ಹಾವೇರಿ: ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸೋಯಾಬಿನ್ ಬಿತ್ತನೆ ಬೀಜಗಳ ಕೊರತೆ ಮುಂದುವರಿದಿದೆ. ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತರೂ ರೈತರಿಗೆ ಬೀಜ ಸಿಗದೇ ಹೈರಾಣಾಗುವ ಸ್ಥಿತಿ ನಿರ್ಮಾಣವಾಗಿದೆ.ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳ ಮುಂದೆ ನೂರಾರು ರೈತರು ಕ್ಯೂನಲ್ಲಿ ನಿಂತು ಬೀಜಕ್ಕಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸೋಯಾಬಿನ್ ಬೀಜಕ್ಕೆ ರೈತರಿಂದ ಭಾರೀ ಬೇಡಿಕೆ ಬಂದಿದ್ದರಿಂದ ಈ ಸಮಸ್ಯೆ ಎದುರಾಗಿದ್ದು, ಈಗಾಗಲೇ ಕೃಷಿ ಇಲಾಖೆ 10,500 ಕ್ವಿಂಟಲ್ ಸೋಯಾಬಿನ್ ಬೀಜ ವಿತರಿಸಿದ್ದರೂ ರೈತರಿಂದ ಹೆಚ್ಚಿನ ಬೇಡಿಕೆ ಕೇಳಿಬರುತ್ತಿದೆ. ಬಿತ್ತನೆ ಸಮಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಕೃಷಿ ಕೆಲಸಗಳನ್ನು ಬಿಟ್ಟು ದಿನಪೂರ್ತಿ ಕೇಂದ್ರಗಳ ಎದುರು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲ ರೈತರು ಬೆಳಗ್ಗೆಯಿಂದ ಸಂಜೆವರೆಗೂ ಕಾದರೂ ಬೀಜ ಸಿಗದೇ ನಿರಾಸೆಯಿಂದ ಮನೆಗೆ ಹಿಂತಿರುಗಿದ್ದಾರೆ. ಇನ್ನೂ ಕೆಲವರು ಬಿತ್ತನೆ ಬೀಜ ಬರಬಹುದು ಎಂಬ ನಿರೀಕ್ಷೆಯಲ್ಲಿ ಸರತಿ ಸಾಲಿನಲ್ಲಿ ನಿಂತೇ ಕಾಯುತ್ತಿದ್ದ ದೃಶ್ಯ ಕಂಡು ಬಂದಿತು. ಇದೇ ವೇಳೆ ಮನೆಯಲ್ಲಿ ಬಾಣಂತಿ ಮಹಿಳೆಯನ್ನು ಬಿಟ್ಟು, ಮೊಮ್ಮಗಳೊಂದಿಗೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಕ್ಕೆ ಬಂದಿದ್ದ ಅಜ್ಜಿಯೊಬ್ಬರ ಪರಿಸ್ಥಿತಿ ಎಲ್ಲರ ಮನಕಲಕುವಂತಿತ್ತು. ಮೊಮ್ಮಗಳ ಜೊತೆ ಕೇಂದ್ರದ ಎದುರು ಕುಳಿತಿದ್ದ ಅಜ್ಜಿ, ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ಸಿಗದೇ ಬಿತ್ತನೆಗೆ ಭೂಮಿ ಹದ ತಪ್ಪಿದರೆ ವರ್ಷದ ಜೀವನವೇ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದರು.ಈಗಾಗಲೇ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೆ ಸಿದ್ಧರಾಗಿದ್ದು, ಸರಿಯಾದ ಸಮಯಕ್ಕೆ ಬೀಜ ಸಿಗದಿದ್ದರೆ ಬೆಳೆ ಉತ್ಪಾದನೆ ಮೇಲೂ ಪರಿಣಾಮ ಬೀಳುವ ಆತಂಕ ಎದುರಾಗಿದೆ. ಆದರೆ ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಪೂರೈಕೆ ಮಾಡಲು ಕೃಷಿ ಇಲಾಖೆ ವಿಫಲವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣವೇ ಜಿಲ್ಲೆಗೆ ಅಗತ್ಯ ಪ್ರಮಾಣದ ಸೋಯಾಬಿನ್ ಬೀಜ ಪೂರೈಕೆ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸೋಯಾಬಿನ್ ಬಿತ್ತನೆ ಬೀಜಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಇದೆ. ಕಳೆದ ವರ್ಷ 7,296 ಕ್ವಿಂಟಲ್ ಸೋಯಾಬಿನ್ ಬೀಜ ವಿತರಿಸಲಾಗಿತ್ತು. ಪ್ರಸಕ್ತ ವರ್ಷ 10,500 ಕ್ವಿಂಟಲ್ ಸೋಯಾಬಿನ್ ಬೀಜ ವಿತರಿಸಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಪೂರೈಸಲು ಕೃಷಿ ಇಲಾಖೆ ಸಿದ್ಧವಿದೆ. ಸೋಯಾಬಿನ್ ಬಿತ್ತನೆಗೆ ಅಧಿಕ ತೇವಾಂಶ ಅಗತ್ಯವಿದ್ದು, ರೈತರು ಅವಸರ ಮಾಡದೇ ಭೂಮಿಯ ತೇವಾಂಶದ ಪ್ರಮಾಣ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ಹಾವೇರಿ ಜಂಟಿ ಕೃಷಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಕೆ. ಹೇಳಿದರು.
ಸೋಯಾಬಿನ್ ಬಿತ್ತನೆ ಬೀಜ ಸಿಗದೇ ರೈತರು ಹೈರಾಣ
ಹಾವೇರಿ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖಾಲಿಯಾಗಿದ್ದರಿಂದ ಬಂದ್ ಮಾಡಿರುವುದು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.