ಸಾರಾಂಶ
ಮುಂಡರಗಿ: ಕಡಿಮೆ ನೀರು ಹಾಗೂ ಕೆಂಪು ಮಣ್ಣು ಹೊಂದಿರುವ ಭೂಮಿಯಲ್ಲಿ ರೈತರು ಗೋಡಂಬಿ ಬೆಳೆಯಲು ಸೂಕ್ತವಾಗಿದ್ದು, ರೈತರು ಹೆಚ್ಚಿನ ಜನಸಂಖ್ಯೆ ಗೋಡಂಬಿ ಬೆಳೆಯಲು ಮುಂದಾಗಬೇಕು ಎಂದು ಜಿಲ್ಲಾ ಗೋಡಂಬಿ ಬೆಳೆಗಾರರ ಸಂಘದ ಅಧ್ಯಕ್ಷ ಗುರುನಾಥ ಓದುಗೌಡರು ಹೇಳಿದರು.
ಅವರು ಭಾನುವಾರ ತಾಲೂಕಿನ ಜಾಲವಾಡಗಿ ಗ್ರಾಮದ ಜಮೀನಿನಲ್ಲಿ ದಿ. ಪೀಪಲ್ ರೂರಲ್ ಅಂಡ್ ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ನಾಗರಹಳ್ಳಿ ಮುಂಡರಗಿ, ಜಿಲ್ಲಾ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಈಶ್ವರಪ್ಪ ಹಂಚಿನಾಳ ಅವರ ಗೋಡಂಬಿ ತೋಟದಲ್ಲಿ ಜರುಗಿದ ಕೃಷಿ ಖುಷಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಈಶ್ವರಪ್ಪ ಹಂಚಿನಾಳ ತಮ್ಮ 30 ಎಕರೆ ತೋಟದಲ್ಲಿ 3 ಸಾವಿರ ಗೋಡಂಬಿ ಬೆಳೆದು,ಆದಾಯ ಪಡೆಯುತ್ತಿದ್ದಾರೆ. ಈ ಭಾಗದಲ್ಲಿ 10 ಸಾವಿರ ಹೆ.ಗೋಡಂಬಿ ಬೆಳೆಯಲು ಅವಕಾಶವಿದೆ. ಈಗ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗಿದೆ. ಇದು ಬಯಲು ಸೀಮೆಯ ಬೆಳೆಯಾಗಿದೆ. ಜಾಲವಾಡಗಿ, ಹುಲಕೋಟಿಯಲ್ಲಿ ಬೆಳೆಯುವ ಗೋಡಂಬಿ ಉತ್ತಮ ಗುಣಮಟ್ಟ ಹೊಂದಿರುವುದು ಸಂಶೋಧನೆಯಿಂದ ಸಾಬೀತಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ ಹೆಚ್ಚಿನ ಸಹಕಾರ ನೀಡುತ್ತಿದೆ. ಆದರೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ವಿದೇಶಿಯಲ್ಲಿ ಬೆಳೆದ ಗೋಡಂಬಿಗೆ ಹೆಚ್ಚು ಬೆಲೆ ಸಿಗುತ್ತಿರುವುದು ವಿಷಾಧದ ಸಂಗತಿಯಾಗಿದೆ.
ಜಿಲ್ಲೆಯ ಗೋಡಂಬಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ₹ 2 ಕೋಟಿ ವೆಚ್ಚದಲ್ಲಿ ಗೋಡಂಬಿ ಪ್ರಸಿಂಗ್ ಯೂನಿಟ್ ಪ್ರಾರಂಭಿಸಲಾಗುತ್ತಿದೆ. ಪ್ರಸಕ್ತ ವರ್ಷದಿಂದ ಅದು ಕಾರ್ಯಾರಂಭ ಮಾಡಲಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗೋಡಂಬಿ ಬೆಳೆಯಲು ಮುಂದಾಗಬೇಕು ಎಂದರು.ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಕಾಂತ ಕೋಟಿಮನಿ ಮಾತನಾಡಿ, ಜಿಲ್ಲೆಯಲ್ಲಿ ಒಳ್ಳೆಯ ಮಣ್ಣಿನ ಗುಣಮಟ್ಟ ಇರುವುದರಿಂದ ಇಲ್ಲಿ ಹೆಚ್ಚಿನ ತೋಟಗಾರಿಕೆ ಬೆಳೆ ಬೆಳೆಯಲು ಅವಕಾಶವಿದೆ. 15 ರಿಂದ 45 ಡಿಗ್ರಿ ಉಷ್ಣಾಂಶ ಇರುವ ಪ್ರದೇಶದಲ್ಲಿ ಗೋಡಂಬಿ ಬೆಳೆಯಬಹುದು. ಕಡಿಮೆ ನಿರ್ವಹಣೆಯಲ್ಲಿ ನಿಶ್ಚಿತ ಬೆಳೆ ಸಿಗುವಂತಹ ಗೋಡಂಬಿ ಬೆಳೆ ಬೆಳೆಯಲು ಅವಕಾಶವಿದೆ. ಹೆಚ್ಚಿನ ಖರ್ಚಿಲ್ಲದೆ ಗೋಡಂಬಿ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಸಾಧ್ಯವಿದ್ದವರು ಗೋಡಂಬಿ ಬೆಳೆಯಲು ಮುಂದಾಗಬೇಕು ಎಂದು ಸರ್ಕಾರಗಳು ನೀಡುವ ಉಚಿತ ಕೊಡುಗೆಗಳಿಂದ ರೈತರಿಗೆ ಕೆಲಸ ಮಾಡಲು ಕಾರ್ಮಿಕರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನತೆಗೆ ದುಡಿಯುವ ಪ್ರವೃತ್ತಿ ಕಲಿಸಬೇಕು ಈಶ್ವರಪ್ಪ ಕೃಷಿಯಲ್ಲಿ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.ರಾಷ್ಟ್ರಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ದೇವರಡ್ಡಿ ಅಗಸನಕೊಪ್ಪ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಹಂಚಿನಾಳ ಮಾತನಾಡಿ, ಕೃಷಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಸಾಧನೆ ಸಾಧ್ಯ. ಮಣ್ಣಿನ ಫಲವತ್ತತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಡಿಮೆ ವೆಚ್ಚದಲ್ಲಿ ಗೋಡಂಬಿ ಬೆಳೆದಿದ್ದು ಉತ್ತಮ ಆದಾಯ ಬರಲಿದೆ ಎಂದರು.ರೈತರ ಅನುಭವ ಹಂಚಿಕೆ-ಸಂಮಾನ ಕಾರ್ಯಕ್ರಮ ಜರುಗಿತು. ಡಾ.ಸಿ.ಎಂ.ರಫಿ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಬಾಗೇವಾಡಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಣಜಿ, ಎಂ.ಜಿ. ಗಚ್ಚಣ್ಣವರ, ಕರಬಸಪ್ಪ ಹಂಚಿನಾಳ, ಆರ್.ಎಲ್. ಪೊಲೀಸಪಾಟೀಲ ಉಪಸ್ಥಿತರಿದ್ದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ಆಶಯ ನುಡಿ ಹೇಳಿದರು. ಮಂಜುನಾಥ ಮುಧೋಳ ಸ್ವಾಗತಿಸಿದರು. ಸಿ.ಎಸ್. ಅರಸನಾಳ ನಿರೂಪಿಸಿ ವಂದಿಸಿದರರು. ಕಾರ್ಯಕ್ರಮಕ್ಕೂ ಮೊದಲು ತೋಟದ ನಡಿಗೆ ಕಾರ್ಯಕ್ರಮ ಜರುಗಿದ್ದು, ಇದರಲ್ಲಿ ರೈತರು ಭಾಗವಹಿಸಿ, ಈಶ್ವರಪ್ಪ ಹಂಚಿನಾಳ ಅವರಿಂದ ಮಾಹಿತಿ ಪಡೆದುಕೊಂಡರು.