ಕನ್ನಡಪ್ರಭ ವಾರ್ತೆ ಸವದತ್ತಿ ಹೆಸರು ಮತ್ತು ಉದ್ದು ಖರೀದಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಗುರುವಾರ ಪಟ್ಟಣದ ಎಪಿಎಂಸಿ ಬಳಿಯ ಚನ್ನಮ್ಮ ವೃತ್ತದಲ್ಲಿ ತಮ್ಮ ತಮ್ಮ ಟ್ರ‍್ಯಾಕರ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸವದತ್ತಿಹೆಸರು ಮತ್ತು ಉದ್ದು ಖರೀದಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಗುರುವಾರ ಪಟ್ಟಣದ ಎಪಿಎಂಸಿ ಬಳಿಯ ಚನ್ನಮ್ಮ ವೃತ್ತದಲ್ಲಿ ತಮ್ಮ ತಮ್ಮ ಟ್ರ‍್ಯಾಕರ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು.
ರೈತರು ತಾವು ಬೆಳೆದ ಹೆಸರು ಮತ್ತು ಉದ್ದು ಬೆಳೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಂದಾಗ ಅಲ್ಲಿ ಮೊದಲು ಗುಣಮಟ್ಟ ಪರಿಶೀಲನೆ ಮಾಡಿ ನಂತರ ಸೆಂಟ್ರಲ್ ವೇರ್ ಹೌಸ್‌ಗೆ ಕಳುಹಿಸಲಾಗುತ್ತಿದೆ. ಅಲ್ಲಿ ಅವರು ಈ ಬೆಳೆಗಳು ಸರಿಯಾಗಿಲ್ಲ ಎಂದು ಹೆಚ್ಚಿನ ಪ್ರಮಾಣದ ರೈತರ ಕಾಳುಗಳನ್ನು ಮರಳಿ ಕಳಿಸುತ್ತಿರುವುದರಿಂದ ರೈತರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ರೈತ ಮುಖಂಡ ಅರವಿಂದ ವೆಂಕರಡ್ಡಿ ಮಾತನಾಡಿ, ಅತೀ ವೃಷ್ಟಿಯಿಂದ ರೈತರ ಬೆಳೆಗಳು ಸಾಕಷ್ಟು ಹಾನಿಯಾಗಿದ್ದು, ಅಳಿದುಳಿದ ಬೆಳೆಗಳನ್ನು ಸರ್ಕಾರ ಬೆಂಬಲ ಬೆಲೆಯಲ್ಲಿ ಹೆಸರು ಮತ್ತು ಉದ್ದನ್ನು ಖರೀದಿಸುವ ಕೇಂದ್ರಕ್ಕೆ ತಂದಲ್ಲಿ ಇಲ್ಲಿಯೂ ಅದನ್ನು ಸರಿಯಾಗಿಲ್ಲ ಎಂದು ತಳ್ಳಿಹಾಕುತ್ತಿದ್ದಾರೆ. ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ತಂದು ಸಿಲುಕಿಸುತ್ತಿದೆ. ಪ್ರಾರಂಭದಲ್ಲಿಯೇ ರಿಜೆಕ್ಟ್ ಮಾಡಿದರೆ ರೈತರು ಅವುಗಳನ್ನು ಸ್ವಚ್ಛ ಮಾಡಿ ಕೊಡುತ್ತಾರೆ. ಇಲ್ಲವಾದಲ್ಲಿ ಬೇರೆ ಎಲ್ಲಾದರೂ ಮಾರಾಟ ಮಾಡಿ ಹೋಗುತ್ತಾರೆ. ಅಲ್ಲಿ ಆಯ್ಕೆ ಮಾಡಿದ ನಂತರ ಅಲ್ಲಿ ಒಳಗಡೆ ಕಳಿಸಿ ನಂತರ ರಿಜೆಕ್ಟ್ ಮಾಡುವುದು ಸರಿಯಲ್ಲ. ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.ತಹಸೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗಣ್ಣವರ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮತ್ತು ಎಪಿಎಂಸಿ ಅಧಿಕಾರಿಗಳು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಅತಿವೃಷ್ಠಿಯಿಂದ ಬೆಳೆಗಳು ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದು, ಅಧಿಕಾರಿಗಳು ರೈತರೊಂದಿಗೆ ಸಹನೆಯಿಂದ ವರ್ತಿಸಬೇಕು. ರೈತರು ಬೆಳೆದ ಬೆಳೆಗಳನ್ನು ಖರೀದಿಸುವಲ್ಲಿ ಸರ್ಕಾರವು ಮಾಡಿದ ಮಾನದಂಡಗಳ ಪ್ರಕಾರ ಬೆಳೆಗಳನ್ನು ಖರೀದಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ರೈತರು ಸಹ ಸಹಕಾರ ನೀಡಬೇಕು. ರೈತರ ಬೆಳೆಗಳನ್ನು ಖರೀದಿಸುವಾಗ ಅಧಿಕಾರಿಗಳು ರೈತರಿಗೆ ತೊಂದರೆಯಾಗದಂತೆ ನೋಡಿಕೊಂಡು ಖರೀದಿಸುವಂತೆ ತಿಳಿಸಿದರು.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಧ್ಯಕ್ಷರ ಬಸವರಾಜ ಬಿಜ್ಜೂರ, ಶಂಕರ ಬಗನಾಳ, ಸಿಂಧೂರ್ ತೆಗ್ಗಿ, ಸತ್ಯಪ್ಪ ಉಂಡಿ, ಯಲ್ಲಪ್ಪ ಮೂಲಿಮನಿ, ಬಸವರಾಜ ಸರದೇಸಾಯಿ, ಯಲ್ಲಪ್ಪ ಗಾಣಿಗೇರ, ಮಹೇಶ ಬಾಗಿಲದ, ಅಶೋಕ ವೆಂಕರೆಡ್ಡಿಯವರ, ಸುರೇಶ ಕಮತಗಿ, ಜೈಕರ್ ದೊಡಮನಿ, ರಾಘವೇಂದ್ರ ಸಂಗ್ರೇಶಿ ಸೇರಿದಂತೆ ಇನ್ನು ಅನೇಕ ರೈತರು ಉಪಸ್ಥಿತರಿದ್ದರು.