ಹಿಂದೂ ಮಹಾಗಣಪತಿಗೆ ಅದ್ಧೂರಿ ವಿದಾಯ

| Published : Sep 28 2024, 01:21 AM IST

ಸಾರಾಂಶ

ಮಹಿಳೆಯರು ಮತ್ತು ಮಕ್ಕಳು, ಬಪ್ಪರೇ ಬಪ್ಪ ಗಣಪತಿ ಬಪ್ಪಾ, ಹಿಂದೂ ಮಹಾಗಣಪತಿ ಮಹರಾಜಕೀ... ಎಂಬ ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಕೇಸರಿ ಧ್ವಜ, ಬಿಳಿ ಧಿರಿಸು ತೊಟ್ಟು ಕೇಸರಿ ಶಲ್ಯೆ ಹಾಕಿಕೊಂಡು ಯುವಕರು ಕುಣಿದು ಮೆರವಣಿಗೆಗೆ ಮತ್ತಷ್ಟು ಮೆರಗು ತಂದರು.

ಹುಬ್ಬಳ್ಳಿ:

ನವನಗರ ಹಾಗೂ ಅಶೋಕನಗರದಲ್ಲಿ 21 ದಿನ ಪೂಜಿಸಲ್ಪಟ್ಟ ಹಿಂದೂ ಮಹಾಗಣಪತಿಯನ್ನು ಗಣೇಶೋತ್ಸವ ಮಂಡಳಿ ನೇತೃತ್ವದಲ್ಲಿ ಶುಕ್ರವಾರ ತಡರಾತ್ರಿ ವರೆಗೂ ಅದ್ಧೂರಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.

ಮೆರವಣಿಗೆಯುದ್ದಕ್ಕೂ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಕರು, ಮಹಿಳೆಯರು ಮತ್ತು ಮಕ್ಕಳು, ಬಪ್ಪರೇ ಬಪ್ಪ ಗಣಪತಿ ಬಪ್ಪಾ, ಹಿಂದೂ ಮಹಾಗಣಪತಿ ಮಹರಾಜಕೀ... ಎಂಬ ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಕೇಸರಿ ಧ್ವಜ, ಬಿಳಿ ಧಿರಿಸು ತೊಟ್ಟು ಕೇಸರಿ ಶಲ್ಯೆ ಹಾಕಿಕೊಂಡು ಯುವಕರು ಕುಣಿದು ಮೆರವಣಿಗೆಗೆ ಮತ್ತಷ್ಟು ಮೆರಗು ತಂದರು.

ನವನಗರದ ಪಂಚಾಕ್ಷರಿನಗರದ ಮಹಾವೀರ ವೃತ್ತದಲ್ಲಿ ಹುಬ್ಬಳ್ಳಿ-ಧಾರವಾಡ ಹಿಂದೂ ಮಹಾಗಣಪತಿ ಉತ್ಸವ ಮಂಡಳಿ ಹಾಗೂ ಅಶೋಕನಗರದ ಬ್ರಿಡ್ಜ್‌ ಬಳಿ ಗಣೇಶೋತ್ಸವ ಮಂಡಳಿ ಪ್ರತಿಷ್ಠಾಪಿಸಿದ್ದ 21 ದಿನದ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿತ್ತು. 21 ದಿನಗಳ ಕಾಲವೂ ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜೆ, ಪುನಸ್ಕಾರದ ಜತೆಗೆ ವಿವಿಧ ಕ್ರೀಡಾ ಚಟುವಟಿಕೆ ಹಮ್ಮಿಕೊಂಡ ಗಣೇಶೋತ್ಸವ ಮಂಡಳಿ ಪದಾಧಿಕಾರಿಗಳು ಶುಕ್ರವಾರ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಿದರು.

ನವನಗರದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಗೆ ನವನಗರದ ಕಾಶಿ ಶಾಖಾ ಮಠದ ರಾಜಶೇಖರ ಶಿವಾಚಾರ್ಯರು ಚಾಲನೆ ನೀಡಿದರು. ನವನಗರ, ಗಾಮನಗಟ್ಟಿ, ರಾಯಾಪುರ, ಸುತಗಟ್ಟಿ, ಪಂಚಾಕ್ಷರ ನಗರ, ಕೆಸಿಸಿ ಲೇಔಟ್‌ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಪ್ಪಾಜಿ ಜನಸೇವಾ ಸೇವಾ ಟ್ರಸ್ಟ್‌, ನವಶಕ್ತಿ ಮಹಿಳಾ ಮಂಡಳದ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

ಅದರಂತೆ ಇಲ್ಲಿಯ ಅಶೋಕನಗರದ ಬ್ರಿಡ್ಜ್‌ನಿಂದ ಆರಂಭಗೊಂಡ ಹಿಂದೂ ಮಹಾಗಣಪತಿ ಮೆರವಣಿಗೆಗೆ ಹು-ಧಾ ಸೆಂಟ್ರಲ್‌ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಮೆರವಣಿಗೆ ದೇಶಪಾಂಡೆನಗರ, ಕಾಟನ್‌ ಮಾರ್ಕೆಟ್‌, ಬಸವವನ ಮಾರ್ಗವಾಗಿ ಗ್ಲಾಸ್‌ ಬಳಿಯ ಗಣೇಶ ವಿಸರ್ಜನಾ ಬಾವಿಗೆ ತೆರಳಿತು. ಇಲ್ಲಿಯೂ ಕೂಡಾ ಕೇಸರಿ ಧ್ವಜ ಹಿಡಿದು ಡಿಜೆ ಸದ್ದಿಗೆ ಯುವಕರು, ಮಹಿಳೆಯರು ಕುಣಿದು ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನವನಗರದ ಮಹಾವೀರ ವೃತ್ತದಿಂದ ಆರಂಭಗೊಂಡ ಮೆರವಣಿಗೆ, ನಮೋಭಾರತ ಸರ್ಕಲ್‌, ಪುನೀತ್‌ ರಾಜಕುಮಾರ ಸರ್ಕಲ್‌, ಕರ್ನಾಟಕ ವೃತ್ತ, ಬಸವೇಶ್ವರ ಸರ್ಕಲ್‌, ಬಾಲಮಂದಿರ ದೇವಸ್ಥಾನದ ಮಾರ್ಗವಾಗಿ ಬೈರಿದೇವರಕೊಪ್ಪದ ಶಾಂತಿ ನಿಕೇತನ ಕಾಲನಿವರೆಗೂ ಸಾಗಿತು. ಅಲ್ಲಿನ ಸನಾ ಕಾಲೇಜು ಸಮೀಪದ ಬಾವಿಯಲ್ಲಿ ಗಣೇಶೋತ್ಸವ ಮಂಡಳಿ ಧಾರ್ಮಿಕ ವಿಧಿ-ವಿಧಾನದೊಂದಿಗೆ ಗಣೇಶ ಮೂರ್ತಿ ವಿಸರ್ಜಿಸಲಾಯಿತು. ಎರಡು ಗಣೇಶ ಮೂರ್ತಿ ಮೆರವಣಿಗೆ ವೇಳೆ ಹು-ಧಾ ಪೊಲೀಸ್‌ ಕಮಿಷನರೇಟ್‌ ಪೊಲೀಸರ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.