ಕಾಡುಕೋಣಗಳ ಉಪಟಳಕ್ಕೆ ಕೃಷಿಕರು ಕಂಗಾಲು

| Published : May 24 2024, 12:49 AM IST

ಸಾರಾಂಶ

ಕಾಡುಕೋಣಗಳ ಉಪಟಳ ಜಾಸ್ತಿಯಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ. ಇಲಾಖೆ ಕಾಡುಕೋಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡುಕೋಣಗಳ ಉಪಟಳ ಜಾಸ್ತಿಯಾಗಿದ್ದು ಕೃಷಿಕರು ಕಂಗಾಲಾಗಿದ್ದಾರೆ.

ನಿಡ್ತ, ಮಾಲಂಬಿ, ಯಡವನಾಡು ಮೀಸಲು ಅರಣ್ಯಗಳಿಂದ ಕಾಡುಕೋಣಗಳು ಬೆಳಗ್ಗಿನ ಜಾವದಲ್ಲಿ ಕಾಫಿ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅರಣ್ಯದಂಚಿನ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೃಷಿಕರು ಭಯಪಡುತ್ತಿದ್ದಾರೆ. ಬುಧವಾರ ಬೆಳಗ್ಗೆ ಹಿರಿಕರ, ಹೆಗ್ಗುಳ ಮತ್ತು ಚಿಕ್ಕಾರ ಗ್ರಾಮಗಳ ತೋಟಗಳಲ್ಲಿ ಕಾಡುಕೋಣಗಳು ಹಾವಳಿ ಎಬ್ಬಿಸಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ. ಕಾಫಿ ತೋಟದೊಳಗೆ ಬೆಳಗ್ಗಿನ ಜಾವ ಆಹಾರ ಸೇವಿಸಿ, ಗುದ್ದಾಟ ನಡೆಸಿದ ಪರಿಣಾಮ ಕಾಫಿಗಿಡಗಳು ಹಾಳಾಗಿವೆ. ಎಚ್.ಪಿ.ಸುರೇಶ್, ರಾಜಪ್ಪ, ಜಿ.ಕೆ.ಸುರೇಶ್ ಎಂಬವರ ಕಾಫಿ ತೋಟಗಳಲ್ಲಿ ಗಿಡಗಳನ್ನು ಹಾನಿಪಡಿಸಿದೆ.

ಕಾಡಾನೆಗಳಿಂದ ಕಾಟ ಕಡಿಮೆಯಾದಂತೆ ಕಾಡುಕೋಣಗಳ ಹಾವಳಿ ಪ್ರಾರಂಭವಾಗಿದೆ. ಬೆಳಗ್ಗಿನ ಜಾವ ಕಾಫಿ ತೋಟಗಳಿಗೆ ಕಾಲ್ನಡಿಗೆಯಲ್ಲಿ ತೆರಳಲು ಭಯವಾಗುತ್ತದೆ. ಹಗಲಿನ ವೇಳೆ ಕೆಲಸಕ್ಕೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಅರಣ್ಯ ಇಲಾಖೆ ಕಾಡಕೋಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕಾಫಿ ಬೆಳೆಗಾರ ಎಚ್.ಪಿ.ತ್ರಿಲೋಕ್ ಒತ್ತಾಯಿಸಿದ್ದಾರೆ.

ಕಾಡುಕೋಣಗಳು ಕಾಫಿ ತೋಟವನ್ನು ಅರಣ್ಯ ಎಂದೇ ಭಾವಿಸುತ್ತದೆ. ಚಿಗುರು ಹುಲ್ಲು ಮೇಯಲು ಬರುತ್ತೆ. ಕಾಡುಕೋಣ ಬಂದಾಗ ರೈತರು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಕಾಫಿ ತೋಟದಲ್ಲಿ ಇರುವಿಕೆ ಗೊತ್ತಾದರೆ ದೂರವಿರಬೇಕು. ಕಂಡರೆ ದಾಳಿ ಮಾಡುತ್ತವೆ. ಎರಡು ಮೂರು ದಿನ ತೋಟದೊಳಗೆ ಇದ್ದರೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ, ಕಾಡಿಗೆ ಓಡಿಸುತ್ತೇವೆ.