ಸಾರಾಂಶ
ರಿಯೊ ಇನ್ಮುಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುವ 4 ಸದಸ್ಯರ ಕೆ-9 ಸ್ಕ್ವಾಡ್‌ನ ಭಾಗವಾಗಿರಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಶ್ವಾನ ತಂಡದಲ್ಲಿದ್ದ ಲ್ಯಾಬ್ರಡಾರ್ ‘ಜೂಲಿ’ ಶ್ವಾನ ನಿವೃತ್ತಿಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಇದೇ ಸಂದರ್ಭ ಜ್ಯೂಲಿ ಬದಲಿಗೆ 11 ತಿಂಗಳ ಲ್ಯಾಬ್ರಡಾರ್ ‘ರಿಯೊ’ ಶ್ವಾನ ಭದ್ರತಾ ತಂಡಕ್ಕೆ ಸೇರ್ಪಡೆಗೊಂಡಿತು.ಹಿರಿಯ ಕಮಾಂಡೆಂಟ್ ಮತ್ತು ಮುಖ್ಯ ಏರೋಡ್ರೋಮ್ ಭದ್ರತಾ ಅಧಿಕಾರಿ ವೀರೇಂದ್ರ ಮೋಹನ್ ಜೋಶಿ ಮತ್ತು ಸಿಐಎಸ್ಎಫ್‌ನ ಇತರ ಅಧಿಕಾರಿಗಳು ಜ್ಯೂಲಿಯ ಅಚಲವಾದ ನಿಷ್ಠೆಗಾಗಿ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಿವೃತ್ತಿಯಾಗಿರುವ ಜ್ಯೂಲಿಯನ್ನು ಆಕೆಯ ಹ್ಯಾಂಡ್ಲರ್ ಸಿಐಎಸ್‌ಎಫ್ ಯೋಧ ಕುಮಾರ ಅವರು ದತ್ತು ಸ್ವೀಕಾರ ಮಾಡಿದ್ದಾರೆ.ಇದೀಗ ಹೊಸದಾಗಿ ಭದ್ರತಾ ತಂಡವನ್ನು ಸೇರಿಕೊಂಡಿರುವ ನಾಯಿಮರಿ ರಿಯೊಗೆ ರಾಂಚಿಯಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಶ್ವಾನ ಕೇಂದ್ರದಲ್ಲಿ ಕಠಿಣ ತರಬೇತಿ ನೀಡಲಾಗಿದೆ. ರಿಯೊವನ್ನು ಭದ್ರತಾ ತಂಡಕ್ಕೆ ಸ್ವಾಗತಿಸುವ ಸಲುವಾಗಿ ಜೋಶಿ ಅವರು ಹ್ಯಾಂಡ್ಲರ್ ದಲ್ಬೀರ್ ಸಿಂಗ್ ಸಮ್ಮುಖದಲ್ಲಿ ರಿಯೊ ಕಾಲರ್‌ಗೆ ಹೊಸ ಹಗ್ಗವನ್ನು ಜೋಡಿಸಿದರು. ರಿಯೊ ಇನ್ಮುಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುವ 4 ಸದಸ್ಯರ ಕೆ-9 ಸ್ಕ್ವಾಡ್‌ನ ಭಾಗವಾಗಿರಲಿದೆ.