ಕೃಷಿ ಹೊಂಡ ಖಾಲಿ, ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ

| Published : Feb 13 2024, 12:50 AM IST

ಸಾರಾಂಶ

ಪ್ರಸಕ್ತ ವರ್ಷ ಮಳೆ ಕೊರತೆಯಾಗಿದ್ದರಿಂದ ತಾಲೂಕಿನ ಕೃಷಿ ಹೊಂಡಗಳು ಖಾಲಿಯಾಗಿವೆ. ಜಾನುವಾರುಗಳಿಗೆ ಮತ್ತು ಕುರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ಎಸ್.ಜಿ. ತೆಗ್ಗಿನಮನಿ

ಕನ್ನಡಪ್ರಭ ವಾರ್ತೆ ನರಗುಂದ

ಪ್ರಸಕ್ತ ವರ್ಷ ಮಳೆ ಕೊರತೆಯಾಗಿದ್ದರಿಂದ ತಾಲೂಕಿನ ಕೃಷಿ ಹೊಂಡಗಳು ಖಾಲಿಯಾಗಿವೆ. ಜಾನುವಾರುಗಳಿಗೆ ಮತ್ತು ಕುರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ಈ ಬಾರಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಮಳೆ ಕೊರತೆಯಾಗಿದೆ. ರೈತನಿಗೆ ಬೆಳೆಯೂ ಇಲ್ಲದಂತಾಗಿದೆ. ಬೇಸಿಗೆ ಪ್ರಾರಂಭದಲ್ಲೇ ಜನ-ಜಾನುವಾರು ಮತ್ತು ಕುರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.

ಕೃಷಿ ಹೊಂಡ ಖಾಲಿ: ಪ್ರತಿ ವರ್ಷ ತಾಲೂಕಿನಲ್ಲಿ ಮಳೆಗಾಲದಲ್ಲಿ ರೈತರು ನಿರ್ಮಿಸಿಕೊಂಡ ಕೃಷಿಹೊಂಡಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು. ಮಳೆ ಕಡಿಮೆಯಾದ ನಂತರ ದಿನಗಳಲ್ಲಿ ಮಲಪ್ರಭಾ ಜಲಾಶಯದಿಂದ ಕಾಲುವೆ ಮೂಲಕ ನೀರು ಪೂರೈಕೆ ಮಾಡಿದಾಗ ಕೃಷಿ ಹೊಂಡಗಳನ್ನು ರೈತರು ತುಂಬಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಜಲಾಶಯ ಭರ್ತಿಯಾಗಿಲ್ಲ. ಇದರಿಂದ ಕಾಲುವೆಗಳಿಗೆ ನೀರು ಪೂರೈಕೆಯಾಗಿಲ್ಲ. ಹೀಗಾಗಿ ಖಾಲಿಯಾಗಿವೆ.

ಮುಖ ಪ್ರಾಣಿಗಳ ರೋದನ: ತಾಲೂಕಿನ ರೈತರು ತಮ್ಮ ಜಮೀನುಗಳಲ್ಲಿ ಸರ್ಕಾರದ ಕೃಷಿ ಭಾಗ್ಯ ಯೋಜನೆಯ ನೆರವಿಂದ ಒಟ್ಟು 2,161 ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೃಷಿಗೆ ಬಳಕೆ ಮಾಡಿ ಉಳಿದ ನೀರನ್ನು ಬೇಸಿಗೆಯ ಸಮಯದಲ್ಲಿ ರೈತರು ಜಾನುವಾರುಗಳಿಗೆ, ಕುರಿಗಾರರು ಕುರಿಗಳಿಗೆ ಕುಡಿಯಲು ಬಳಕೆ ಮಾಡುತ್ತಿದ್ದರು. ಆದರೆ ಈ ಬಾರಿ ಜಾನುವಾರು, ಕುರಿಗಳಿಗೆ ಕುಡಿಯುವ ನೀರು ಎಲ್ಲಿಂದ ತರುವುದು ಎಂಬುದು ಚಿಂತೆಯಾಗಿದೆ. ಮೂಕಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡುವುದನ್ನು ರೈತರಿಂದ ನೋಡಲು ಆಗುತ್ತಿಲ್ಲ.ಜಲಾಶಯದಿಂದ ನೀರು ಪೂರೈಕೆ ಮಾಡಿ ಕೃಷಿ ಹೊಂಡ ತುಂಬಿಸಬೇಕೆಂದು ಈಗಾಗಲೇ ನಾವು ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಕೊಣ್ಣೂರ ಗ್ರಾಮದ ರೈತದ್ಯಾಮಣ್ಣ ಮ್ಯಾಗಲಮನಿ ಹೇಳುತ್ತಾರೆ.

ತಾಲೂಕಿನ ರೈತರು ಕೆರೆಗಳನ್ನು ತುಂಬಿಸಬೇಕು ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಜಲಾಶಯದಿಂದ ಕಾಲುವೆಗಳಿಗೆ ನೀರು ಪೂರೈಕೆ ಮಾಡಿ ಜಮೀನಿನಲ್ಲಿರುವ ಕೆರೆಗಳನ್ನು ತುಂಬಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳುತ್ತಾರೆ.