ಕನ್ನಡಪ್ರಭ ವಾರ್ತೆ ಬೇಲೂರು
ಮಾಜಿ ಶಾಸಕ ಕೆ ಎಸ್ ಲಿಂಗೇಶ್ ಅವರು ತಮ್ಮ ಅವಧಿಯಲ್ಲಿ ಯಾವುದೇ ಸ್ವಜನ ಪಕ್ಷಪಾತ ಮಾಡದೆ ಬಗರ್‌ಹುಕುಂ ಸಮಿತಿಯಿಂದ ಶೇ. 80 ರೈತರಿಗೆ ನ್ಯಾಯಯುತವಾಗಿ ಭೂಮಿ ಮಂಜೂರಾತಿ ಮಾಡಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ₹2000 ಕೋಟಿ ಭೂ ಹಗರಣ ನಡೆದಿದೆ ಎನ್ನುವ ಬಗ್ಗೆ ಸುದ್ದಿ ಬಿತ್ತರವಾಗುತ್ತಿದೆ. ಇದರಿಂದ ತಾಲೂಕಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬಡ ರೈತ ಕುಟುಂಬಗಳು ಬೀದಿಗೆ ಬೀಳಲಿದ್ದು, ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರಬೇಕು ಎಂದು ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಆಗ್ರಹಿಸಿದರು.ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕ ಕೆ. ಎಸ್. ಲಿಂಗೇಶ್ ಅವರು ತಮ್ಮ ಸ್ವಂತಕ್ಕಾಗಿ ಯಾವುದೇ ಬಗರ್‌ಹುಕುಂ ಅರ್ಜಿ ಸಲ್ಲಿಸಿ ಜಮೀನು ಪಡೆದಿಲ್ಲ. ರೈತರು ಸಲ್ಲಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕವೇ ಬಗರ್‌ಹುಕುಂ ಸಮಿತಿ ಮುಂದೆ ಮಂಡಿಸಲಾಗಿದ್ದು, ಸಮಿತಿ ಅಧ್ಯಕ್ಷರಾಗಿ ಅವರು ಸಹಿ ಹಾಕಿದ್ದಾರೆ. ಆದ್ದರಿಂದ ಅಧಿಕಾರಿಗಳ ಪರಿಶೀಲನೆ ಹಾಗೂ ಸಮಿತಿಯ ಪ್ರಕ್ರಿಯೆಯನ್ನು ಪರಿಗಣಿಸದೆ ಕೇವಲ ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡಿ ತಲೆದಂಡ ಮಾಡುವುದು ಸರಿಯಲ್ಲ. ಕೆಲವು ನ್ಯೂನತೆಗಳಿಗಾಗಿ ಶೇ. 99ರಷ್ಟು ಪ್ರಾಮಾಣಿಕ ರೈತರನ್ನು ತಪ್ಪಿತಸ್ಥರಂತೆ ಬಿಂಬಿಸುವುದು ಸರಿಯಲ್ಲ. ಈ ಪ್ರಕರಣದಲ್ಲಿ ಸುಮಾರು ಎರಡೂವರೆ ಸಾವಿರ ರೈತರ ಭವಿಷ್ಯ ಅಡಗಿದೆ ಎಂದರು.ಲಿಂಗೇಶ್ ಸ್ವಜನ ಪಕ್ಷಪಾತ ಮಾಡಿಲ್ಲ:ಲಿಂಗೇಶ್ ಅವರು ತಮ್ಮ ಕುಟುಂಬದವರು ಅಥವಾ ಬಂಧುಗಳಿಗಾಗಿ ಯಾವುದೇ ಜಮೀನು ಮಂಜೂರು ಮಾಡಿಕೊಂಡಿಲ್ಲ. ಬದಲಾಗಿ ಅರ್ಹ ಬಡವರು, ಶೋಷಿತ ವರ್ಗಗಳಾದ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದ ರೈತರಿಗೆ ಭೂಮಿ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. 1991ರಿಂದ 2026ರವರೆಗೆ ಫಾರಂ ನಂಬರ್ 53ರಡಿ ಸಲ್ಲಿಸಿರುವ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಈ ಅವಧಿಯಲ್ಲಿ ಕಂದಾಯ ನಿಯಮಗಳು ಹಲವು ಬಾರಿ ಬದಲಾಗಿದ್ದು, ಅರ್ಜಿ ಸಲ್ಲಿಸಿದ ಸಂದರ್ಭದ ನಿಯಮಗಳು ಮತ್ತು ಮಂಜೂರು ಮಾಡುವ ಸಂದರ್ಭದ ನಿಯಮಗಳಲ್ಲಿ ವ್ಯತ್ಯಾಸ ಇರುವುದರಿಂದ ಗೊಂದಲ ಉಂಟಾಗಿದೆ ಎಂದು ಹೇಳಿದರು.ಕಂದಾಯ ತಜ್ಞರ ಸಮಿತಿ ತನಿಖೆ ನಡೆಸಲಿ:ಇಂದಿನ ನಿಯಮಗಳನ್ನೇ ಹಿಂದಿನ ಅವಧಿಗೂ ಅನ್ವಯಿಸಿ ತನಿಖೆ ನಡೆಸಿದರೆ 1998ರಿಂದ 2016ರವರೆಗೆ ಬೇಲೂರು ತಾಲೂಕಿನಲ್ಲಿ ಭೂಮಿ ಮಂಜೂರು ಮಾಡಿದ ಎಲ್ಲರ ಮೇಲೂ ಪ್ರಶ್ನೆಗಳು ಎದುರಾಗುತ್ತವೆ. ಆದ್ದರಿಂದ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡದೆ, ನಿಜವಾದ ಫಲಾನುಭವಿ ರೈತರ ಹಿತವನ್ನು ಕಾಪಾಡಬೇಕು. ಪೊಲೀಸ್ ತನಿಖೆಯ ಬದಲು ಕಂದಾಯ ಇಲಾಖೆಯಲ್ಲಿ ಅನುಭವ ಹೊಂದಿರುವ ತಜ್ಞರು ಹಾಗೂ ನಿವೃತ್ತ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿ ದಾಖಲೆಗಳನ್ನು ಪರಿಶೀಲಿಸಿದರೆ ನಿಜಾಂಶ ಹೊರಬರಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ್, ರೈತ ಸಂಘದ ಉಪಾಧ್ಯಕ್ಷ ಧರ್ಮೇಗೌಡ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕಾರ್ಯದರ್ಶಿ ಸಚಿನ್ ಇದ್ದರು.ಬಾಕ್ಸ್: ನ್ಯಾಯಾಲಯದಲ್ಲಿ ರೈತ ಸಂಘದಿಂದ ಹೋರಾಟ
ಲಿಂಗೇಶ್ ಅವರೊಂದಿಗೆ ರೈತ ಸಂಘಕ್ಕೆ ಯಾವುದೇ ರಾಜಕೀಯ ಸಂಬಂಧವಿಲ್ಲ. ಆದರೆ ಅವರು ರೈತರ ಪರವಾಗಿ ಹೋರಾಟ ನಡೆಸಿದ ನಾಯಕರಾಗಿದ್ದು, ಹಳೇಬೀಡು ನೀರಾವರಿ ಹೋರಾಟ ಸೇರಿದಂತೆ ಹಲವು ಜನಪರ ಹೋರಾಟಗಳಲ್ಲಿ ರೈತ ಸಂಘದೊಂದಿಗೆ ಕೈಜೋಡಿಸಿದ್ದಾರೆ. ತಾಲೂಕಿನ ಒಬ್ಬ ರೈತನಿಗೂ ಅನ್ಯಾಯವಾಗಬಾರದು. ಅರ್ಹ ಫಲಾನುಭವಿ ರೈತರಿಗೆ ತೊಂದರೆಯಾಗದಂತೆ ರೈತ ಸಂಘ ಹೋರಾಟ ನಡೆಸಲಿದೆ. ಅಗತ್ಯವಿದ್ದರೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ರೈತರ ಪರವಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಬಳ್ಳೂರು ಸ್ವಾಮಿಗೌಡ ತಿಳಿಸಿದರು.