ಸಾರಾಂಶ
ಹೊಸಪೇಟೆಯಲ್ಲಿ ರೈತ ದಿನಾಚರಣೆ ಪ್ರಯುಕ್ತ ರೈತರು, ಮಕ್ಕಳಿಗೆ ಸನ್ಮಾನ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಆಯೋಜನೆಗೆ ನಿರ್ಧರಿಸಲಾಗಿದೆ.
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಮೊದಲ ಬಾರಿ ರೈತ ದಿನಾಚರಣೆಯೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಹೊಸ ಪರಂಪರೆ ಆರಂಭಿಸಲಾಗುವುದು ಎಂದು ರಾಜ್ಯಾಧ್ಯಕ್ಷ ವಾಸುದೇವ ಮೇಟಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಕೇವಲ ಘೋಷಣೆಯಲ್ಲಿ ಕಾಲ ಕಳೆಯುತ್ತಿದೆ. ಸರ್ಕಾರ ಬಹುತೇಕ ತಾಲೂಕು ಬರ ಘೋಷಣೆ ಮಾಡಿದರೂ ಪರಿಹಾರ ಮಾತ್ರ ಶೂನ್ಯವಾಗಿದೆ. ರಾಜಕೀಯ ಘೋಷಣೆ ಈಡೇರಿಸಲು ಸರ್ಕಾರಕ್ಕೆ ಉತ್ಸಾಹ ಇದೆ. ಆದರೆ ರೈತರ ಸಮಸ್ಯೆ ಪರಿಹರಿಸಲು ಹಣವಿಲ್ಲವೇ ಎಂದು ಪ್ರಶ್ನಿಸಿದರು.ಇಂತಹ ಸಮಸ್ಯೆಯನ್ನು ನಿವಾರಿಸಲೆಂದೆ ಮೊದಲ ಬಾರಿ ವಿಜಯನಗರ ಜಿಲ್ಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ಕಾರ್ಯಕರ್ತರನ್ನು ಕರೆದು ಅವರ ಅಹವಾಲುಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ ಎಂದರು.
ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ರೈತ ಸಂಘದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು. ಈ ಕುರಿತು ಸಿಎಂ ಸಿದ್ದರಾಮಯ್ಯನವರ ಬಳಿಯೂ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು. ತುಂಗಭದ್ರಾ ಜಲಾಶಯದ ಹೂಳು ತೆರವಿಗೂ ಕ್ರಮ ವಹಿಸಲಾಗುವುದು ಎಂದರು.ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿ, ಹೊಸಪೇಟೆಯಲ್ಲಿ ಡಿ. ೨೭ರಂದು ಒಳಾಂಗಣ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ. ರೈತರು, ರೈತರ ಮಕ್ಕಳು ಸಮಾಜದ ಅಬಲವರ್ಗವನ್ನು ಗುರುತಿಸಿ ಸನ್ಮಾನಿಸಲಾಗುವುದು. ನೇಗಿಲು ಪೂಜೆ ಸೇರಿದಂತೆ ಉದ್ಘಾಟನಾ ಕಾರ್ಯಕ್ರಮ, ಉಪನ್ಯಾಸ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಡಿ. ೨೭ರಂದು ಬೆಳಗ್ಗೆ ೯ ಗಂಟೆಗೆ ವಡಕರಾಯ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಕೊಟ್ರೇಶ್, ಸಂಗಣ್ಣ ಬಾಗೇವಾಡಿ, ಹನುಮಂತಪ್ಪ, ಶಾರದಾ ಕೆ., ಕುಸುಮಾ, ಪ್ರಕಾಶ, ಸರಳಾಕಾವ್ಯ, ವೆಂಕೋಬಪ್ಪ ಕಣಿವೆಹಳ್ಳಿ, ಕಾವ್ಯ, ಭೀಮಣ್ಣ ಇದ್ದರು.