ಭಾರತೀಯ ಕಿಸಾನ್ ಸಂಘವು ದೇಶದ ಅತಿ ದೊಡ್ಡ ರೈತಪರ ಸಂಘಟನೆಯಾಗಿದ್ದು, ೨೦೨೮ಕ್ಕೆ ಸುವರ್ಣ ಮಹೋತ್ಸವ ಪೂರೈಸಲಿದ್ದು, ಈ ಸಂದರ್ಭ ಒಂದು ಲಕ್ಷ ಗ್ರಾಮಗಳಲ್ಲಿ ಸಮಿತಿ ರಚಿಸುವ ಗುರಿ ಹೊಂದಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೊಂಡಲೆ ಸಾಯಿ ರೆಡ್ಡಿ ಹೇಳಿದರು.

ಪುತ್ತೂರು: ಭಾರತೀಯ ಕಿಸಾನ್ ಸಂಘವು ದೇಶದ ಅತಿ ದೊಡ್ಡ ರೈತಪರ ಸಂಘಟನೆಯಾಗಿದ್ದು, ೨೦೨೮ಕ್ಕೆ ಸುವರ್ಣ ಮಹೋತ್ಸವ ಪೂರೈಸಲಿದ್ದು, ಈ ಸಂದರ್ಭ ಒಂದು ಲಕ್ಷ ಗ್ರಾಮಗಳಲ್ಲಿ ಸಮಿತಿ ರಚಿಸುವ ಗುರಿ ಹೊಂದಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೊಂಡಲೆ ಸಾಯಿ ರೆಡ್ಡಿ ಹೇಳಿದರು.ದಕ್ಷಿಣ ಪ್ರಾಂತ ಪ್ರವಾಸ ಹಿನ್ನೆಲೆಯಲ್ಲಿ ಸೋಮವಾರ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮಕ್ಕೆ ಭೇಟಿ ನೀಡಿದರು. ಒಳಮೊಗ್ರು ಗ್ರಾಮದ ಪರ್ಪುಂಜ ಬಾರಿಕೆ ನಾರಾಯಣ ರೈ ಅವರ ಮನೆಯಲ್ಲಿ ಕಿಸಾನ್ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಿದರು.ರೈತರು ಸಂಘಟನೆಯ ಧ್ಯೇಯ-ಉದ್ದೇಶ ಪಾಲಿಸಿ, ತಮ್ಮ ಹಕ್ಕಿನ ಬಗ್ಗೆ ಅರಿವು ಮೂಡಿಸಿಕೊಂಡು ಹೋರಾಟಕ್ಕೆ ಸಜ್ಜಾಗಬೇಕು ಎಂದ ಅವರು, ಬಿಡದಿ ಟೌನ್‌ಶಿಪ್‌ನಿಂದ ರೈತರಿಗೆ ಆಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸಮಿತಿಗೆ ಬೆಂಬಲ ವ್ಯಕ್ತಪಡಿಸಿದರು. ಸೆಪ್ಟೆಂಬರ್ ತಿಂಗಳಲ್ಲಿ ಅಖಿಲ ಭಾರತ ಮಟ್ಟದ ಮಹಿಳಾ ಕಿಸಾನ್ ಸಮ್ಮೇಳನ ಆಯೋಜಿಸಲಾಗಿದೆ ಎಂದರು. ಮೋಹನ್ ರೈ ನರಿಮೊಗರು ಅವರು ಕಾಡುಪ್ರಾಣಿಗಳ ಹಾವಳಿ ಬಗ್ಗೆ ವಿವರಿಸಿದರು ಭಾರತೀಯ ಕಿಸಾನ್ ಜಿಲ್ಲಾಧ್ಯಕ್ಷ ಎಂ.ಜಿ. ಸತ್ಯನಾರಾಯಣ , ಜಿಲ್ಲಾ ಕಾರ್ಯದರ್ಶಿ ರಾಮಪ್ರಸಾದ್, ತಾಲೂಕು ಅಧ್ಯಕ್ಷ ಜನಾರ್ದನ ರೈ ಪಡ್ಡಂಬೈಲ್, ಕಾರ್ಯದರ್ಶಿ ಮಹಾಬಲ ರೈ, ದ. ಪ್ರಾಂತ್ಯ ಪ್ರಮುಖ್ ಸುಬ್ರಾಯ , ದ. ಕನ್ನಡ ಜಿಲ್ಲಾ ಕಿಸಾನ್ ಉಸ್ತುವಾರಿ ಕೊಡಗಿನ ಪ್ರವೀಣ್ ಭೀಮಯ್ಯ, ಮಹಿಳಾ ಪ್ರಮುಖ್ ನಯನಾ ರೈ, ದಿವ್ಯಪ್ರಸಾದ್, ಪುನೀತ್ ರೈ ಚೆನ್ನಾವರ, ಪ್ರವೀಣ್ ಚೆನ್ನಾವರ, ಕೃಷ್ಣಪ್ಪ ಚೆನ್ನಾವರ ಮೊದಲಾದವರಿದ್ದರು. ಅನಿಲ್ ರೈ ಪರ್ಪುಂಜ ಬಾರಿಕೆ ಸ್ವಾಗತಿಸಿ, ವಂದಿಸಿದರು.