 1964 ಮಾ. 5 ರಂದು ಜನಿಸಿದ ಪುರುಷೋತ್ತಮ ಅಲ್ಲಿನ ಮಿಷನ್ ಸ್ಕೂಲ್ ಮತ್ತು ಎನ್‌ಟಿಎಂಎಸ್ ಶಾಲೆಯಲ್ಲಿ ಪ್ರಾಥಮಿಕ, ಸಿದ್ದಾರ್ಧ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಶಾರದಾವಿಲಾಸ ಕಾಲೇಜಿನಲ್ಲಿ ಪದವಿಪೂರ್ವ, ಮೈವಿವಿ ಸಂಜೆ ಕಾಲೇಜಿನಲ್ಲಿ ಪದವಿ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.ಓದಿನೊಂದಿಗೆ ವಿವಿ ಮುದ್ರಣಾಲಯದಲ್ಲಿ ದಿನಗೂಲಿ ನೌಕರರಾಗಿ ಕಂಪೋಸಿಟರ್, ಗ್ರೇಡ್-2 ಆಗಿ ಸುಮಾರು ಏಳು ವರ್ಷಗಳವರೆಗೆ ಕೆಲಸ ಮಾಡಿದರು. ನಂತರ ಅಲ್ಲಿಯೇ 1992ರ ಅ.1 ರಿಂದ ಕಾಯಂ ನೌಕರರಾದರು. ಆರು ವರ್ಷಗಳ ನಂತರ ಅಂದರೆ 1998ರ ಏ.25 ಪ್ರೂಫ್ ರೀಡರ್ ಗ್ರೇಡ್-2ಗೆ ಬಡ್ತಿ ಪಡೆದರು. ಹದಿಮೂರು ವರ್ಷಗಳ ನಂತರ ಅಂದರೆ 2011 ಫೆ.1 ರಂದು ಮೇಲ್ವಿಚಾರಕರಾಗಿ ಬಡ್ತಿ ಹೊಂದಿದರು. 38 ವರ್ಷ, 4 ತಿಂಗಳು, 10 ದಿನಗಳ ಸೇವೆಯ ನಂತರ ಮಾ.30 ರಂದು ವಯೋ ನಿವೃತ್ತಿ ಹೊಂದುತ್ತಿದ್ದಾರೆ.
ತಮ್ಮ ಸೇವಾವಧಿ ಉದ್ದಕ್ಕೂ ವಿವಿಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಎಲ್ಲರ ವಿಶ್ವಾಸ ಗಳಿಸಿದ್ದಾರೆ. ವಿವಿಯ ಹೊರಗೂ ಗಣ್ಯರು, ವಿದ್ವಾಂಸರು, ಸಾಹಿತಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವದಡಿ ಕೆಲಸ ಮಾಡುತ್ತಾ, ಮೇರು ವ್ಯಕ್ತಿಯಾಗಿದ್ದಾರೆ.ಸರಳ, ಸಜ್ಜನರಾದ ಪುರುಷೋತ್ತಮ ಸಮಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯ ಸೇರಿದಂತೆ ಸಂವಿಧಾನದ ಆಶಯಗಳಲ್ಲಿ ಅಪರಿಮಿತ ವಿಶ್ವಾಸ ಹೊಂದಿದವರು. ತಮ್ಮ ಪುತ್ರಿಯ ವಿವಾಹವನ್ನು ಕುವೆಂಪು ಅವರ ಮಂತ್ರಮಾಂಗಲ್ಯದ ಪ್ರಕಾರ ಸರಳವಾಗಿ ನೆರವೇರಿಸಿ, ಇತರರಿಗೆ ಮಾದರಿಯಾಗಿದ್ದಾರೆ.
ವಿವಿಧ ಸಂಘಟನಗಳಲ್ಲಿ ಭಾಗಿಪುರುಷೋತ್ತಮ ಅವರು ಕಲ್ಪತರು ಚಾರಿಟಬಲ್ ಟ್ರಸ್ಟಿನ ಖಜಾಂಚಿಯಾಗಿದ್ದಾರೆ. ಈ ಟ್ರಸ್ಟಿನ ಪದಾಧಿಕಾರಿಗಳಾದ ಡಾ. ಅಮ್ಮಸಂದ್ರ ಸುರೇಶ್, ಪಿ. ಕುಮಾರ್, ಜಗದೀಶ್ ಆರ್. ತುಂಗಾ, ಕೆಂಡಗಣ್ಣಯ್ಯ, ಮಹಿಮಾ ಶ್ರೀನಿವಾಸ್, ನವೀನ್, ಲಕ್ಷ್ಮೀಕಾಂತ್ ಅವರೊಂದಿಗೆ ಸೇರಿ, ಎಚ್.ಡಿ. ಕೋಟೆ ತಾಲೂಕಿನ ಆನೆಮಾಳ ಹಾಡಿ ಹಾಗೂ ಸೋನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದು, ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.
ಪದ್ಮಶ್ರೀ ಪುರಸ್ಕೃತ ಆದಿವಾಸಿ ನಾಯಕ ಸೋಮಣ್ಣ ಅವರನ್ನು ಮೈಸೂರಿಗೆ ಕರೆಸಿ, ಅಶೋಕಪುರಂ ಪೊಲೀಸ್ ಠಾಣೆ ಎದುರು ಇರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಎದುರು ಎಲ್ಲಾ ಪದಾಧಿಕಾರಿಗಳೊಂದಿಗೆ ಸೇರಿ, ಗೌರವಿಸಿದ್ದಾರೆ.ಇದಲ್ಲದೇ ಕುವೆಂಪುನಗರ ಭೀಮ ಬಳಗ, ಮೈಸೂರು ವಿವಿ ಎಸ್.ಸಿ, ಎಸ್.ಟಿ ನೌಕರರ ಸಂಘ, ಅಶೋಕಪುರಂನ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ, ಪ.ಜಾತಿ ಮತ್ತು ವರ್ಗ ನೌಕರರ ಪರಿಷತ್‌ನಲ್ಲಿ ತೊಡಗಿಸಿಕೊಂಡು, ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಆಸಕ್ತರು ಪುರುಷೋತ್ತಮ, ಮೊ. 94804 78162 ಸಂಪರ್ಕಿಸಬಹುದು.