ಮಳೆಯ ಕೊರತೆ, ವಿಫಲವಾದ ಕೊಳವೆಬಾವಿಯಿಂದ ವಿಚಲಿತರಾಗಿದ್ದರೂ ನಿಗದಿತ ಸಮಯದಲ್ಲಿ ಕಾಲುವೆಯ ನೀರು ದೊರೆಯಬಹುದು ಎನ್ನುವ ಆಶಾಭಾವದಿಂದ ಬೆಳೆಸಿದ್ದ ಭತ್ತದ ಸಸಿಗಳನ್ನು ರೈತ ನಾಶಪಡಿಸಿದ ಘಟನೆ ತಾಲೂಕಿನ ಮುಷ್ಟಗಟ್ಟೆ ಗ್ರಾಮದಲ್ಲಿ ನಡೆದಿದೆ.

ಕುರುಗೋಡು: ಮಳೆಯ ಕೊರತೆ, ವಿಫಲವಾದ ಕೊಳವೆಬಾವಿಯಿಂದ ವಿಚಲಿತರಾಗಿದ್ದರೂ ನಿಗದಿತ ಸಮಯದಲ್ಲಿ ಕಾಲುವೆಯ ನೀರು ದೊರೆಯಬಹುದು ಎನ್ನುವ ಆಶಾಭಾವದಿಂದ ಬೆಳೆಸಿದ್ದ ಭತ್ತದ ಸಸಿಗಳನ್ನು ರೈತ ನಾಶಪಡಿಸಿದ ಘಟನೆ ತಾಲೂಕಿನ ಮುಷ್ಟಗಟ್ಟೆ ಗ್ರಾಮದಲ್ಲಿ ನಡೆದಿದೆ.

ಮುಷ್ಟಗಟ್ಟೆ ಗ್ರಾಮದ ರೈತ ವೀರನಗೌಡ ತನ್ನ ಹತ್ತು ಎಕರೆ ಗದ್ದೆಗೆ ಬೇಕಾಗುವಷ್ಟು ಭತ್ತದ ಸಸಿಮಡಿಯನ್ನು ಬೆಳೆಸಿದ್ದರು. ಈ ವೇಳೆ ಮಳೆ ಕೈಕೊಟ್ಟಿದೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಯೂ ಬತ್ತಿದ ಪರಿಣಾಮ ನೀರು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಅವಧಿ ಮೀರಿದ ಸಸಿ ನಾಟಿ ಮಾಡಿದರೆ ಉತ್ತಮ ಇಳುವರಿ ಬರುವುದಿಲ್ಲ ಎಂದು ಬೇಸರಗೊಂಡು ಸಸಿಮಡಿಯಲ್ಲಿ ಕುರಿಗಳನ್ನು ಮೇಯಿಸಲು ಬಿಟ್ಟು ನಾಶಪಡಿಸಿದ್ದಾರೆ.

35ರಿಂದ 55 ದಿನಗಳಲ್ಲಿ ಬೆಳೆದ ಭತ್ತದ ಸಸಿಗಳನ್ನು ನಾಟಿ ಮಾಡಿದರೆ ಮಾತ್ರ ಭೂಮಿಯಲ್ಲಿ ಬೇರುಗಳು ಆಳವಾಗಿ ಬೆಳೆಯಲು ಶಕ್ತವಾಗಿರುತ್ತವೆ. 55 ದಿನ ಮೀರಿದ ಸಸಿ ನಾಟಿ ಮಾಡಿದರೆ ಆರಂಭಿಕ ಹಂತದಲ್ಲಿಯೇ ಒಣಗುತ್ತದೆ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿ ದೇವರಾಜ್.

ಪ್ರತಿವರ್ಷ ಜುಲೈ ಎರಡನೇ ವಾರದಲ್ಲಿ ಕಾಲುವೆಗೆ ನೀರು ಬಿಡಲಾಗುತ್ತಿತ್ತು. ಮಳೆಯ ಕೊರತೆಯ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗದ ಪರಿಣಾಮ ನಾಲೆಗೆ ಆಗಸ್ಟ್ ಎರಡನೇ ವಾರ ನೀರು ಹರಿಸಲಾಗಿದೆ. ರೈತರು ಏಕಕಾಲಕ್ಕೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕಾಲುವೆ ನೀರು ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ 90 ದಿನ ಮಾತ್ರ ಕಾಲುವೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಕೈಗೊಂಡಿರುವದರಿಂದ ದೀರ್ಘಾವಧಿ ಬೆಳೆಯಾದ ಮೆಣಸಿನಕಾಯಿ ಬೆಳೆಯುವ ತಾಲೂಕಿನ ರೈತರು ಚಿಂತಾಕ್ರಾಂತರಾಗಿದ್ದಾರೆ.