ಸಮರ್ಪಕ ವಿದ್ಯುತ್ ಪೂರೈಕೆಗೆ ರೈತ ಮುಖಂಡರ ಆಗ್ರಹ

| Published : May 02 2024, 12:21 AM IST

ಸಾರಾಂಶ

ಅಧಿವೇಶನದಲ್ಲಿ ವಿದ್ಯುತ್ ಇಲಾಖೆ ಸಚಿವರು ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ವಿದ್ಯುತ್ ಪೂರೈಕೆ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರದ ಆದೇಶಗಳನ್ನು ಸೆಸ್ಕಾಂ ಅಧಿಕಾರಿಗಳು ಪಾಲಿಸುತ್ತಿಲ್ಲ. ನಮ್ಮ ಭಾಗದಲ್ಲಿ ಸೆಸ್ಕಾಂ 3 ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿದೆ. ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ ರೈತರ ಬೆಳೆ ರಕ್ಷಿಸುವಂತೆ ತಾಲೂಕಿನ ಕಟ್ಟೆಕ್ಯಾತನಹಳ್ಳಿ ಭಾಗದ ರೈತರು ಶಾಸಕ ಎಚ್.ಟಿ.ಮಂಜು ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಪಟ್ಟಣದ ಬಸವೇಶ್ವರ ನಗರದ ಶಾಸಕರ ಗೃಹಕಚೇರಿಗೆ ಆಗಮಿಸಿದ ರೈತರು, ಗ್ರಾಮಸ್ಥರು ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗುತ್ತಿರುವ ಬವಣೆಗಳನ್ನು ವಿವರಿಸಿದರು.

ರಾಜ್ಯ ಸರ್ಕಾರ ರೈತರಿಗೆ ನಿತ್ಯ 7 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿರುವುದಾಗಿ ಹೇಳುತ್ತಿದೆ. ಆದರೆ, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೇ ರೈತರಿಗೆ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ದೂರಿದರು.

ಅಧಿವೇಶನದಲ್ಲಿ ವಿದ್ಯುತ್ ಇಲಾಖೆ ಸಚಿವರು ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ವಿದ್ಯುತ್ ಪೂರೈಕೆ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರದ ಆದೇಶಗಳನ್ನು ಸೆಸ್ಕಾಂ ಅಧಿಕಾರಿಗಳು ಪಾಲಿಸುತ್ತಿಲ್ಲ. ನಮ್ಮ ಭಾಗದಲ್ಲಿ ಸೆಸ್ಕಾಂ 3 ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿದೆ. ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಗಂಟೆಗೆ 10 ರಿಂದ 15 ಸಲ ವಿದ್ಯುತ್ ಕಡಿತವಾಗುತ್ತಿದೆ. ಇದರಿಂದ ನಮ್ಮ ಹೊಲಗದ್ದೆಗಳಿಗೆ ನೀರು ಹಾಯಿಸಲು ಆಗುತ್ತಿಲ್ಲ. ಅಸಮರ್ಪಕ ವಿದುತ್ ಪೂರೈಕೆಯಿಂದ ಕಬ್ಬು ಸೇರಿದಂತೆ ಇತರೆ ಬೆಳೆಗಳು ಒಣಗುತ್ತಿವೆ ಎಂದು ಒಣಗುತ್ತಿರುವ ಕಬ್ಬಿನ ಗದ್ದೆಗಳ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಶಾಸಕರ ಮುಂದೆ ಪ್ರದರ್ಶಿಸಿದರು.

ರೈತರು ವಿದ್ಯುತ್ ಸಮಸ್ಯೆ ಬಗ್ಗೆ ಪಟ್ಟಣದ ಸೆಸ್ಕಾಂ ಅಧಿಕಾರಿಗಳಿಗೆ ಹತ್ತಾರು ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಾವು ಅಧಿಕಾರಿಗಳೊಂದಿಗೆ ಚರ್ಚಿಸಿ ಮಡುವಿನಕೋಡಿ ಮತ್ತು ಕೂಡಲಕುಪ್ಪೆ ಭಾಗದ ಫೀಡರ್‌ಗಳ ಮೂಲಕ ವಿದ್ಯುತ್ ಪೂರೈಕೆ ಮಾಡಿಕೊಡುವಂತೆ ಒತ್ತಾಯಿಸಿದರು.

ನಮ್ಮ ಭಾಗದ ವಿದ್ಯುತ್ ಸಮಸ್ಯೆ ಪರಿಹರಿಸಿ ನಮ್ಮ ಒಣಗುತ್ತಿರುವ ಕಬ್ಬು ಮತ್ತಿತರ ಬೆಳೆಗಳನ್ನು ಸಂರಕ್ಷಿಸದಿದ್ದರೆ ನಾವೆಲ್ಲರೂ ಆತ್ಮಹತ್ಯೆ ದಾರಿ ತುಳಿಯಬೇಕಾಗುತ್ತದೆಂದು ರೈತರು ಶಾಸಕರಿಗೆ ನೀಡಿದ ಮನವಿ ಪತ್ರದಲ್ಲಿ ಎಚ್ಚರಿಸಿದರು.

ರೈತರ ಮನವಿ ಸ್ವೀಕರಿಸಿದ ಶಾಸಕ ಎಚ್.ಟಿ.ಮಂಜು ತಕ್ಷಣ ಸೆಸ್ಕಾಂ ಜಿಲ್ಲಾ ಅಧೀಕ್ಷಕ ಅಭಿಯಂತರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರೈತರ ಸಮಸ್ಯೆ ಚರ್ಚಿಸಿದರು.

ತಾಲೂಕಿನಲ್ಲಿ ತೀವ್ರವಾದ ಬರಗಾಲವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ತಾಲೂಕಿನ ಬಿಲ್ಲೇನಹಳ್ಳಿ ಗ್ರಾಪಂನಲ್ಲಿ ಕುಡಿಯುವ ನೀರಿಗಾಗಿ ಮೂರು ಕೊಳವೆ ಬಾವಿಗಳನ್ನೂ ತೆಗೆಸಿದ್ದರೂ ಅವು ವಿಫಲವಾಗಿವೆ. ಇದೀಗ ಹೊಸದಾಗಿ ತೆಗೆಸಿರುವ ಕೊಳವೆ ಬಾವಿಯಲ್ಲಿ ಒಂದಷ್ಟು ನೀರು ಬಂದಿದೆ. ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಅಗತ್ಯವಾದ ಟಿಸಿಯನ್ನು ಸ್ಥಳೀಯ ಸೆಸ್ಕಾಂ ಅಧಿಕಾರಿಗಳು ಇದುವರೆಗೂ ಹಾಕಿಕೊಟ್ಟಿಲ್ಲ ಎಂದು ಕಿಡಿಕಾರಿದರು.

ಅಘಲಯ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಜೋತು ಬಿದ್ದು ಜನರ ಕೈಗೆಟುವಂತಿದೆ. ಈಗಾಗಲೇ ಇಲ್ಲಿ ಹಲವು ವಿದ್ಯುತ್ ಅವಘಡಗಳು ಸಂಭವಿಸಿದ್ದು ಜನ ಜಾನುವಾರುಗಳು ಬಲಿಯಾಗಿವೆ. ನಿಮ್ಮ ಇಲಾಖೆ ಅಧಿಕಾರಿಗಳ ಕಾರ್ಯಲೋಪಕ್ಕೆ ತಾಲೂಕಿನಲ್ಲಿ ಇನ್ನೆಷ್ಟು ರೈತರು ಬಲಿಯಾಗಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ನನ್ನ ಕ್ಷೇತ್ರದಲ್ಲಿ ಸೆಸ್ಕ್ಂ ಅಧಿಕಾರಿಗಳು ಎಸಗುತ್ತಿರುವ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ. ಟಿ.ಸಿ ಅಳವಡಿಸಲು, ಕೆಟ್ಟು ಹೋದ ಟಿ.ಸಿಯನ್ನು ತೆಗೆದುಕೊಂಡು ಹೋಗಲು, ಸರಿಪಡಿಸಿದ ಟಿ.ಸಿಯನ್ನು ಚಾರ್ಜ್ ಮಾಡಲು, ಟಿ.ಸಿ ಸಾಗಾಣಿಕೆ ಸೇರಿದಂತೆ ಎಲ್ಲದಕ್ಕೂ ರೈತರು ಹಣಕೊಡಬೇಕಾದ ಪರಿಸ್ಥಿತಿಯಿದೆ. ವಿದ್ಯುತ್ ಇಲಾಖೆ ಪ್ರತಿಯೊಂದು ಕೆಲಸಕ್ಕೂ ಹಣ ನಿಗಧಿ ಮಾಡಿಕೊಂಡು ರೈತರ ಸುಲಿಗೆ ಮಾಡುತ್ತಿದೆ ಎಂದರು.

ನಿಮ್ಮ ನೌಕರರಿಗೆ ಸಂಬಳ ನೀಡುತ್ತಿಲ್ಲವೇ?, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಗತ್ಯತೆ ನಮ್ಮ ಕ್ಷೇತ್ರಕ್ಕಿಲ್ಲ. ಸೆಸ್ಕಾಂನಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಇಲ್ಲದಿದ್ದರೆ ರೈತರ ಹಿತ ಸಂರಕ್ಷಣೆಗಾಗಿ ಒಬ್ಬ ಶಾಸಕನಾಗಿ ನಾನೇ ಬೀದಿ ಹೋರಾಟಕ್ಕಿಳಿಯಬೇಕಾಗುತ್ತದೆಂದು ಎಚ್ಚರಿಸಿದರು.

ಈ ವೇಳೆ ಕಟ್ಟೆಕ್ಯಾತನಹಳ್ಳಿ ರೈತರಾದ ರಾಜು, ಕೆ.ಟಿ.ಚಂದ್ರೇಗೌಡ, ಚೇತನ್ ಕುಮಾರ್, ಕೆ.ಪಿ.ರವಿ, ದೇವರಾಜು, ಸುರೇಶ್, ತೀರ್ಥೇಗೌಡ, ಶಶಿಕುಮಾರ್, ಕೆ.ಟಿ.ಪ್ರಕಾಶ್, ಕೆ.ಆರ್.ಲೋಕೇಶ್, ಕಾಳೇಗೌಡ, ಕಾಂತರಾಜು ಸೇರಿದಂತೆ ೩೦ ಕ್ಕೂ ಹೆಚ್ಚು ರೈತರು ಶಾಸಕರಿಗೆ ಮನವಿ ಪತ್ರ ಅರ್ಪಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಮನ್ಮುಲ್ ನಿರ್ದೇಶಕ ಡಾಲು ರವಿ, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ತಾಲೂಕು ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯಕುಮಾರ್ ಸೇರಿದಂತೆ ಹಲವರು ಇದ್ದರು.