ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಜಿಲ್ಲಾದ್ಯಂತ ಕಳೆದ ಒಂದು ತಿಂಗಳಿಂದ ಮಳೆ ಸುರಿಯದೆ ಬಿತ್ತಿದೆ ಬೆಳೆ ಬಾಡುತ್ತಿದೆ. ಸಾಲ ಮಾಡಿ ಬಿತ್ತಿ ಬೆಳೆದಿದ್ದ ಬೆಳೆ ಕಣ್ಣೆದುರೆ ಕಮರುತ್ತಿರುವುದನ್ನು ಕಂಡು ರೈತರು ಕಣ್ಣೀರು ಸುರಿಸುತ್ತಿದ್ದಾರೆ. ರೈತರೊಬ್ಬರು ತನ್ನ ಐದು ಎಕರೆ ಹೊಲದಲ್ಲಿ ಬಿತ್ತದ ಮೆಕ್ಕೆಜೋಳ ಬೆಳೆಯನ್ನು ಕುರಿ ಮೇಯಿಸಿದ್ದಾರೆ. ಈ ದೃಶ್ಯ ಸೆರೆ ಹಿಡಿದು, ಅದಕ್ಕೆ ಎಲ್ಲಿದೆಯೋ ನ್ಯಾಯ ಎನ್ನುವ ಹಾಡು ಸೇರಿಸಿ ಸ್ಟೇಟಸ್ ಇಟ್ಟುಕೊಂಡಿದ್ದಾನೆ. ಇದನ್ನು ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ತಾಲೂಕಿನ ಚೀಲವಾಡಗಿ ಗ್ರಾಮದ ಸೀಮಾದಲ್ಲಿ ಬರುವ ಕೊಪ್ಪಳ ನಿವಾಸಿ ವೀರೇಶ ಗುಡಿ ತಮ್ಮ ಐದು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಕುರಿ ಮೇಯಿಸಲು ಬಿಟ್ಟಿದ್ದಾರೆ. ಬಿತ್ತನೆಗೆ ಬರೋಬ್ಬರಿ ₹ 60 ಸಾವಿರ ಸಾಲ ಮಾಡಿ ಖರ್ಚು ಮಾಡಿದ್ದಾರೆ. ಆದರೆ, ಇದೀಗ ಒಣಗುತ್ತಿರುವ ಬೆಳೆ ಮಣ್ಣು ಸೇರುವ ಮೊದಲೆ ಕುರಿಗಳಾದರೂ ತಿನ್ನಲಿ ಎಂದು ಮೇಯಿಸುತ್ತಿದ್ದಾರೆ.ಮಳೆ ಕೊರತೆ:
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಕೇವಲ ವೀರೇಶ ಗುಡಿ ಮಾತ್ರವಲ್ಲದೆ ಜಿಲ್ಲಾದ್ಯಂತ ನೂರಾರು ರೈತರು ಬೆಳೆ ನಾಶ ಮಾಡಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 3.40 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದೆಯಾದರೂ ಮಳೆ ಅಭಾವದಿಂದ ಜುಲೈ ತಿಂಗಳಾದರೂ ಶೇ. 70ರಷ್ಟು ಬಿತ್ತನೆಯಾಗಿಲ್ಲ. ಈ ವರೆಗೆ 2.65 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದ್ದು, ಇದರಲ್ಲಿ 60 ಸಾವಿರ ಹೆಕ್ಟೇರ್ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಭತ್ತ ನಾಟಿ ಮಾಡಲಾಗಿದೆ. ಉಳಿದಂತೆ ಮಳೆಯಾಶ್ರಿತ ಪ್ರದೇಶದಲ್ಲಿ 2.05 ಲಕ್ಷ ಎಕರೆ ಬಿತ್ತನೆಯಾಗಿದೆ. ಕೃಷಿ ಇಲಾಖೆ ಮಳೆ ಅಭಾವದಿಂದ ಒಣಗಿರುವ ಬೆಳೆ ಮಾಹಿತಿ ಸಂಗ್ರಹಿಸಿಲ್ಲ. ಬರ ಘೋಷಣೆಯಾಗದೆ ಇರುವುದರಿಂದ ಸರ್ವೇ ನಡೆದಿಲ್ಲ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈ ವರೆಗೆ 278 ಮಿಲಿ ಮೀಟರ್ ಮಳೆಯಾಗಬೇಕು. ಅದರಲ್ಲಿ ಶೇ. 37ರಷ್ಟು ಕೊರತೆಯಾಗಿದೆ. ಆದರೆ, ಪೂರ್ವಮುಂಗಾರು ಮಳೆಯೇ ದೊಡ್ಡ ಪ್ರಮಾಣದಲ್ಲಿ ಆಗಿರುವುದರಿಂದ ಕೊರತೆ ಶೇ. 37 ಎನ್ನುವುದು ಸರಾಸರಿ ಲೆಕ್ಕಚಾರದಲ್ಲಿ ಇದೆಯಾದರೂ ಜೂನ್ ನಂತರ ಮತ್ತು ಜುಲೈನಲ್ಲಿ ಮಳೆ ಶೇ. 50ರಿಂದ 60ರಷ್ಟು ಕೊರತೆಯಾಗಿದೆ. ಹೀಗಾಗಿ, ಜಿಲ್ಲಾದ್ಯಂತ ಬರದ ಛಾಯೆ ಆವರಿಸಿದ್ದು, ಸರ್ಕಾರ ಇನ್ನೂ ಘೋಷಣೆ ಮಾಡಿಲ್ಲ ಎನ್ನುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಪ್ರಸಕ್ತ ವರ್ಷ ಮಳೆ ಅಭಾವದಿಂದ ರೈತರು ಹಾಕಿದ ಬೆಳೆ ಹರಗುತ್ತಿದ್ದಾರೆ. ಇನ್ನು ಕೆಲವೆಡೆ ಹಸಿ ಇರುವುದರಿಂದ ಬೆಳೆ ಜೀವ ಹಿಡಿದುಕೊಂಡಿವೆ. ತುರ್ತಾಗಿ ಮಳೆ ಅಗತ್ಯವಿದೆ.
ರುದ್ರೇಶಪ್ಪ ಜೆಡಿ ಕೃಷಿ ಇಲಾಖೆ ಕೊಪ್ಪಳ ಏನ್ ಮಾಡೋದು ಹೇಳಿ ಸರ್, ಹಾಗೆ ಬಿಟ್ಟರೆ ಒಣಗಿಯೇ ಹೋಗುತ್ತದೆ. ಅದಕ್ಕೆ ಕುರಿಯಾದರೂ ಮೇಯ್ದು ಹೊಟ್ಟೆ ತುಂಬಿಸಿಕೊಳ್ಳಲಿ ಎಂದು ಕುರಿ ಮೇಯಿಸಲು ಹೇಳಿದ್ದೇವೆ. ಸಾಲ, ಮಾಡಿ ತಂದು ಹಾಕಿದ ಬೆಳೆ ಈಗ ನಾವೇ ನಾಶ ಮಾಡುವಂತೆ ಆಗಿದ್ದರಿಂದ ಎಲ್ಲಿದೆಯೋ ನ್ಯಾಯ ಎನ್ನುವ ಹಾಡಿನೊಂದಿಗೆ ಕುರಿ ಮೇಯಿತ್ತಿರುವ ವೀಡಿಯೋ ಸ್ಟೇಟಸ್ ಇಟ್ಟುಕೊಂಡಿದ್ದೇನೆ.ವೀರೇಶ ಗುಡಿ ಕೊಪ್ಪಳ ರೈತ