ರೈತರ ಸಮಸ್ಯೆ ಆಲಿಸಿದ ತಹಸೀಲ್ದಾರ್ ಗಿರೀಶ್, ರೈತರ ಸಮಸ್ಯೆ ಪರಿಹರಿಸಲು ನಿಟ್ಟಿನಲ್ಲಿ ತಾಲೂಕು ಆಡಳಿತ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಇನ್ನಿತರ ಸಮಸ್ಯೆಗಳ ಕುರಿತು ಜಿಲ್ಲಾಡಳಿತದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಆನೆದಾಳಿ ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ನಲುಗಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ರೈತರ ಕೆಲಸಗಳು ಆಗುತ್ತಿಲ್ಲ. ವಿನಾಕಾರಣ ರೈತರನ್ನು ಅಲೆದಾಡಿಸಲಾಗುತ್ತಿದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ತಾಲೂಕು ಆಡಳಿತ ಮುಂದಾಗಬೇಕು ಎಂದು ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಆಗ್ರಹಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ರೈತರು ಹತ್ತಾರು ಜಲ್ವಂತ ಸಮಸ್ಯೆಗಳಿಂದ ಬಳಲುತ್ತಿದಾರೆ. ಸರ್ಕಾರಿ ಕಚೇರಿಗಳಲ್ಲಿ ವಿನಾ ಕಾರಣ ರೈತರನ್ನು ಅಲೆದಾಡಿಸುವುದು, ಅಧಿಕಾರಿಗಳ ಲಂಚಗುಳಿತನದಿಂದ ರೈತರು ನಲುಗಿದ್ದಾರೆ. ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ದಿನ ಸಭೆ ಕರೆದಿದ್ದು, ಸಭೆ ಕೇವಲ ಚರ್ಚೆಗೆ ಮಾತ್ರ ಸಿಮೀತವಾಗಬಾರದು. ಅಧಿಕಾರಿಗಳು ರೈತರ ಸಮಸ್ಯೆಗೆ ಸಮರ್ಪಕ ಉತ್ತರ ನೀಡುವ ಜತೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲೂ ಕಾರ್ಯಪ್ರೌವೃತ್ತರಾಗಬೇಕು ಎಂದರು.

ಸಭೆಗೆ ಆಗಮಿಸಿದ್ದ ರೈತರು ಕಳೆದ ಹತ್ತಾರು ವರ್ಷಗಳಿಂದ ಆನೆ ಹಾವಳಿಯಿಂದಾಗುತ್ತಿರುವ ಅನಾಹುತಗಳು, ಅದರಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಉತ್ತರ ನೀಡಲು ಮುಂದಾದ ವೇಳೆ ಕಾಟಾಚಾರದ ಉತ್ತರ ನೀಡದೇ ಆನೆ ಹಾವಳಿಗೆ ಶಾಶ್ವತ ಪರಿಹಾರ ಮಾರ್ಗೋಪಾಯಗಳನ್ನು ಜಾರಿಗೆ ತರುವಂತೆ ಆಗ್ರಹಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ವಲಯ ಅರಣ್ಯಾಧಿಕಾರಿ ಮಲ್ಲೇಶ್, ಈಗಾಗಲೇ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕೆಲಸ ಮಾಡುತ್ತಿದ್ದು, ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಂದಾಯ, ವಿದ್ಯುತ್, ಕೃಷಿ, ರೇಷ್ಮೆ, ತೋಟಗಾರಿಕೆ, ಕೃಷಿ ಮಾರುಕಟ್ಟೆ, ಅರಣ್ಯ, ಸಹಕಾರ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ, ತಾಲೂಕಿನ ರೈತರಿಗೆ ಸಂಬಂಧಪಟ್ಟ ಪೋಡಿ ಮುಕ್ತ ಗ್ರಾಮ, ಅಕ್ರಮ ಸಕ್ರಮ ಸಾಗುವಳಿ ಅರ್ಜಿಗಳ ಇತ್ಯರ್ಥ, ಗೋಮಾಳ ಭೂಮಿ ಮತ್ತು ಇತರೆ ಕಂದಾಯ ಇಲಾಖೆಗೆ ಒಳಪಟ್ಟ ಗುಂಡುತೋಪು ಹುಲ್ಲುಬನಿ ಮುಂತಾದ ಜಮೀನುಗಳ ವಿವರ, ಕೆರೆ ಕಟ್ಟೆ ಜಲಾಶಯಗಳು ಮತ್ತು ಅವುಗಳ ಮಾಲಿಕತ್ವ ಹಾಗೂ ಸರ್ವೇ ಮಾಡಿದ್ದ ಒತ್ತುವರಿ ತೆರವು ಮಾಡದಿರುವ ಮತ್ತು ಮಾಡಿರುವುದರ ವಿವರ, ಕೆರೆಗಳಿಂದ ಹೂಳು ತೆಗೆಸುವ ಬಗ್ಗೆ ಇರುವ ಮಾರ್ಗಸೂಚಿಗಳು, ರೈತರ ಜಮೀನುಗಳಿಗೆ ,ಇಟ್ಟಿಗೆ ಗೂಡುಗಳಿಗೆ ಮತ್ತು ಇತರೆ ಅನುಕೂಲಗಳು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಆಯಾಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸದಿರುವುದು, ಬೆಳೆ ಸಮೀಕ್ಷೆ, ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರ, ಹೈನುಗಾರರ ಸಮಸ್ಯೆ, ತೆಂಗಿನ ಮರಕ್ಕೆ ವ್ಯಾಪಕವಾಗಿ ಕಾಡುತ್ತಿರುವ ಕಪ್ಪು ತಲೆ ಹುಳು, ಬಿಳಿ ನೊಣ ಹಾಗೂ ವೈರಸ್ ನಿಂದ ಸೊರಗುತ್ತಿರುವ ಮರಗಳನ್ನು ಉಳಿಸಿಕೊಳ್ಳಲು ಇಲಾಖೆ ಕೈಗೊಂಡಿರುವ ಕ್ರಮಗಳು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸೇರಿದಂತೆ ೬೬ ವಿಚಾರಗಳ ಬಗ್ಗೆ ರೈತರು ಗಮನ ಸೆಳೆದರು.

ರೈತರ ಸಮಸ್ಯೆ ಆಲಿಸಿದ ತಹಸೀಲ್ದಾರ್ ಗಿರೀಶ್, ರೈತರ ಸಮಸ್ಯೆ ಪರಿಹರಿಸಲು ನಿಟ್ಟಿನಲ್ಲಿ ತಾಲೂಕು ಆಡಳಿತ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಇನ್ನಿತರ ಸಮಸ್ಯೆಗಳ ಕುರಿತು ಜಿಲ್ಲಾಡಳಿತದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ತಾಪಂ ಇಒ ಸಂದೀಪ್, ಪೌರಾಯುಕ್ತ ಮಹೇಂದ್ರ, ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರಕಾಶ್, ನಗರ ವೃತ್ತ ನಿರೀಕ್ಷಕ ರವಿ ಕಿರಣ್, ಶಿರಸ್ತೇದಾರ್ ಹರೀಶ್, ರೈತ ಮುಖಂಡರಾದ ಹೊಂಬಾಳೇಗೌಡ, ಮಲ್ಲಿಕಾರ್ಜುನ್, ಜಯರಾಮು, ರವೀಂದ್ರ, ಬಿ.ವಿ.ರಾಜು, ರಾಮು, ಎಂ.ಬಿ ರಾಮಕೃಷ್ಣ ಬಸವೇಶ್, ಲಕ್ಷ್ಮಣ, ರುದ್ರೇಗೌಡ ಇತರರು ಇದ್ದರು.