ಈ ಹಿಂದಿನ ದಿನಗಳಲ್ಲಿ ಮೊದಲು ಮನೆತನ ನೋಡಲು ಮನೆ ಮುಂದಿರುವ ತಿಪ್ಪೆಗಳನ್ನು ನೋಡಿ ಮಗಳನ್ನು ಕೊಡುತ್ತಿದ್ದರು. ಆದರೆ ಈಗ ತಿಪ್ಪೆಗಳನ್ನು ನೋಡಿ ದೂರ ಸರಿಯುತ್ತಿರುವುದು ಪರಿಸ್ಥಿತಿಯ ಭಿನ್ನವಾಗಿದೆ.
ಗದಗ: ಮನೆಯಲ್ಲಿ ಮಕ್ಕಳು ಹುಟ್ಟಿದ ಮೇಲೆ ಡಾಕ್ಟರ್, ಎಂಜಿನಿಯರ್ಸ್ ಹಾಗೂ ಉನ್ನತ ಅಧಿಕಾರಿಯಾಗಬೇಕು ಎಂದು ಬಯಸುತ್ತಾರೆ. ಆದರೆ, ರೈತರಿಗೆ ಸಂಬಳ ಇರುವುದಿಲ್ಲ, ಪೆನ್ಷನ್ ಇರುವುದಿಲ್ಲ. ಆದ್ದರಿಂದ ರೈತರಾಗಲು ಯಾರೂ ಬಯಸುವುದಿಲ್ಲ. ಆದರೆ ರೈತರು ಯಾವ ಉನ್ನತ ಅಧಿಕಾರಿ, ಎಂಜಿನಿಯರಿಗಿಂತ ಕಡಿಮೆ ಇಲ್ಲ ಎಂದು ಆದರ್ಶ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ನಗರದ ಒಕ್ಕಲಿಗರ ಓಣಿಯಲ್ಲಿ 18 ವರ್ಷಗಳ ನಂತರ ನಡೆಯುತ್ತಿರುವ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಜಾತ್ರಾ ಮಹೋತ್ಸವದ 5ನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಈ ಹಿಂದಿನ ದಿನಗಳಲ್ಲಿ ಮೊದಲು ಮನೆತನ ನೋಡಲು ಮನೆ ಮುಂದಿರುವ ತಿಪ್ಪೆಗಳನ್ನು ನೋಡಿ ಮಗಳನ್ನು ಕೊಡುತ್ತಿದ್ದರು. ಆದರೆ ಈಗ ತಿಪ್ಪೆಗಳನ್ನು ನೋಡಿ ದೂರ ಸರಿಯುತ್ತಿರುವುದು ಪರಿಸ್ಥಿತಿಯ ಭಿನ್ನವಾಗಿದೆ ಎಂದರು.ಮೂಲತಃ ನಾನು ಕೃಷಿಕಳಲ್ಲ. ಎಂಜಿನಿಯರ್ ಪದವಿ ಪಡೆದು ಇನ್ನೇನು ನೌಕರಿ ಕಾಣುವ ಕನಸಿನಲ್ಲಿ ಇದ್ದ ನನಗೆ ಕುಟುಂಬದವರು ಮದುವೆ ಮಾಡಿ ಗಂಡನ ಮನೆಗೆ ಕಳಿಸಿದರು. ಗಂಡನ ಮನೆಯಲ್ಲಿ ನನ್ನ ನೌಕರಿಯ ಪತ್ರವನ್ನು ಹರಿದು ಹಾಕಿದರು. ಮುಂದಿನ ಬದುಕಿನ ಪಯಣದಲ್ಲಿ ಕಲ್ಲುಗಳು ತುಂಬಿದ ಹೊಲದಲ್ಲಿ ಅವುಗಳನ್ನು ತೆಗೆಯಲು ಎಂಟು ವರ್ಷಗಳೇ ಬೇಕಾಯಿತು. ಬೋರ್ವೆಲ್ ಕೊರೆಸಲು ಹಣವಿಲ್ಲದೆ ಗಂಡನು ಹಿಂದೆ ಸರಿದಾಗ ಬಂಗಾರದ ಬಳೆಗಳನ್ನು ಮಾರಿ ಬಂದ ಹಣದಲ್ಲಿ ಬೋರ್ವೆಲ್ ಕೊರೆಸುವ ಸಮಯದಲ್ಲಿ ಮಣ್ಣು ಹಿಡಿದು ಅಳುತ್ತ ಕುಳಿತು ಪ್ರಾರ್ಥನೆ ಮಾಡುತ್ತಿರುವ ಸಂದರ್ಭದಲ್ಲಿ ಆಳುಮಗ ಬಂದು ಅಮ್ಮವರೇ ಹೊಲದಲ್ಲಿ ಒಂದೂವರೆ ಇಂಚು ನೀರು ಬಿದ್ದಿದೆ ಎಂದು ಹೇಳಿದಾಗ ಯಾರು ಕೈಹಿಡಿಯದ ಸಂದರ್ಭದಲ್ಲಿ ಮಣ್ಣು ಮಾತ್ರ ನನ್ನ ಕೈ ಹಿಡಿದಿತ್ತು ಎಂದರು.
ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ದೇವಿಯ ಶಕ್ತಿ ಅಪಾರವಾಗಿದೆ. ಜಾತಿ, ಮತ ಮರೆತು ಭಕ್ತಿ ಮತ್ತು ಶ್ರದ್ಧೆಯಿಂದ ಜಾತ್ರೆ ನಡೆಯುತ್ತಿದೆ. ಭಾರತವು ಆರ್ಥಿಕವಾಗಿ ಶ್ರೀಮಂತವಾಗಿಲ್ಲ, ಆದರೆ ಧಾರ್ಮಿಕವಾಗಿ ಅತ್ಯಂತ ಶ್ರೀಮಂತವಾದ ದೇಶವಾಗಿದೆ. ಇದಕ್ಕೆ ಭಾರತದಲ್ಲಿರುವ ಅಧ್ಯಾತ್ಮವೇ ಕಾರಣವಾಗಿದೆ ಎಂದರು.ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿದರು. ಈ ವೇಳೆ ಸೂಡಿಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೊಟ್ರಪ್ಪ ಕಮತರ, ಫಕ್ಕೀರಪ್ಪ ಹೆಬಸೂರ, ರಾಜು ಕುರಡಗಿ, ರವಿ ದಂಡಿನ, ವಿಜಯಕುಮಾರ ಗಡ್ಡಿ, ಉಷಾ ದಾಸರ, ಅನಿಲ ಅಬ್ಬಿಗೇರಿ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಪ್ರಕಾಶ ಬೆಲೇರಿ, ಕುಮಾರ ತಡಕೋಡ ಸೇರಿದಂತೆ ಮುಂತಾದವರು ಇದ್ದರು.
ವಕೀಲ ಎಂ.ಎಂ. ಹಿರೇಮಠ ಪರಿಚಯಿಸಿದರು. ಚೈತ್ರ ಶಿವಪ್ಪನಮಠ ಪ್ರಾರ್ಥಿಸಿದರು. ಸುಜಾತ ಗುಗ್ಗರಿ ಸ್ವಾಗತಿಸಿದರು. ಬಾಹುಬಲಿ ಜೈನ ನಿರೂಪಿಸಿದರು. ನಂತರ ಮಂಗಳೂರಿನ ಹೆಜ್ಜೆನಾದ ಕಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.