ಹಾನಗಲ್ಲ: ಬಡ ಮಧ್ಯಮ ವರ್ಗಗಳ ಮೇಲೆ ಭಾರೀ ಪ್ರಮಾಣದ ಆರ್ಥಿಕ ಹೊರೆ ಹೇರುವ ರಾಜ್ಯ ಸರ್ಕಾರದ ವಿದ್ಯುತ್ ಕಂಪನಿ ಖಾಸಗೀಕರಣ ವಿರೋಧಿಸಿ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಹಾನಗಲ್ಲ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಮಂಗಳವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ವಿದ್ಯುತ್ ಕಂಪನಿಗಳ ಖಾಸಗೀಕರಣದಿಂದಾಗಿ ಸರ್ಕಾರ ರೈತರು ಬಡವರ ಮೇಲೆ ಬಲು ದೊಡ್ಡ ಆರ್ಥಿಕ ಹೊರೆ ಹೇರುವ ಹುನ್ನಾರಕ್ಕೆ ಕೈ ಹಾಕಿದೆ. ರೈತರ ಪಂಪ್‌ಸೆಟ್ಟಿಗೆ ಉಚಿತ ವಿದ್ಯುತ್ ಕಡಿತವಾಗುತ್ತದೆ. ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡುವ ನೌಕರರ ಕುಟುಂಬಗಳು ಬೀದಿಗೆ ಬೀಳುವ ಸಾಧ್ಯತೆಗಳಿವೆ.ಈಗಾಗಲೇ ೧೯ ಜಿಲ್ಲೆಗಳಲ್ಲಿ ಟಾಟಾ ಪವರ್ ಲಿಮಿಟೆಡ್ ಖಾಸಗಿ ಕಂಪನಿಗೆ ವಿದ್ಯುತ್ ಖಾಸಗೀಕರಣ ಮಾಡುವ ವ್ಯವಸ್ಥೆ ಪ್ರಕಟವಾಗುತ್ತಿದ್ದು, ಇದು ಇಡೀ ರಾಜ್ಯದ ಜನತೆಗೆ ದೊಡ್ಡ ಬರೆ ಆಗಲಿದೆ. ಮೊಬೈಲ್ ಕರೆನ್ಸಿಯಂತೆ ವಿದ್ಯುತ್ ಖರೀದಿಸುವ ಹುನ್ನಾರ ಇಲ್ಲಿದೆ. ಇದು ಬಡವರು ಅದರಲ್ಲೂ ರೈತರನ್ನು ದಿವಾಳಿ ಮಾಡುವ ಯೋಜನೆಯಾಗಿದ್ದು, ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಖಾಸಗೀಕರಣದಿಂದ ಮೊಬೈಲ್‌ನಂತೆ ಕರೆನ್ಸಿ ಹಾಕಿ ವಿದ್ಯುತ್ ಬಳಸಬೇಕಾಗುತ್ತದೆ. ನೀರಾವರಿ ಪಂಪ್‌ಸೆಟ್ ಬಳಕೆದಾರರ ಹೊಸ ಗೋಳು ಆರಂಭವಾಗುತ್ತದೆ. ವಿದ್ಯುತ್ ವ್ಯತ್ಯಾಸಕ್ಕೆ ಹಣ ಹಿಡಿದುಕೊಂಡೇ ಕಂಪನಿಗೆ ಹೋಗಬೇಕಾಗುತ್ತದೆ. ಹಣ ಕೊಡಿ ವಿದ್ಯುತ್ ಕೊಡುತ್ತೇವೆ ಎಂದು ಹೇಳುವ ಕಾಲ ಸನ್ನಿಹಿತವಾಗುತ್ತಿದೆ. ಸರ್ಕಾರ ಈಗಲೇ ವಿದ್ಯುತ್ ಖಾಸಗೀಕರಣ ರದ್ದುಗೊಳಿಸಿ ವಿಶೇಷವಾಗಿ ರೈತರ ಪಂಪಸೆಟ್‌ಗಳಿಗೆ ಉಚಿತ ಸಮರ್ಪಕ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಹೊಸದಾಗಿ ಕೊರೆಸಿದ ರೈತರ ಕೊಳವೆ ಭಾವಿಗಳಿಗೆ ವಿಳಂಬವಿಲ್ಲದೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್. ಪಾಟೀಲ, ಮಹಾಲಿಂಗಪ್ಪ ಬಿದರಮಳಿ, ಶೀಲಾ ಭದ್ರಾವತಿ, ನಶೀಮಾಬಾನು ಲೋಹಾರ, ಚನ್ನಬಸಯ್ಯ ದೊಡ್ಡಕಂತಿಮಠ, ರವಿರಾಜ ರಾಗಿಕೊಪ್ಪ, ಅದಮಖಾನ ನೆಗಳೂರ, ನಾಘಪ್ಪ ಬಿದರಗಡ್ಡಿ, ಶಿವನಗೌಡ ಪಾಟೀಲ, ಚನ್ನಬಸಪ್ಪ ಅಂಗಡಿ, ಮಂಜು ಹರಿಜನ, ಎಂ.ಎಂ. ಗುಲಾಮಲಿಶಾ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಮೊದಲಾದವರು ಇದ್ದರು.