ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವು

| Published : Nov 06 2025, 01:45 AM IST

ಸಾರಾಂಶ

ಮೂಡನಹಳ್ಳಿ ಸರ್ವೇ ನಂ. 7/1 ಮತ್ತು 4/2 ರಲ್ಲಿ ಮಂಜೇಗೌಡ ಬಿನ್ ದೇವೇಗೌಡರ ಹೆಸರಿಗೆ ಆರ್.ಟಿ.ಸಿ ಇದ್ದು 1975 ರಲ್ಲಿಯೇ ಸದರಿ ಭೂಮಿಯನ್ನು ಸರ್ಕಾರ ಭೂ ಸ್ವಾಧೀನ ಮಾಡಿದ್ದು, ಜಮೀನು ದುರಸ್ಥಿ ವೇಳೆಯೇ ಭೂ ಪರಿಹಾರ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ/ಕಿಕ್ಕೇರಿ

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ತಾಲೂಕಿನ ಮೂಡನಹಳ್ಳಿಯ ರೈತ ಮಂಜೇಗೌಡರು(55) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮೃತ ಮಂಜೇಗೌಡರ ಸ್ವಾಧೀನದಲ್ಲಿದ್ದ ಅರಣ್ಯ ಇಲಾಖೆಗೆ ಸೇರಿದ್ದ ಜಮೀನನ್ನು ಸರ್ಕಾರವು ವಾಪಸ್ ಪಡೆದುಕೊಂಡಿತ್ತು. ಈ ಸಂಬಂಧ ಮಂಜೇಗೌಡರು ಸಂಬಂಧಿಸಿದ ಭೂ ದಾಖಲೆಗಳನ್ನು ಸಲ್ಲಿಸಿ ಸೂಕ್ತ ಪರಿಹಾರ ಕೊಡುವಂತೆ ಕಂದಾಯ ಇಲಾಖೆ ಬಳಿ ನಿವೇದಿಸಿಕೊಂಡಿದ್ದರು.

ಆದರೆ, ಸರ್ಕಾರದ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮೃತ ಮಂಜೇಗೌಡರ ದೂರಿಗೆ ಸ್ಪಂದಿಸಿರಲಿಲ್ಲ. ಇದರಿಂದ ಬೇಸತ್ತ ಮಂಜೇಗೌಡರು ಡೀಸಿ ಕಚೇರಿ ಮುಂದಿನ ಪಾರ್ಕಿನಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನು ನೋಡಿದ ಪಾರ್ಕಿನಲ್ಲಿದ್ದ ಸಾರ್ವಜನಿಕರು ಬೆಂಕಿ ನಂದಿಸಿ ತೀವ್ರವಾಗಿ ಗಾಯಗೊಂಡಿದ್ದ ಮಂಜೇಗೌಡರನ್ನು ಪೊಲೀಸರ ಸಹಕಾರದಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದರು. ರೈತನ ದೇಹ ಶೇ.60 ಭಾಗ ಸುಟ್ಟು ಹೋಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಜೇಗೌಡರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಶವ ಹಸ್ತಾಂತರಿಸಿದ್ದಾರೆ. ಆಸ್ಪತ್ರೆಯಲ್ಲಿ ಹಾಗೂ ಮೃತರ ಸ್ವಗ್ರಾಮ ಮೂಡನಹಳ್ಳಿಯಲ್ಲಿ ಬಂಧುಗಳ ಆಕ್ರಂದನ ಮುಗಿಲುಮುಟ್ಟಿತ್ತು.

ಜೆಡಿಎಸ್ ನಾಯಕ ನಿಖಿಲ್ , ಶಾಸಕ ಭೇಟಿ:

ರೈತ ಮಂಜೇಗೌಡ ಮೃತಪಟ್ಟ ಸುದ್ದಿ ತಿಳಿದು ಕ್ಷೇತ್ರ ಶಾಸಕ ಎಚ್.ಟಿ.ಮಂಜು ಮೂಡನಹಳ್ಳಿಯ ಮೃತ ರೈತನ ಮನೆಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತನ ರೈತನ ಕುಟುಂಬಸ್ಥರಿಂದ ಮಾಹಿತಿ ಪಡೆದ ಶಾಸಕರು ದೂರವಾಣಿ ಮೂಲಕ ಜಿಲ್ಲಾಧಿಕಾರಿ ಡಾ.ಕುಮಾರ್ ಅವರನ್ನು ಸಂಪರ್ಕಿಸಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡರು. ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಪರಿಹಾರ ನೀಡುವಂತೆ ಸೂಚಿಸಿದರು.

ರೈತ ಮಂಜೇಗೌಡ ಮೃತಪಟ್ಟ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಮಂಜುರೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿ ರೈತನ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸರ್ಕಾರದ ಅಧಿಕಾರಿಗಳ ಲಂಚಗುಳಿತನಕ್ಕೆ ರೈತನ ಬಲಿ ಪಡೆಯಲಾಗಿದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ನಾನು ಯಾರನ್ನು ದೂಷಿಸುವುದಿಲ್ಲ. ಸರ್ಕಾರ ಈ ರೈತನ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮೃತ ರೈತನ ಅಂತಿಮ ದರ್ಶನ ಪಡೆದರು. ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ತಾಲೂಕು ಆಡಳಿತದ ಪರ ವಿಕ್ಟೋರಿಯಾ ಆಸ್ಪತ್ರೆಯಿಂದ ರೈತನ ಶವವನ್ನು ಮೃತನ ಸ್ವಗ್ರಾಮಕ್ಕೆ ತರಲು ಸಹಕರಿಸಿದರು.ಪರಿಹಾರದ ಭರವಸೆ ನೀಡಿದ ಡೀಸಿ ಡಾ. ಕುಮಾರ್:ಮೂಡನಹಳ್ಳಿ ಸರ್ವೇ ನಂ. 7/1 ಮತ್ತು 4/2 ರಲ್ಲಿ ಮಂಜೇಗೌಡ ಬಿನ್ ದೇವೇಗೌಡರ ಹೆಸರಿಗೆ ಆರ್.ಟಿ.ಸಿ ಇದ್ದು 1975 ರಲ್ಲಿಯೇ ಸದರಿ ಭೂಮಿಯನ್ನು ಸರ್ಕಾರ ಭೂ ಸ್ವಾಧೀನ ಮಾಡಿದ್ದು, ಜಮೀನು ದುರಸ್ಥಿ ವೇಳೆಯೇ ಭೂ ಪರಿಹಾರ ನೀಡಲಾಗಿದೆ. ಒಮ್ಮೆ ಪರಿಹಾರ ಪಡೆದುಕೊಂಡ ಭೂಮಿಗೆ ಮತ್ತೆ ಪರಿಹಾರ ನೀಡಲು ಸಾಧ್ಯವಿಲ್ಲ. ಸದರಿ ಭೂಮಿಗೆ ಪರಿಹಾರ ಪಡೆದುಕೊಂಡಿರುವ ವಿಚಾರ ಇಂದಿನವರಿಗೆ ತಿಳಿದಂತಿಲ್ಲ. ಆದ ಕಾರಣ ರೈತ ಮಂಜೇಗೌಡರು ಪರಿಹಾರಕ್ಕಾಗಿ ಪರಿತಪ್ಪಿಸಿದ್ದಾರೆ. ಸರ್ಕಾರಿ ದಾಖಲೆ ಪ್ರಕಾರ ಪರಿಹಾರಕ್ಕೆ ಸಂಬಂಧಿಸಿದ ಯಾವುದೇ ಅರ್ಜಿ ಬಾಕಿಯಿಲ್ಲ. ಈ ಬಗ್ಗೆ ಮತ್ತೊಮ್ಮೆ ದಾಖಲೆಗಳನ್ನು ಪರಿಶೀಲಿಸುತ್ತೇನೆ, ರೈತನ ಆತ್ಮಹತ್ಯೆ ಪ್ರಕರಣದಡಿ ಮೃತ ರೈತನ ಕುಟುಂಬಕ್ಕೆ ಅಗತ್ಯ ಪರಿಹಾರವನ್ನು ಶೀಘ್ರವೇ ನೀಡುವುದಾಗಿ ಡೀಸಿ ಡಾ.ಕುಮಾರ ತಿಳಿಸಿದ್ದಾರೆ.

------------

‘ನಮ್ಮ ಕುಟುಂಬದ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಪರಿಹಾರ ನೀಡಿರಲಿಲ್ಲ. ಪರಿಹಾರಕ್ಕೆ ಬದಲಾಗಿ ನಮ್ಮ ತಂದೆ ಗೋಮಾಳ ಜಾಗ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಮಲ್ಲೇಹಳ್ಳಿ ಎಲ್ಲೆ ಬಳಿ ಎರಡೂವರೆ ಎಕರೆ ಗೋಮಾಳದಲ್ಲಿ ಕಳೆದ 20 ವರ್ಷಗಳಿಂದ ಅನುಭವದಲ್ಲಿದ್ದೇವೆ. ಆ ಜಾಗವನ್ನು ಮಂಜೂರು ಮಾಡುವಂತೆ ತಹಸೀಲ್ದಾರ್, ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಹಾಕಿದ್ದು, ಅಧಿಕಾರಿಗಳು ದುಡ್ಡು ಪಡೆದು ಅಲೆದಾಡಿಸಿ ನಿರ್ಲಕ್ಷಿಸಿದ್ದರು. ಪರಿಹಾರವೂ ಸಿಗದೆ, ಜಮೀನು ಮಂಜೂರಾಗದೆ ತಂದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.’

ಪುನೀತ್, ಮೃತ ರೈತ ಮಂಜೇಗೌಡರ ಪುತ್ರ

------------