ಶ್ರೀರಂಗಪಟ್ಟಣ ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ರೈತರು ಪೀಹಳ್ಳಿಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಕಳೆದ 10 ತಿಂಗಳಿಂದ ಬೆಳೆದಿರುವ ಕಬ್ಬಿನ ಬೆಳೆ ಮಧ್ಯೆ ರಸ್ತೆ ನಿರ್ಮಿಸುತ್ತಿದ್ದು, ಇನ್ನೇನು ಕಟಾವು ಹಂತಕ್ಕೆ ಬಂದ ಬೆಳೆಯನ್ನು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗ ಹಾಗೂ ಪೊಲೀಸರು ಜೆಸಿಬಿ ಮೂಲಕ ಹಾನಿ ಮಾಡಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಸ್ತೆ ನಿರ್ಮಾಣಕ್ಕಾಗಿ ಬೆಳೆದು ನಿಂತಿರುವ ಕಬ್ಬಿನ ಬೆಳೆಯನ್ನೇ ಜೆಸಿಬಿ ಮೂಲಕ ಅಧಿಕಾರಿಗಳು ನಾಶ ಮಾಡಲು ಮುಂದಾಗಿದ್ದು, ಬೆಳೆ ಕಟಾವಿನ ನಂತರ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿ ಬಿಜೆಪಿ ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ ನೇತೃತ್ವದಲ್ಲಿ ರೈತರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಮಾಡಿದರು.

ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ ರೈತರು ಪೀಹಳ್ಳಿಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಕಳೆದ 10 ತಿಂಗಳಿಂದ ಬೆಳೆದಿರುವ ಕಬ್ಬಿನ ಬೆಳೆ ಮಧ್ಯೆ ರಸ್ತೆ ನಿರ್ಮಿಸುತ್ತಿದ್ದು, ಇನ್ನೇನು ಕಟಾವು ಹಂತಕ್ಕೆ ಬಂದ ಬೆಳೆಯನ್ನು ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗ ಹಾಗೂ ಪೊಲೀಸರು ಜೆಸಿಬಿ ಮೂಲಕ ಹಾನಿ ಮಾಡಲು ಮುಂದಾಗಿದ್ದಾರೆ. ಇದಕ್ಕೆ ತಡೆ ನೀಡುವಂತೆ ಎಂದು ತಾಲೂಕು ಕಚೇರಿಯ ಶಿರಸ್ತೇದಾರ್ ಪ್ರಸನ್ನಗೆ ಮನವಿ ಮಾಡಿದರು.

ನಮ್ಮ ತಾತಂದಿರ ಕಾಲದಿಂದಲೂ ಈ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಈ ಜಮೀನಿನ ಮಧ್ಯೆ ಯಾವುದೇ ರಸ್ತೆಗಳಿಲ್ಲ. ಆದರೂ ಕಂದಾಯ ಇಲಾಖೆ ಅಧಿಕಾರಿಗಳು ಈ ಹಿಂದೆ ಇಲ್ಲಿ ರಸ್ತೆ ಇತ್ತು ಎಂದು ಹೇಳಿ ಏಕಾಏಕಿ ಬೆಳೆ ನಾಶ ಮಾಡುತ್ತಿದ್ದಾರೆ ಎಂದು ದೂರಿದರು.

ಇಲ್ಲಿನ ರೈತರಿಗೆ ಯಾವುದೇ ನೋಟಿಸ್ ಸಹ ನೀಡಿದೆ ಪೊಲೀಸರೊಂದಿಗೆ ಆಗಮಿ, ಜೆಸಿಬಿ ತಂದು ಜಮೀನಿನಲ್ಲಿ ಬೆಳೆದು ನಿಂತ ಕಬ್ಬು ಹಾಗೂ ಭತ್ತದ ಬೆಳೆಯನ್ನು ತೆರವು ಮಾಡಲು ಮುಂದಾಗಿರುವುದು ಸರಿಯಲ್ಲ. ಒಂದು ವೇಳೆ ರಸ್ತೆ ನಿರ್ಮಾಣ ಮಾಡುವುದಾದರೆ ಬೆಳೆ ಕಟಾವು ನಂತರ ಮಾಡಲಿ ಎಂದು ಆಗ್ರಹಿಸಿದರು.

ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ಕಟಾವಿಗೆ ಬಂದಿರುವ ಬೆಳೆ ತೆಗೆದುಕೊಳ್ಳುವವರೆಗೂ ರೈತರಿಗೆ ಕಾಲಾವಕಾಶ ನೀಡಿ ರಸ್ತೆ ಕಾಮಗಾರಿ ಸ್ಥಗಿತಗೊಳಿಸಬೇಕು. ಒಂದು ವೇಳೆ ಕಟಾವಿಗೆ ಬಂದಿರುವ ಬೆಳೆ ನಾಶ ಮಾಡುವುದಾದರೆ ತಾಲೂಕು ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಗ್ರಾಮದ ಕೃಪೇಶ್, ಯೋಗೇಶ್, ಕೊತ್ತತ್ತಿ ಮನು, ಮೋಹನ್ ಕುಮಾರ್, ಪ್ರಸನ್ನ ಸೇರಿದಂತೆ ಇತರ ರೈತರು ಇದ್ದರು.