ಧೈರ್ಯವಾಗಿ ಸಮಸ್ಯೆ ಎದುರಿಸಲು ಶಿಕ್ಷಣ ಸಹಕಾರಿ

| Published : May 11 2025, 01:34 AM IST

ಸಾರಾಂಶ

ಮುಂದಿನ ಸ್ಪರ್ಧಾತ್ಮಕ ಯುಗಕ್ಕೆ ಸಜ್ಜಾಗಲು ಈಗಿನಿಂದಲೇ ಪರಿಶ್ರಮ ವಹಿಸಿ ಓದಬೇಕು. ವಿದ್ಯಾರ್ಥಿನಿಯರಿಗೆ ಪದವಿ ವ್ಯಾಸಂಗದ ಪ್ರತಿ ಹಂತವೂ ಮುಖ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಬದುಕಿನಲ್ಲಿ ಎಷ್ಟೇ ಕಷ್ಟ ಸಮಸ್ಯೆಗಳು ಎದುರಾದರೂ ಕೂಡ ಅವೆಲ್ಲವನ್ನು ಧೈರ್ಯವಾಗಿ ಎದುರಿಸಲು ಶಿಕ್ಷಣವು ನಮಗೆ ಜೊತೆಯಾಗಿ ನಿಲ್ಲುತ್ತದೆ ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ತಿಳಿಸಿದರು.

ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಅಂತಿಮ ಬಿ.ಎ, ಬಿ.ಕಾಂ. ಪದವಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಎಂದರು.

ಮುಂದಿನ ಸ್ಪರ್ಧಾತ್ಮಕ ಯುಗಕ್ಕೆ ಸಜ್ಜಾಗಲು ಈಗಿನಿಂದಲೇ ಪರಿಶ್ರಮ ವಹಿಸಿ ಓದಬೇಕು. ವಿದ್ಯಾರ್ಥಿನಿಯರಿಗೆ ಪದವಿ ವ್ಯಾಸಂಗದ ಪ್ರತಿ ಹಂತವೂ ಮುಖ್ಯವಾಗಿದ್ದು, ಬಹಳ ಜಾಗರೂಕತೆಯಿಂದ ಹೆಜ್ಜೆಯಿಡಬೇಕು ಎಂದು ಅವರು ಹೇಳಿದರು.

ಅಂತಿಮ ಬಿಎ ಹಾಗೂ ಬಿ.ಕಾಂ. ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ನಂತರ ಅಂತಿಮ ಬಿ.ಎ. ಹಾಗೂ ಬಿ.ಕಾಂ. ವಿದ್ಯಾರ್ಥಿನಿಯರಿಗೆ ಕಿರಿಯ ವಿದ್ಯಾರ್ಥಿನಿಯರು ಉಡುಗೊರೆಯನ್ನು ನೀಡಿ, ಆತ್ಮೀಯವಾಗಿ ಬೀಳ್ಕೊಟ್ಟರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಪ್ರಸಾದಮೂರ್ತಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಎಂ.ಎನ್. ಸೂರಜ್ ಇದ್ದರು. ಲಕ್ಷ್ಮೀ ಪ್ರಾರ್ಥಿಸಿದರು. ಕಾವೇರಿ ಸ್ವಾಗತಿಸಿದರು. ರಚನಾ ನಿರೂಪಿಸಿದರು. ಜಿ. ರಕ್ಷಿತಾ ವಂದಿಸಿದರು.