ಮೆಕ್ಕೆಜೋಳದ ಸೊಪ್ಪಿಯನ್ನು ಜಾನುವಾರುಗಳನ್ನು ಸಾಕಾಣಿಕೆ ಮಾಡಿರುವ ರೈತರಿಗೆ ಮೇವನ್ನು ಉಚಿತವಾಗಿ ನೀಡುತ್ತಿದ್ದಾರೆ.

ಹೂವಿನಹಡಗಲಿ: ಮಳೆ ನಂಬಿಕೊಂಡು ಮೆಕ್ಕೆಜೋಳ ಬಿತ್ತನೆ ಮಾಡಿರುವ ರೈತರು ಮಳೆ ಕೈ ಕೊಟ್ಟ ಪರಿಣಾಮ ಬೆಳೆ ನಾಶಕ್ಕೆ ಮುಂದಾಗಿರುವ ಘಟನೆ ಶುಕ್ರವಾರ ನಡೆದಿದೆ.

ತಾಲೂಕಿನ ಉಪನಾಯಕನಹಳ್ಳಿ, ಮಾಗಳ, ಹಿರೇಹಡಗಲಿ, ಇಟ್ಟಗಿ, ಉತ್ತಂಗಿ ಸೇರಿದಂತೆ ಇನ್ನೂ ಅನೇಕ ಹಳ್ಳಿಗಳಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಒಣಗುತ್ತಿವೆ. ಇನ್ಮುಂದೆ ಮಳೆ ಬಂದರೂ ಫಲ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಇದ್ದ ಮೆಕ್ಕೆಜೋಳದ ಸೊಪ್ಪಿಯನ್ನು ಜಾನುವಾರುಗಳನ್ನು ಸಾಕಾಣಿಕೆ ಮಾಡಿರುವ ರೈತರಿಗೆ ಮೇವನ್ನು ಉಚಿತವಾಗಿ ನೀಡುತ್ತಿದ್ದಾರೆ.

ಉಪನಾಯಕನಹಳ್ಳಿ ಗ್ರಾಮದ ರುದ್ರಪ್ಪ ಬೆನ್ನೂರು ಅವರಿಗೆ ಸೇರಿದ್ದ 4 ಎಕರೆ ಮೆಕ್ಕೆಜೋಳಕ್ಕೆ ಸಕಾಲದಲ್ಲಿ ಮಳೆ ಇಲ್ಲದೇ ಒಣಗಿ ಹೋಗುತ್ತಿತ್ತು. ಈ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ಹಾನಿ ಮಾಡಿದರೆ ದನ ಕರುಗಳಿಗೆ ಮೇವಿನ ಬವಣೆ ಉಂಟಾಗುತ್ತದೆ ಎಂದು ಕಾರಣಕ್ಕಾಗಿ ಅದೇ ಗ್ರಾಮದ ರೈತರಿಗೆ ತಾವೇ ಕೊಯ್ಲು ಮಾಡಿಕೊಂಡು ಮೇವನ್ನು ಉಚಿತವಾಗಿ ನೀಡಿದ್ದಾರೆ.

4 ಎಕರೆ ಮೆಕ್ಕೆಜೋಳ ಬಿತ್ತನೆ ಮಾಡಲು ಸಾವಿರಾರು ರುಪಾಯಿ ಬಂಡವಾಳ ಹಾಕಿದ್ದೇವೆ. ಆದರೆ ಮಳೆ ಇಲ್ಲದೇ ಬರ ಬಿದ್ದಿದೆ. ಇದರಿಂದ ಭವಿಷ್ಯದಲ್ಲಿ ಬದುಕನ್ನು ಹೇಗೆ ಸಾಗಿಸಬೇಕೆಂಬ ಚಿಂತೆಯಲ್ಲಿದ್ದೇವೆ. ಕೂಡಲೇ ಸರ್ಕಾರ ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ರುದ್ರಪ್ಪ ಒತ್ತಾಯಿಸಿದ್ದಾರೆ.