ಭೂ ದಾಖಲೆಗಳ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಮಡಿಕೇರಿ: ಭೂ ದಾಖಲೆಗಳ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು. ಹಾಗೆಯೇ ನೂತನ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ನಿರ್ಗಮನ ಜಿಲ್ಲಾಧಿಕಾರಿ ವೆಂಕಟ್ರಾಜಾ ಹಾಗೂ ನೂತನ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರನ್ನು ಶಾಲು, ಫಲ ತಾಂಬೂಲ ಹಾಗೂ ವಿಶೇಷ ಉಡುಗೊರೆ ನೀಡಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಒಳ್ಳೆಯ ಅನುಭವ ಆಗಿದೆ. ಜತೆಗೆ ಆತ್ಮ ತೃಪ್ತಿಯೂ ಇದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆತ್ಮ ತೃಪ್ತಿಯಿಂದ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಆದರೆ ಒತ್ತಡ ಮಾಡಿಕೊಂಡು ಕಾರ್ಯ ನಿರ್ವಹಿಸಬಾರದು ಎಂದು ವೆಂಕಟ್ ರಾಜಾ ಅವರು ಸಲಹೆ ಮಾಡಿದರು. ನೂತನ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಕೋವಿಡ್ ಸಂದರ್ಭ ಒಟ್ಟಿಗೆ ಕರ್ತವ್ಯ ನಿರ್ವಹಿಸಿದ್ದು, ಇವರ ತಾಳ್ಮೆ, ಸಹನೆ ಮೆಚ್ಚುವಂತದ್ದು ಎಂದರು. ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಜಿಲ್ಲಾಧಿಕಾರಿಯಾಗಿ ಅಣ್ಣನ ರೀತಿ ಮಾರ್ಗದರ್ಶನ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪಟ್ಟೆದಾರರ, ಸಿ ಮತ್ತು ಡಿ ಭೂಮಿ ಸೇರಿದಂತೆ ಹಲವು ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರ ಒದಗಿಸಿದ್ದಾರೆ ಎಂದು ಸ್ಮರಿಸಿದರು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಐಟಿಡಿಪಿ ಇಲಾಖೆ ಅಧಿಕಾರಿ ಎಸ್. ಹೊನ್ನೆಗೌಡ, ಭೂ ದಾಖಲೆಗಳ ಉಪ ನಿರ್ದೇಶಕ ನಿರಂಜನ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಸೇರಿದಂತೆ ಹಲವರು ಮಾತನಾಡಿದರು.