ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ತೆಲಂಗಾಣಕ್ಕೆ ಆಲಮಟ್ಟಿ ಜಲಾಶಯದಿಂದ ೧.೨೭ ಟಿಎಂಸಿ ನೀರು ಹರಿಸಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪ್ರತಿಕೃತಿ ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಗರದ ಅಂಬೇಡ್ಕರ್ ವೃತ್ತದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವು ತಳೆದ ಜಲಸಂಪನ್ಮೂಲ ಸಚಿವರು ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಅವಳಿ ಜಿಲ್ಲೆಯ ರೈತರ ಬದುಕನ್ನು ಕಿತ್ತುಕೊಂಡು ತೆಲಂಗಾಣಕ್ಕೆ ನೀರು ಹರಿಸಿದ್ದು, ಶಬ್ಬಾಶಗಿರಿ ಪಡೆದುಕೊಳ್ಳಲು. ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಇಂದಿನಿಂದ ನಮ್ಮ ಪಾಲಿಗೆ ಸತ್ತು ಹೋಗಿದ್ದಾರೆ. ಹೋಳಿ ಹಬ್ಬ ಇನ್ನು ಮುಂದೆ ಇರುವಾಗಲೇ ಈಗಲೇ ನಮಗೆ ಶಂಕವಾದ್ಯ ಮೊಳಗಿಸಲು ಸರ್ಕಾರ ಎಡೆಮಾಡಿಕೊಟ್ಟಿದೆ ಎಂದು ದೂರಿದರು.ನಮಗೆ ಕುಡಿಯಲು ನೀರಿಲ್ಲ. ಸದ್ಯ ಆಲಮಟ್ಟಿ ಆಣೆಕಟ್ಟಿನಲ್ಲಿ ಕೇವಲ ೩೩ ಟಿಎಂಸಿ ಮಾತ್ರ ನೀರು ಉಳಿದಿವೆ. ಇದರಲ್ಲಿ ಕೈಗಾರಿಕೆ ಉದ್ದೇಶಕ್ಕೆ ಜಲಚರ, ಜನ ಜಾನುವಾರುಗಳಿಗೆ ಹಾಗೂ ಜಿಲ್ಲೆಯ ರೈತರಿಗೆ ನೀರು ಮೀಸಲಿಡಬೇಕು. ಇರುವ ಅಲ್ಪಸ್ವಲ್ಪ ನೀರಿನಲ್ಲಿ ೫ ಟಿಎಂಸಿ ನೀರು ಹರಿಸಲು ತೆಲಂಗಾಣ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರು ದೊಡ್ಡ ಮಾನವೀಯತೆ ತೋರಿಸಿ ನೀರು ಹರಿಸಿದ್ದು, ನಮ್ಮ ಜಿಲ್ಲೆಯ ರೈತರಿಗೆ ಘೋರಿ ತೋಡಲು ಹೊರಟಿದೆ. ಈ ಹಿಂದೆ ನ್ಯಾಯಮೂರ್ತಿ ಬ್ರಿಜೆಶ್ ಕುಮಾರ ನೇತೃತ್ವದ ನ್ಯಾಯಾಧೀಕರಣ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ ಕ್ಕೆ ನೀರು ನಿಲ್ಲಿಸಲು ಅನುಮತಿ ಕೊಟ್ಟಾಗ ಸುಮ್ಮನಿರದ ತೆಲಂಗಾಣ ಸರ್ಕಾರ ಟ್ರಿಬ್ಯೂನಲ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಆಣೆಕಟ್ಟೆಯನ್ನು ಎತ್ತರಿಸಲು ತಡೆಯಾಜ್ಞೆ ತಂದು ರೈತರನ್ನು ಹಾಳುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ರೈತರ ಪಾಲಿಗೆ ಜೀವಂತ ಹೆಣವಾಗಿದ್ದಾರೆ. ಇವರ ರೈತ ವಿರೋಧಿ ಹಾಗೂ ಜನ ವಿರೋಧಿ ಆಡಳಿತ ನೋಡಿದರೆ ಇಡೀ ರಾಜ್ಯವನ್ನೇ ಹಾಳು ಮಾಡುವುದರಲ್ಲಿ ಸಂದೇಹವಿಲ್ಲ. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ರೈತ ವಿರೋಧಿ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪಾಂಡು ಹ್ಯಾಟಿ, ಉಮೇಶ ವಾಲೀಕಾರ, ವಿಠ್ಠಲ ಬಿರಾದಾರ, ರಾಜೇಸಾಬ ವಾಲಿಕಾರ, ಗುರಲಿಂಗಪ್ಪ ಪಡಸಲಗಿ, ದಾವಲಸಾಬ ನದಾಫ, ಚನಬಸಪ್ಪ ಸಿಂಧೂರ, ಗಿರಮಲ್ಲಪ್ಪ ದೊಡಮನಿ, ಹಣಮಂತರಾಯ ಕಲಬುರ್ಕಿ, ಬಸವರಾಜ ಮಾಡ್ಯಾಳ, ಲಾಲಸಾಬ ಹಳ್ಳೂರ, ಶಿವಶರಣ ನಾಗರೆಡ್ಡಿ, ಆನಂದ ನಾಗರೆಡ್ಡಿ, ಸಾಹೇಬಗೌಡ ಹೊಸೂರ, ಮುದಕಪ್ಪಗೌಡ ಸರೂರ, ಪರಶುರಾಮ ಹೊಸೂರ, ಹಣಮಂತ ವಾಲೀಕಾರ, ಬಸವರಾಜ ನಾಗರೆಡ್ಡಿ, ಯಮನೂರಪ್ಪ ಮಾದರ, ಮಾರುತಿ ಹೂಗಾರ, ಸೋಮೇಶ ನಾಗರೆಡ್ಡಿ, ಹಣಮಂತರಾಯ ಹೂಗಾರ, ಶೇಖಪ್ಪ ಮಾದರ, ಶರಣು ವಾಲಿಕಾರ, ಕಿರಣ ನಾಟೀಕಾರ, ಗುರಲಿಂಗಯ್ಯ ತೆಗ್ಗಿನಮಠ, ಕಾಸೀನಾಥ ಬಿರಾದಾರ, ಮಡಿವಾಳಪ್ಪ ನಾಗರೆಡ್ಡಿ, ಪರಸು ಹೊಸೂರ, ಮಲಿಗೆಪ್ಪ ಸಾಸನೂರ, ಮಂಜುನಾಥ ಸಜ್ಜನ, ಶ್ರೀಶೈಲ ಹೊಸೂರ, ಶಿವು ನಾಗರೆಡ್ಡಿ, ಮಾರುತಿ ಹೂಗಾರ ಮುಂತಾದವರು ಹಾಜರಿದ್ದರು.