ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರದ ಆದೇಶಕ್ಕೆ ಮಣಿದು ರಾಜ್ಯ ಸರ್ಕಾರ ತಮಿಳುನಾಡಿಗೆ ನಿತ್ಯ 16 ಸಾವಿರ ಕ್ಯುಸೆಕ್‌ ನೀರನ್ನು ಹರಿಸುತ್ತಿದೆ ಎಂದು ಜಿಲ್ಲೆಯ ರೈತರು ಆರೋಪಿಸಿದ್ದಾರೆ. ಕೆಆರ್‌ಎಸ್‌ನಿಂದ 6000 ಹಾಗೂ ಕಬಿನಿಯಿಂದ 10000 ಕ್ಯುಸೆಕ್‌ ನೀರು ಹರಿದು ಹೋಗುತ್ತಿದೆ. ಆದರೆ, ಅಧಿಕಾರಿಗಳು 3165 ಕ್ಯುಸೆಕ್‌ ನೀರನ್ನು ಮಾತ್ರ ಬಿಡಲಾಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಆರ್‌ಎಸ್‍ ಜಲಾಶಯದಿಂದ ತಮಿಳುನಾಡಿಗೆ ರಾಜ್ಯ ಸರ್ಕಾರ ಕದ್ದು ಮುಚ್ಚಿ ನೀರು ಹರಿಸುತ್ತಿದೆ. ಇದರಿಂದಾಗಿ ಒಂದು ಬೆಳೆಗೂ ನೀರು ಸಿಗಲಾರದು ಎಂಬ ಆತಂಕ ರೈತರಲ್ಲಿ ಸೃಷ್ಟಿಯಾಗಿದೆ.

ಪ್ರಸ್ತುತ ಕೆಆರ್‌ಎಸ್‌ನಲ್ಲಿ 109.75 ಅಡಿ ನೀರಿದ್ದು, ಒಳಹರಿವು 2274 ಕ್ಯೂಸೆಕ್‍ ಆಗಿದೆ. ಜಲಾಶಯದಿಂದ 3165 ಕ್ಯೂಸೆಕ್‍ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ನದಿಯಂಚಿನ ದಡಗಳು ಮುಳುಗಡೆಯಾಗಿರುವುದು ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಹರಿಸುತ್ತಿರುವುದಕ್ಕೆ ಸಾಕ್ಷಿ ಎಂದು ರೈತರು ಆರೋಪ ಮಾಡಿದ್ದಾರೆ. ಕಬಿನಿ ನೀರಿನ ಮಟ್ಟ ಇಳಿಮುಖ:

ಕಳೆದೆರಡು ದಿನಗಳಿಂದ ಕೇರಳದಲ್ಲಿ ಮಳೆ ಕ್ಷೀಣವಾಗಿರುವ ಹಿನ್ನೆಲೆಯಲ್ಲಿ ಎಚ್‌.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದಲ್ಲಿಯೂ ನೀರು ಇಳಿಮುಖವಾಗಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಇದ್ದು, ಶನಿವಾರ ಜಲಾಶಯದ ನೀರಿನ ಮಟ್ಟ 2281.63 ಇತ್ತು. ಭಾನುವಾರ 2280.89 ಆಗಿದೆ. ಶನಿವಾರ 8701 ಕ್ಯುಸೆಕ್‌ನಷ್ಟಿದ್ದ ಒಳ ಹರಿವು ಭಾನುವಾರ 8559 ಕ್ಯುಸೆಕ್‌ನಷ್ಟಾಗಿದೆ. ಹೊರಹರಿವು 13600 ಕ್ಯುಸೆಕ್‌ ನಷ್ಟಿತ್ತು.ಕಾವೇರಿ: ಇಂದು ಸುಪ್ರೀಂನಲ್ಲಿ ತಮಿಳುನಾಡು ಅರ್ಜಿ ವಿಚಾರಣೆ:


ನಮ್ಮ ಪಾಲಿನ ಕಾವೇರಿ ನೀರು ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ನ್ಯಾ.ವಿಕ್ರಂನಾಥ್‌ ಮತ್ತು ನ್ಯಾ.ಸಂದೀಪ್‌ ಮೆಹ್ತಾ ಅವರ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದೆ. ಆ.12ರಂದು ತಮಿಳುನಾಡು ಸರ್ಕಾರ, ಡಿಎಂಕೆ ಪಕ್ಷ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಆ.17ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಅದರಂತೆ ಇದೀಗ ಸೋಮವಾರ ಕಲಾಪದ ಪಟ್ಟಿಯಲ್ಲಿ ಈ ಅರ್ಜಿ ಸೇರ್ಪಡೆಯಾಗಿದೆ. ಮಳೆ ಕೊರತೆ ವರ್ಷದಲ್ಲಿ ನಮ್ಮ ಪಾಲಿನ ಕಾವೇರಿ ನೀರಿನ ಪಾಲು ಸಿಗುತ್ತಿಲ್ಲ ಎಂದು ಹೇಳಿ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆ.3ರಂದು ವಿಜಯ್‌ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ನಡುವೆ ಡಿಎಂಕೆ, ಇತರರೂ ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.ಮೇಕೆದಾಟು ಯೋಜನೆಗೆ ಅನುಮತಿ ಬೇಡ:

ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ತಮಿಳುನಾಡು ಕಾಂಗ್ರೆಸ್‌ ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಈ ವಿಷಯದಲ್ಲಿ ನಮ್ಮ ನಿಲುವು ಬದಲಾಗದು ಎಂದು ಅದರ ಅಧ್ಯಕ್ಷ ಮಾಣಿಕ್ಯಂ ಟಾಗೋರ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಿಂದ ಪಕ್ಷಾತೀತವಾಗಿ ಬರುತ್ತಿರುವ ಒತ್ತಡದ ಹೊರತಾಗಿಯೂ ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಪರವಾನಗಿ ನೀಡಬಾರದು. ಒಂದೊಮ್ಮೆ ಕೊಟ್ಟಲ್ಲಿ, ನಮ್ಮ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ತಮಿಳುನಾಡು ಒಗ್ಗಟ್ಟಾಗಿ ನಿಂತು, ತನ್ನ ನೀರಿನ ಪಾಲನ್ನು ಪಡೆಯಲು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನುಬದ್ಧ ಪರಿಹಾರ ಕಂಡುಕೊಳ್ಳಬೇಕು’ ಎಂದರು. ಜತೆಗೆ, ಈ ವಿಷಯವಾಗಿ ಧ್ವನಿಯೆತ್ತದ ಪಿಎಂಕೆ, ಬಿಜೆಪಿ ನಾಯಕರ ಮೌನವನ್ನು ಪ್ರಶ್ನಿಸಿದರು.