ರೈತರ ಶ್ರಮಕ್ಕೆ ತಕ್ಕ ಪ್ರತಿಫಲ, ಲಾಭ ಸಿಗುತ್ತಿಲ್ಲ: ಎ.ಎಲ್.ಕೆಂಪೂಗೌಡ

| Published : Sep 29 2025, 01:03 AM IST

ರೈತರ ಶ್ರಮಕ್ಕೆ ತಕ್ಕ ಪ್ರತಿಫಲ, ಲಾಭ ಸಿಗುತ್ತಿಲ್ಲ: ಎ.ಎಲ್.ಕೆಂಪೂಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟಿನ ನಿರ್ಮಾಣದ ನಂತರ ಕಬ್ಬು ಬೆಳೆಯಲ್ಲಿ ಮಂಡ್ಯ ಜಿಲ್ಲೆ ಒಂದು ಹೊಸ ಆಯಾಮವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗುವುದಿಲ್ಲ. ಮೈಷುಗರ್ ಕಾರ್ಖಾನೆ ನಿರ್ಮಾಣವಾದ ಬಳಿಕ ಅನೇಕ ಉಪ ಕಾರ್ಖಾನೆಗಳು ಪ್ರಾರಂಭವಾದವು. ಪ್ರಸ್ತುತ ರೈತ ಕಬ್ಬನ್ನು ಬೆಳೆಯ ಬೇಕೆಂದರೆ 1500 ರು. ವೆಚ್ಚವಾಗುತ್ತದೆ. ರೈತರ ವೆಚ್ಚಕ್ಕೆ ತಕ್ಕಂತಹ ಪ್ರತಿಫಲ, ಲಾಭ ದೊರೆಯುತ್ತಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಂಡ್ಯ ಜಿಲ್ಲೆ ಸಕ್ಕರೆ ನಾಡಾಗಿದ್ದರೂ, ಸಿಹಿ ಹೃದಯವಿದ್ದರೂ ರೈತರು ಮಾಡಿದ ವೆಚ್ಚಕ್ಕೆ ತಕ್ಕಂತಹ ಪ್ರತಿಫಲ, ಲಾಭ ದೊರೆಯುತ್ತಿಲ್ಲ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಆಯೋಜಿಸಿದ್ದ ವಿಚಾರ ಗೋಷ್ಠಿಯಲ್ಲಿ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಸ್ಥಿತಿ-ಗತಿ ಮತ್ತು ರೈತರ ಸಂಕಷ್ಟ ಕುರಿತು ಮಾತನಾಡಿದರು.

ಜಿಲ್ಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟಿನ ನಿರ್ಮಾಣದ ನಂತರ ಕಬ್ಬು ಬೆಳೆಯಲ್ಲಿ ಮಂಡ್ಯ ಜಿಲ್ಲೆ ಒಂದು ಹೊಸ ಆಯಾಮವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗುವುದಿಲ್ಲ. ಮೈಷುಗರ್ ಕಾರ್ಖಾನೆ ನಿರ್ಮಾಣವಾದ ಬಳಿಕ ಅನೇಕ ಉಪ ಕಾರ್ಖಾನೆಗಳು ಪ್ರಾರಂಭವಾದವು. ಪ್ರಸ್ತುತ ರೈತ ಕಬ್ಬನ್ನು ಬೆಳೆಯ ಬೇಕೆಂದರೆ 1500 ರು. ವೆಚ್ಚವಾಗುತ್ತದೆ. ರೈತರ ವೆಚ್ಚಕ್ಕೆ ತಕ್ಕಂತಹ ಪ್ರತಿಫಲ, ಲಾಭ ದೊರೆಯುತ್ತಿಲ್ಲ ಎಂದರು.

ಬೆಂಗಳೂರಿನ ಮುಕ್ತ ವಿವಿ ಪ್ರಾದೇಶಿಕ ನಿರ್ದೇಶಕ ಡಾ.ಸುಧಾಕರ್ ಹೊಸಹಳ್ಳಿ ಮಾತನಾಡಿ, ಕೃಷಿ ಹಾಗೂ ನೀರಾವರಿಗೆ ಸಂಬಂಧಿಸಿದಂತೆ ಎಲ್ಲಾ ಕಾಲಘಟ್ಟಕ್ಕೂ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಗೆ ಗೌರವ ಸಲ್ಲಬೇಕು. ಅಣೆಕಟ್ಟೆಗೂ ಮುನ್ನ ಜಿಲ್ಲೆಯ ಭೂಮಿ ಬರಡಾಗಿ ರಾಗಿ, ಹುರಳಿ ಬೆಳೆಯುತ್ತಿದ್ದೇವೆ. ಅವರ ಮುಂದಾಲೋಚನೆಯಿಂದಾಗಿ ಇಂದು ಭೂಮಿ ಹಸಿರಾಗಿದೆ ಎಂದರು.

ಟಿಪ್ಪು ತನ್ನ ಆಡಳಿತದಲ್ಲಿ ಬೆಲ್ಲದ ಅಭಿವೃದ್ಧಿಗೆ ಕ್ರಮ ವಹಿಸಿದ್ದರು ಎಂಬ ರೈತ ಮುಖಂಡ ಎ.ಎಲ್ ಕೆಂಪೂಗೌಡರ ಹೇಳಿಕೆ ಸುಳ್ಳು. ಟಿಪ್ಪು ಕಾಲದಲ್ಲಿ ಕಬ್ಬು ಬೆಳೆ ಇರಲೇ ಇಲ್ಲ. ಹಾಗಾಗಿ ಅವರ ಕಾಲದಲ್ಲಿ ಬೆಲ್ಲದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಈ ನೆಲದ ಸಿರಿವಂತಿಕೆ ಹೊಂದಿದ್ದ ಮೈಸೂರು ಸರ್ಕಾರೆ ಕಾರ್ಖಾನೆ ನಿಗಧಿ ಮಾಡಿದ್ದ ದರವನ್ನೇ ಇಡೀ ರಾಜ್ಯದ ಸಕ್ಕರೆ ಕಾರ್ಖಾನೆಗಳು ನಿಗಧಿ ಮಾಡುತ್ತಿದ್ದವು. ಜೊತೆಗೆ ಔಷಧಿ ತಯಾರಿಕೆ ಬೇಕಾದ ಅಗತ್ಯ ಕಚ್ಚಾ ಸರಕನ್ನು ಕಳುಹಿಸಿಕೊಡುತ್ತಿತ್ತು. ಇಷ್ಟು ಸಿರಿವಂತಿಕೆ ಹೊಂದಿದ್ದ ಕಾರ್ಖಾನೆ ದುಸ್ಥಿತಿಗೆ ತಲುಪಲು ಇಲ್ಲಿಯವರೆಗೆ ನಡೆಸಿಕೊಂಡು ಬಂದಂತ ಆಡಳಿಗಾರರೇ ಕಾರಣ ಎಂದು ಆರೋಪಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಶಂಭುಗೌಡ ಮಾತನಾಡಿ, ಸಕ್ಕರೆ ಕಾರ್ಖಾನೆ ರೈತರು ಮತ್ತು ಕಾರ್ಮಿಕರದ್ದು. ಆದರೆ, ಪ್ರಸ್ತುತ ರೈತರು, ಕಾರ್ಮಿಕರು ಕಾರ್ಖಾನೆ ನಮ್ಮದಲ್ಲ ಎಂಬಂತೆ ಕೆಲಸ ನಿರ್ವಹಿಸುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ಸರ್ಕಾರ ಕಾರ್ಖಾನೆಗಾಗಿ ಪ್ರತಿ ವರ್ಷ ಲಕ್ಷ ಲಕ್ಷ ನೀಡಿದರೂ ಪ್ರಯೋಜನವಿಲ್ಲದಂತಾಗಿದೆ. ಸರ್ಕಾರವು ಉತ್ತಮ ಯೋಜನೆಯೊಂದಿಗೆ ಸಕ್ಕರೆ ಕಾರ್ಖಾನೆ ಉಳಿಸಬೇಕಾಗಿದೆ ಎಂದರು.

ವಿಚಾರ ಗೋಷ್ಠಿಯಲ್ಲಿ ಮಂಡ್ಯ ಕೆ.ಪಿ.ಮೃತ್ಯುಂಜಯ, ಮಳವಳ್ಳಿ ಮಹಾಲಿಂಗಯ್ಯ, ಪಾಂಡವಪುರ ಡಾ.ಎಚ್.ಆರ್.ತಿಮ್ಮೇಗೌಡ, ನಾಗಮಂಗಲದ ನಾಗರಾಜು, ಮದ್ದೂರಿನ ಗೋವಿಂದ, ಕೆ.ಆರ್.ಪೇಟೆ ಬಿ.ಸಿ.ವಿಜಯ್ ಕುಮಾರ್, ಜಯಾಕೀರ್ತಿ ಮತ್ತು ಅರಕೆರೆಯ ಸೋಮಶೇಖರ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್ ಲೋಕೇಶ್, ಕಸಾಪ ಉಪಾಧ್ಯಕ್ಷ ಹಾಗೂ ಪತ್ರಕರ್ತ ಗಂಜಾಂ ಮಂಜು, ಕೆ.ಆರ್.ಪೇಟೆ ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ್ ಮೇನಾಗಾರ, ಸಮಾಜ ಸೇವಕಿ ಆಶಾಲತಾ ಪುಟ್ಟೇಗೌಡ, ಪುರಸಭಾ ಸದಸ್ಯ ಬಸವರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.