ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಬಸವಣ್ಣನವರ ತತ್ವ, ಕಾಯಕ, ದಾಸೋಹ, ಸಮಾನತೆಗೆ ಜಾಗತಿಕ ಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ ನಮಗೆಲ್ಲ ಹರ್ಷ ಮತ್ತು ಹೆಮ್ಮೆಯ ಸಂಗತಿ. ವಚನ ಸಾಹಿತ್ಯವನ್ನು ಸುಮಾರು 42 ಭಾಷೆಗಳಲ್ಲಿ ಅನುವಾದ ಮಾಡಿದ್ದರಿಂದಾಗಿ ಬಸವಣ್ಣನವರ ಚಿಂತನೆಗಳ ಮೌಲ್ಯಗಳು ವಿಶ್ವಕ್ಕೆ ತಲುಪಿ ಮಾದರಿಯಾಗಿವೆ ಎಂದು ಗುರುಮಠಕಲ್‌ನ ಖಾಸಾಮಠದ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಗಳು ಹೇಳಿದರು.ಮೇ 19ರಂದು ದುಬೈನಲ್ಲಿ ನಡೆಯುವ ಬಸವ ಜಯಂತಿ ಆಚರಣೆಗೆ ಪ್ರವಾಸ ಕೈಗೊಂಡ ಹಿನ್ನೆಲೆ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಖಾಸಾಮಠದ ಭಕ್ತರಿಂದ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡಿದರು.
ಯುಎಇ ಬಸವ ಸಮಿತಿಯವರು ಜೆ.ಎಸ್.ಎಸ್. ಪ್ರೈವೇಟ್ ಸ್ಕೂಲ್ ಅಲ್ ಸಫಾ ದುಬೈನಲ್ಲಿ ಆಯೋಜಿಸಿರುವ 17ನೇ ಬಸವ ಜಯಂತಿ ಆಚರಣೆಗೆ ವಿಶೇಷ ಅತಿಥಿಗಳಾಗಿ ತಮಗೆ ಆಹ್ವಾನ ಬಂದ ನಿಮಿತ್ತ ದುಬೈಗೆ ತೆರಳುತ್ತಿದ್ದೇವೆ. ಬಸವಣ್ಣ ಮತ್ತು ಶರಣರ ವಚನಗಳ ತತ್ವ ಚಿಂತನೆಗಳು ಪ್ರಸ್ತುತ ಕಾಲದಲ್ಲಿ ಪ್ರಪಂಚದ ಎಲ್ಲಾ ದೇಶಗಳಲ್ಲಿ ಪ್ರಭಾವ ಬೀರಿ ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿ ಬಸವ ಜಯಂತಿ ಆಚರಣೆ ಮಾಡುತ್ತಿರುವುದು ಬಸವಾದಿ ಶರಣರಿಗೆ ಸಿಗುತ್ತಿರುವ ಜಾಗತಿಕ ಗೌರವವಾಗಿದೆ ಎಂದರು.ಸುತ್ತೂರು ಮಠದ ಶಿವರಾತ್ರೀಶ್ವರ ದೇಶಿ ಕೇಂದ್ರ ಮಹಾಸ್ವಾಮಿಗಳು ಆಶೀರ್ವಾದ ನೀಡಲಿದ್ದು, ಸಿರಿಗೇರೆಯ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ವೀರಶೈವ ಲಿಂಗಾಯತ ಮಾಹಾಸಭಾ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ನವರಿಗೆ ಬಸವ ಭೂಷಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಮುಖಂಡ ಸಂಜೀವಕುಮಾರ ಚಂದಾಪೂರ ಮಾತನಾಡಿ, ದುಬೈನಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪೂಜ್ಯರು ಭಾಗವಹಿಸುತ್ತಿರುವುದು ಖಾಸಾಮಠದ ಭಕ್ತರಿಗೆ ತುಂಬಾ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಲಂಡನ್ ಸೇರಿ ವಿದೇಶಗಳಿಗೆ ಹೋಗಿ ಗಡಿನಾಡಿನ ಖಾಸಾಮಠದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸಿದರು.ಯಾನಾಗುಂದಿಯ ನಾಗಮ್ಮ ಮುರುಗಯ್ಯ ವಸ್ತ್ರದ ದಂಪತಿ ಸೇರಿದಂತೆ ಬಿ.ಬಿ. ಸ್ವಾಮಿ, ನರಸರೆಡ್ಡಿ ಪೊಲೀಸ್ ಪಾಟೀಲ್, ನಾಗಭೂಷಣ ಅವಂಟಿ, ವೀರಣ್ಣ ಬೇಲಿ, ರವೀಂದ್ರರೆಡ್ಡಿ ಮಾಲಿಪಾಟೀಲ್, ಚಂದುಲಾಲ ಚೌಧರಿ, ಆನಂದ ಯದ್ಲಾಪೂರ, ರಘುನಾಥರೆಡ್ಡಿ ನಜರಾಪೂರ, ಮಲ್ಲೇಶಯ್ಯ ಸ್ವಾಮಿ, ಸುದರ್ಶನ ಗೌಡ, ಸುಧೀರ್ ಘಾಟೆ, ನಾಗರಾಜ್ ಕಲಾಲ್, ಬಸವರಾಜ ಪಸಾರ, ನರಸರೆಡ್ಡಿ ಇಟಕಲ, ಜಿ. ತಮ್ಮಣ್ಣ, ಶಿವಕುಮಾರ ಜಾಡರ್, ಅನಂತಪ್ಪ ಬೋಯಿನ್, ಗಿರಿಧರರೆಡ್ಡಿ, ಸತೀಶ್ ತಿವಾರಿ, ಲಾಲಪ್ಪ ತಲಾರಿ, ವೆಂಕಟಪ್ಪ ಅವಂಗಾಪೂರ, ಮಲ್ಲಿಕಾರ್ಜುನ ಪೂಜಾರಿ, ನರಸೀಮುಲು ಇದ್ದರು.