ಸಾರಾಂಶ
ನಾರಾಯಣ ಹೆಗಡೆ
ಹಾವೇರಿ: ಸಂಪೂರ್ಣ ಕಾಂಗ್ರೆಸ್‌ಮಯ ಆಗಿರುವ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಅವರು ಮಾ. 7ರಂದು ಮಂಡಿಸಲಿರುವ ಬಜೆಟ್ ಮೇಲೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಬೇಡ್ತಿ- ವರದಾ ನದಿ ಜೋಡಣೆ, ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ದುರಸ್ತಿ ಸೇರಿದಂತೆ ಜಿಲ್ಲೆಯ ಜನರ ಬೇಡಿಕೆಗೆ ಬಜೆಟ್‌ನಲ್ಲಿ ಉತ್ತರ ಸಿಗುವ ನಿರೀಕ್ಷೆ ಎಲ್ಲರಲ್ಲಿದೆ.
ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಏನೂ ಸಿಗದೇ ನಿರಾಶರಾಗಿದ್ದ ಜನತೆ ಈ ಸಲವಾದರೂ ಪ್ರಮುಖ ಬೇಡಿಕೆಗಳು ಪ್ರಸ್ತಾಪವಾಗುವ ಆಶಾಭಾವನೆಯಲ್ಲಿದ್ದಾರೆ. ರಾಜಕೀಯವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯ ಜನತೆ ಶಕ್ತಿ ನೀಡಿದ್ದು, ಕಳೆದ ಶಿಗ್ಗಾಂವಿ ಉಪಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಸದ್ಯ ಜಿಲ್ಲೆಯ ಎಲ್ಲ 6 ಕ್ಷೇತ್ರಗಳಲ್ಲಿ ಕೈ ಶಾಸಕರಿದ್ದು, ಅವರ ಪ್ರಯತ್ನದ ಫಲವಾಗಿ ಜಿಲ್ಲೆಯ ಜನರ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಅನುದಾನ ಘೋಷಿಸುವ ನಿರೀಕ್ಷೆ ಎಲ್ಲರ ಮೇಲಿದೆ.ವಿವಿ ಉಳಿಯಲಿ: ಹಿಂದಿನ ಸರ್ಕಾರ ಆರಂಭಿಸಿದ್ದ ಹಾವೇರಿ ವಿಶ್ವವಿದ್ಯಾಲಯವನ್ನು ಈ ಸರ್ಕಾರ ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ಪಕ್ಷಾತೀತವಾಗಿ ಎಲ್ಲರಲ್ಲೂ ಅಸಮಾಧಾನವಿದೆ. ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದು ಬಜೆಟ್‌ನಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂಬ ಒತ್ತಾಯವಿದೆ. ಜಿಲ್ಲೆಯ ಶಾಸಕರು ಕೂಡ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿ ವಿವಿ ಉಳಿಸಲು ಪ್ರಯತ್ನಿಸಲಿದ್ದಾರೆ ಎಂಬ ನಿರೀಕ್ಷೆ ಎಲ್ಲರ ಮೇಲಿದೆ.ನದಿ ಜೋಡಣೆಗೆ ಒತ್ತಾಯ: ಜಿಲ್ಲೆಯಲ್ಲಿ ನಾಲ್ಕು ನದಿ ಹರಿಯುತ್ತಿದ್ದು, ಯುಟಿಪಿ ಯೋಜನೆಯೂ ಅನುಷ್ಠಾನಗೊಂಡಿದೆ. ಇದಲ್ಲದೇ ಹಲವು ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಆದರೂ ಕೃಷಿ ಪ್ರಧಾನ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿರಂತರವಾಗಿರುವುದರಿಂದ ಬೇಡ್ತಿ- ವರದಾ ನದಿ ಜೋಡಣೆ ಬಗ್ಗೆ ಧ್ವನಿ ಹೆಚ್ಚುತ್ತಿದೆ. ಈ ಯೋಜನೆಗೆ ಡಿಪಿಆರ್ ಕೂಡ ಸಿದ್ಧವಿದ್ದು, ಅಗತ್ಯ ಅನುದಾನ ನೀಡಬೇಕಿದೆ.ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿ: ಜಿಲ್ಲೆಯ ಪ್ರವಾಸಿ ತಾಣಗಳಾದ ಕನಕದಾಸರ ಕಾಗಿನೆಲೆಯನ್ನು ಕೂಡಲ ಸಂಗಮದ ಮಾದರಿಯಲ್ಲಿ ವಿಶ್ವಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ಕಾರ್ಯ ನಡೆದಿದೆ. ಇದರ ಜತೆಗೆ ಕನಕದಾಸರ ಜನ್ಮಭೂಮಿ ಬಾಡ, ಶಿಶುನಾಳ ಶರೀಫ ಗಿರಿ, ರಾಣಿಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ, ಬಂಕಾಪುರದ ನವಿಲುಧಾಮ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈ ಸ್ಥಳಗಳಲ್ಲಿ ಹೆಚ್ಚಿನ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಅನುದಾನ ನೀಡಿ ಅಭಿವೃದ್ಧಿ ಕೈಗೊಳ್ಳಬೇಕಿದೆ.ಹೈಟೆಕ್ ಆಸ್ಪತ್ರೆಗಳ ನಿರ್ಮಾಣ: ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವತ್ತ ಆದ್ಯತೆ ನೀಡಬೇಕಿದೆ. ಜಿಲ್ಲಾ ಕೇಂದ್ರವಾಗಿ ಎರಡೂವರೆ ದಶಕ ಕಳೆದಿದ್ದರೂ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಹುಬ್ಬಳ್ಳಿ, ದಾವಣಗೆರೆಗೆ ಕರೆದುಕೊಂಡು ಹೋಗುವ ಸ್ಥಿತಿ ಇದೆ. ಈ ಹಿನ್ನೆಲೆ ಜಿಲ್ಲೆ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಹೈಟೆಕ್ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸುವ ಕಾರ್ಯ ಕೈಗೊಳ್ಳಬೇಕಿದೆ.ನೀರಾವರಿ ಯೋಜನೆಗಳು ಪೂರ್ಣಗೊಳ್ಳಲಿ: ಜಿಲ್ಲೆಯಲ್ಲಿ ಮಂಜೂರಾಗಿ ಶುರುವಾಗಿದ್ದ ವಿವಿಧ ನೀರಾವರಿ ಯೋಜನೆಗಳ ಕಾಮಗಾರಿ ಮಂದಗತಿಯಲ್ಲಿ ಸಾಗಿವೆ. ಹಿರೇಕೆರೂರು ತಾಲೂಕಿನ ಬಾಳಂಬೀಡ ಏತ ನೀರಾವರಿ ಯೋಜನೆ, ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಮತ್ತು ಇತರೆ ೧೯ ಕೆರೆ ತುಂಬಿಸುವುದು, ಬುಳ್ಳಾಪುರ- ಹಾಡೆ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ವಿವಿಧ ನೀರಾವರಿ ಯೋಜನೆ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಅವು ತ್ವರಿತವಾಗಿ ಪೂರ್ಣಗೊಳ್ಳಬೇಕಿದ್ದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆಯಿದೆ.
ತುಂಗೆಗೆ ಬ್ಯಾರೇಜ್: ಜಿಲ್ಲಾ ಕೇಂದ್ರವಾದ ಹಾವೇರಿಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತಿದೆ. ಈ ಹಿನ್ನೆಲೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಕಂಚಾರಗಟ್ಟಿ ಬಳಿಯಲ್ಲಿರುವ ಕುಡಿಯುವ ನೀರಿನ ಜಾಕ್‌ವೆಲ್ ಹತ್ತಿರ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣದ ಅಗತ್ಯವಿದೆ. ಇಲ್ಲಿ ಬ್ಯಾರೇಜ್ ನಿರ್ಮಿಸಿದರೆ ಬೇಸಿಗೆ ದಿನಗಳಲ್ಲಿ ನೀರಿನ ಬವಣೆಗೆ ಮುಕ್ತಿ ನೀಡಬಹುದು. ಅಲ್ಲದೇ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಬ್ಯಾಡಗಿ ಮೆಣಸಿನ ತಳಿ ಸಂವರ್ಧನೆ, ಮೌಲ್ಯವರ್ಧನೆಗೆ ಕ್ರಮ ಕೈಗೊಳ್ಳಬೇಕಿದೆ.ಕೈಗಾರಿಕೆ ಬೇಡಿಕೆ: ಹಾವೇರಿ ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಕಂಚಾರಗಟ್ಟಿಯ ಬಳಿ ತುಂಗಭದ್ರಾ ನದಿಗೆ ಚೆಕ್ ಡ್ಯಾಂ ನಿರ್ಮಾಣ, ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ನಿರ್ಮಿಸಿರುವ ಬ್ಯಾರೇಜ್‌ಗಳ ದುರಸ್ತಿಗೆ ಮನವಿ ಮಾಡಿದ್ದೇವೆ. ಜಿಲ್ಲಾ ಕೇಂದ್ರಕ್ಕೆ ವಿಶೇಷ ಅನುದಾನ ನೀಡುವಂತೆ ಕೋರಲಾಗಿದೆ. ಗುತ್ತಲ ಪಟ್ಟಣದಲ್ಲಿ ಅಗ್ನಿಶಾಮಕ ಕಚೇರಿ ಸ್ಥಾಪನೆ, ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಅನುದಾನ, ಕ್ಷೇತ್ರಕ್ಕೆ ವಸತಿ ಯೋಜನೆಯಡಿ ಹೆಚ್ಚಿನ ಮನೆಗಳ ಮಂಜೂರು ಮಾಡಲು ಜತೆಗೆ ಕೈಗಾರಿಕೆ ಸ್ಥಾಪನೆಗೂ ಆದ್ಯತೆ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಹಾವೇರಿ ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.ಸಿಎಂಗೆ ಮನವಿ: ನರೇಗಲ್- ಕುಸನೂರ ಏತ ನೀರಾವರಿ ಯೋಜನೆ ಬಜೆಟ್‌ನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಬಹುವರ್ಷಗಳ ಬೇಡಿಕೆ ಇದಾಗಿದ್ದು, ಈ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡರೆ ತಾಲೂಕಿನ ವಿವಿಧ ಕೆರೆಗಳಿಗೆ ನೀರು ತುಂಬಿಸಲು ಸಹಕಾರಿಯಾಗುತ್ತದೆ. ಜತೆಗೆ ಈ ಭಾಗದ ರೈತರ ಬೇಡಿಕೆಯಾಗಿರುವ ಬೇಡ್ತಿ- ವರದಾ ನದಿ ಜೋಡಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜತೆಗೆ ಚರ್ಚಿಸುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೇನೆ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.