ಸಾರಾಂಶ
ನರಗುಂದ: ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ನೇತೃತ್ವದಲ್ಲಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯಿತು.
ಒಟ್ಟು 77 ಅರ್ಜಿಗಳು ಸಲ್ಲಿಕೆಯಾದವು. ಅವುಗಳಲ್ಲಿ 35ಕ್ಕೂ ಹೆಚ್ಚು ಅರ್ಜಿಗಳು ಬೆಳೆ ವಿಮೆ, ಬರ ಪರಿಹಾರಕ್ಕೆ ಸಂಬಂಧಿಸಿದ್ದಾಗಿದ್ದವು. ರೈತರ ಈ ಅರ್ಜಿಗಳನ್ನು ತುರ್ತು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ವೈಶಾಲಿ ಅವರು ಸೂಚಿಸಿದರು. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಉಳಿದಂತೆ ವಿವಿಧ ಸಮಸ್ಯೆಗಳ ಅರ್ಜಿಗಳನ್ನು ಕಾಲಹರಣ ಮಾಡದೇ ಇಂದಿನಿಂದಲೇ ಪರಿಹಾರ ರೂಪಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಚಿಕ್ಕನರಗುಂದದ ಗ್ರಾಪಂ ಸದಸ್ಯ ಮುತ್ತು ರಾಯರಡ್ಡಿ ಮಾತನಾಡಿ, ತಾಲೂಕಿನಲ್ಲಿ ಮಲಪ್ರಭಾ ಕಾಲುವೆಗಳು ಹೂಳು ತುಂಬಿವೆ. ನೀರು ಬಂದರೂ ಜಮೀನಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೊಡ್ಡ ಗ್ರಾಮ ಚಿಕ್ಕನರಗುಂದಕ್ಕೆ ದೂರದ ಕೊಣ್ಣೂರ ಗ್ರಿಡ್‌ನಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ಅದರ ಬದಲಾಗಿ ನರಗುಂದ ಗ್ರಿಡ್‌ನಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಆಗಬೇಕು. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈಶಾಲಿ ಕೂಡಲೇ ಇದನ್ನು ಪರಿಹರಿಸುವಂತೆ ಸೂಚಿಸಿದರು.ರೈತ ಮುಖಂಡರಾದ ಬಸವರಾಜ ಸಾಬಳೆ, ಚನ್ನು ನಂದಿ, ವಿಠ್ಠಲ ಜಾಧವ, ನಬಿಸಾಬ್ ಕಿಲ್ಲೇದಾರ ಇತರರು, ಹುತಾತ್ಮ ರೈತ ಸ್ಮಾರಕಕ್ಕೆ ಪ್ರತ್ಯೇಕ ಜಾಗ ನೀಡಬೇಕು. ಬೆಳೆ ಪರಿಹಾರ ತುರ್ತಾಗಿ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಚನ್ನು ನಂದಿ, ಗಾಂಧಿ ಚೌಕ ಎಂದು ಐದು ದಶಕಗಳಿಂದ ಮಾರುಕಟ್ಟೆ ಮುಖ್ಯ ರಸ್ತೆಯಲ್ಲಿ ಗುರ್ತಿಸಲಾಗಿದೆ. ಆದರೆ ಇಲ್ಲಿಯವರೆಗೂ ಅಲ್ಲಿ ಗಾಂಧಿ ಸ್ಮಾರಕವಾಗಲಿ, ಮೂರ್ತಿಯನ್ನು ನಿರ್ಮಿಸಿಲ್ಲ. ಆದ್ದರಿಂದ ಅದು ಕೂಡಲೇ ಈಡೇರಬೇಕು ಎಂದು ಡಿಸಿಗೆ ಮನವಿ ಮೂಲಕ ಒತ್ತಾಯಿಸಿದರು.ಬುಡ್ನೆಸಾಬ ಸುರೇಬಾನ, ತಾಲೂಕಿನಲ್ಲಿ ಹಾವು ಕಡಿತಕ್ಕೆ ಔಷಧವಿಲ್ಲದೇ ಹಲವಾರು ಜನ ಮೃತಪಟ್ಟಿದ್ದಾರೆ. ಕೂಡಲೇ ಔಷಧ ಒದಗಿಸುವಂತೆ ಒತ್ತಾಯ ಮಾಡಿದರು.
ವಿಠ್ಠಲ ಜಾಧವ, ಕರಿಯಪ್ಪ ಎನ್ನುವವರು ತಾಲೂಕಿನಲ್ಲಿ ಪಶು ವೈದ್ಯರ ಕೊರತೆ ಕುರಿತು ಗಮನ ಸೆಳೆದರು.ಎಸ್ಪಿ ಬಿ.ಎಸ್. ನೇಮಗೌಡ, ಜಿಪಂ ಅಧಿಕಾರಿ ಎಸ್. ಭರತ, ಡಿವೈಎಸ್‌ಪಿ ಪ್ರಭುಗೌಡ ಕರೇಗೌಡ್ರ, ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ, ಎಚ್.ಬಿ. ಹುಲಗಣ್ಣವರ, ತಹಸೀಲ್ದಾರ್ ಶ್ರೀಶೈಲ ತಳವಾರ ಇದ್ದರು.
ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.ಮೊಬೈಲ್ ಟಾರ್ಚಲ್ಲೇ ಸಭೆ: ತಾಂತ್ರಿಕ ಕಾರಣದಿಂದ ವಿದ್ಯುತ್ ಕೈ ಕೊಟ್ಟದ್ದರಿಂದ ಎರಡು ಗಂಟೆ ಸಭೆ ಕತ್ತಲಲ್ಲೇ ನಡೆಯಿತು. ಜಿಲ್ಲಾಧಿಕಾರಿ ವೈಶಾಲಿ ಅವರು ಮೊಬೈಲ್ ಟಾರ್ಚಲ್ಲೇ ಅರ್ಜಿ ಪರಿಶೀಲಿಸಿದರು.ಸಭೆ ಪ್ರಾರಂಭವಾದಾಗಿನಿಂದ ಮುಗಿಯುವ ವರೆಗೂ ವಿದ್ಯುತ್ ಕೈ ಕೊಟ್ಟದ್ದರಿಂದ ಸಮಸ್ಯೆಯಾಯಿತು. ಮೋಡ ಕವಿದ ವಾತಾವರಣ ಇದ್ದುದರಿಂದ ತಾಪಂ ಸಭಾಭವನದಲ್ಲಿ ಕತ್ತಲು ಆವರಿಸಿತ್ತು. ಮೈಕ್ ಕೆಲಸ ಮಾಡಲಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಲು ಬಂದವರು ಹೇಳಿದ್ದು ಯಾರಿಗೂ ಕೇಳಿಸುತ್ತಿರಲಿಲ್ಲ. ಓದಲು ಸರಿಯಾಗಿ ಕಾಣುತ್ತಿರಲಿಲ್ಲ. ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು, ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಅಸಮಾಧಾನ ವ್ಯಕ್ತಪಡಿಸಿ, ಇದೊಂದು ಕಾಟಚಾರದ ಜನಸ್ಪಂದನೆ ಕಾರ್ಯಕ್ರಮ ಆಗಿದೆ. ಸಭೆಗೆ ಸರಿಯಾದ ವಿದ್ಯುತ್ ವ್ಯವಸ್ಥೆ ಮಾಡದ ಹೆಸ್ಕಾಂ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.