ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರೈತರು ಈ ದೇಶದ ಮಾಲೀಕರು. ಈ ದೇಶಕ್ಕೆ ಅನ್ನ ಕೊಟ್ಟು ಎಲ್ಲರನ್ನೂ ಸಾಕಿ ಸಲಹಿದವರು. ರೈತ ಸಂಘ ಮೊದಲಿನಿಂದಲೂ ತತ್ವ ಸಿದ್ಧಾಂತ ಮೈಗೂಡಿಸಿಕೊಂಡು ಬಂದಿದೆ. ರೈತರಿಗೆ ಒಂದೇ ಕುಲ. ರೈತ ಸಂಘದಲ್ಲಿ ಜಾತಿ ಸಂಘರ್ಷ ಇಲ್ಲ. ಆ ನಿಟ್ಟಿನಲ್ಲಿ ನಾವೆಲ್ಲರೂ ನಡೆದು ಬಂದಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.ಶನಿವಾರ ಪತ್ರಿಕಾಭವನದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ರೈತ ಸಂಘದ ಸಂಸ್ಥಾಪಕ ಎನ್.ಡಿ. ಸುಂದರೇಶ್ ನೆನೆಪಿನ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವತ್ತು ಎನ್.ಡಿ. ಸುಂದರೇಶ್ ಅವರ 32ನೇ ನೆನೆಪಿನ ಸಭೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಮಾಡುತ್ತಿದ್ದೇವೆ. 1980 ರಲ್ಲಿ ರೈತ ಚಳುವಳಿ ಪ್ರಾರಂಭವಾಯಿತು. ಅಂದಿನಿಂದ ದಿಟ್ಟ ಹೋರಾಟಗಳೊಂದಿಗೆ ಇವತ್ತು ಕರ್ನಾಟಕದ ಮೂಲೆ ಮೂಲೆಗಳಲ್ಲಿ ರೈತರನ್ನು ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.ಅವತ್ತಿನ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಸಾಲ ವಸೂಲಿಗಾಗಿ ಜಪ್ತಿ ಮಾಡುವುದು, ತೆರಿಗೆ, ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದರ ಜೊತೆಗೆ ಖಾಸಗೀಕರಣ ಮಾಡಿತು. ಕೃಷಿಯನ್ನು ಹೊರಗಿಡಬೇಕು ಎಂದು ದೊಡ್ಡ ಚಳುವಳಿಯನ್ನೇ ಮಾಡಿ ಸರ್ಕಾರ ವೇಗವಾಗಿ ಜಾರಿಗೆ ತಂದಿದೆ. ಬಿಜೆಪಿ ಸರ್ಕಾರವು ಆದನ್ನೇ ಮುಂದುವರೆಸಿಕೊಂಡು ಬಂದಿದೆ. ನಲುಗುಂದದಲ್ಲಿ ಹತ್ತಿದ ಗೋಲಿಬಾರ್ ಕಿಡಿ, ಇವತ್ತು ರಾಜ್ಯಾದ್ಯಂತ ಹರಡಿದೆ ಎಂದರು.
ಕೇಂದ್ರ ಸರ್ಕಾರಕ್ಕಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಬಡವರ, ರೈತರ, ಜನ ಸಾಮಾನ್ಯರ ಸಮಸ್ಯೆ ಕಾಣುತ್ತಿಲ್ಲ. ಇಷ್ಟೆಲ್ಲಾ ತೊಂದರೆ ಇದ್ದರೂ ಯಾವುದೋ ಕ್ಷುಲ್ಲಕ ಕಾರಣಕ್ಕೆ ಲೋಕಸಭೆ, ವಿಧಾನ ಸಭೆಯಲ್ಲಿ ಗಲಾಟೆ ಮಾಡುತ್ತಾರೆ ಎಂದು ದೂರಿದರು.ವಿಧಾನ ಪರಿಷತ್ ಚಾವಡಿ ಒಳಗಡೆ ಒಬ್ಬ ಮಹಿಳೆಯ ಬಗ್ಗೆ ಈ ರೀತಿ ಮಾತನಾಡುತ್ತಾರೆ. ಹಳ್ಳಿಯಲ್ಲಿ ಹೆಬ್ಬೆಟ್ಟು ಒತ್ತುವ ರೈತರೂ ಕೂಡಾ ಬಳಸದ ಪದವನ್ನು ಬಳಸುತ್ತಾರೆ ಎಂದರೆ ಇವರಿಗೆ ಶಾಸಕ, ಮಂತ್ರಿ ಆಗುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ ಅವರು, ಯಾವ ರೀತಿ ಕೆಲಸ ಮಾಡಬೇಕು ಎಂದು ಬಹಿರಂಗ ಸಭೆಯಲ್ಲಿ ಪಾಠ ಮಾಡಬೇಕಾಗಿದೆ. ಸದಸ್ಯರನ್ನು ತರಬೇತಿ ಮಾಡಿ, ಅವರ ಹಕ್ಕು, ವ್ಯಾಪ್ತಿಯ ಬಗ್ಗೆ ಜನ ಪ್ರತಿನಿಧಿಗಳಿಗೆ ತರಬೇತಿ ನೀಡಬೇಕಿದೆ. ಇವತ್ತು ಎಲ್ಲ ರಾಜಕಾರಣಿಗಳು ಸಭ್ಯತೆ ಮೀರಿ ವರ್ತನೆ ನಡೆಸುತ್ತಿದ್ದಾರೆ ದೂರಿದರು.ಮಲೆನಾಡಿನಲ್ಲಿ ಮುಳುಗಡೆ ರೈತರ ಸಮಸ್ಯೆ, ಬಗರ್ ಹುಕುಂ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿಲ್ಲ. ಜವಾಬ್ದಾರಿಯಿಂದ ವರ್ತನೆ ಮಾಡುತ್ತಿಲ್ಲ ಎಂದು ದೂರಿದರು.ಕುಡಿಯುವ ನೀರಿನ ಯೋಜನೆ ಕುರಿತು ಪ್ರಭಾವಿ ಮಂತ್ರಿ ಪ್ರಹ್ಲಾದ್ ಜೋಶಿ ಮನೆ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಮ್ಮ ಹಣದಲ್ಲಿ ಸಂಬಳ ತೆಗೆದುಕೊಂಡು ಸೇವೆ ಮಾಡುವ ಅವರು ನಮ್ಮ ಸೇವಕರು. ನಾವು ರೈತರು ಮಾಲೀಕರು ಎಂದು ಹೆಮ್ಮೆಯಿಂದ ಹೇಳುವುದನ್ನು ಕಲಿಯಿರಿ ಎಂದ ಅವರು, ಸುಂದರೇಶ್ ಅವರು ಗುಡುಗಿದರೆ ವಿಧಾನ ಸೌಧ ನಡುಗಬೇಕು, ಆ ರೀತಿ ಗುಡುಗುತ್ತಿದ್ದರು. ಇವತ್ತಿನ ಸಂಘಟನೆಗೆ ಹಿರಿಯರ ಬಹಳ ದೊಡ್ಡ ಕೊಡುಗೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎನ್. ಡಿ. ಸುಂದರೇಶ್ ಅವರ ಪತ್ನಿ ಶೋಭಾ ಸುಂದರೇಶ್, ರಾಜ್ಯ ಗೌರವಾಧ್ಯಕ್ಷ ಕುರುವ ಗಣೇಶ್ ಮಾತನಾಡಿದರು. ರೈತ ಸಂಘದ ಪ್ರಮುಖರಾದ ಹೊನ್ನೂರು ಮುನಿಯಪ್ಪ, ತರೀಕೆರೆ ಮಹೇಶ್, ಹುಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಕೊಟ್ಟೂರು ಭರ್ಮಣ್ಣ, ನಜೀರ್ ಸಾಬ್ ಮೂಲಿಮನಿ, ಅಮೀನ್ ಪಾಷಾ ದಿದ್ಗಿ, ಉತ್ತರ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ್ ರಾಮಪುರ, ಲಿಂಗಸೂರು, ಶಂಕರಮ್ಮ, ರಾಧಮ್ಮ, ವೀರಮ್ಮ, ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.