ದೇವರಹಿಪ್ಪರಗಿ :ತಾಲೂಕಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು ದೇವರಹಿಪ್ಪರಗಿ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಸ್ವಾಮೀಜಿಗಳು, ವಿವಿಧ ರೈತ, ಕನ್ನಡ ಪರ ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು ಮತ್ತು ರೈತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ತಾಲೂಕಿನಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು ದೇವರಹಿಪ್ಪರಗಿ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಸ್ವಾಮೀಜಿಗಳು, ವಿವಿಧ ರೈತ, ಕನ್ನಡ ಪರ ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು ಮತ್ತು ರೈತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಮೊಹರೆ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿವರೆಗೆ ನಡೆಯಿತು. ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ಒತ್ತಾಯಿಸಿದರು.

ಹಲವಾರು ಜನ ಮುಖಂಡರು ಹಾಗೂ ಸ್ವಾಮೀಜಿಗಳು ಮಾತನಾಡಿ, ಬರ ಕುರಿತು ರೈತರ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಬೆಳೆಗಳ ವಾಸ್ತವ ಸ್ಥಿತಿ ಪರಿಶೀಲಿಸಬೇಕು. ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಬಳಿಕ ವಿಳಂಬವಿಲ್ಲದೆ ಬರಪೀಡಿತ ತಾಲೂಕು ಎಂದು ಘೋಷಿಸಿ, ಸಾಲಮನ್ನಾ ಮಾಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಎಂದು ಆಗ್ರಹಿಸಿದರು.

ನಂತರ ತಹಸೀಲ್ದಾರ್ ನಿಂಗಣ್ಣ ಬಿರಾದಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಡಿಮಠದ ಜಡಿ ಸಿದ್ದೇಶ್ವರ ಶಿವಾಚಾರ್ಯರು, ಪರದೇಶಿ ಮಠದ ಶಿವಯೋಗಿ ಸ್ವಾಮೀಜಿ, ಜಾಲವಾದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ(ಜಲಪೂರ), ದಸಂಸ ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ, ಮಲಕಪ್ಪ ಬಾಗೇವಾಡಿ ಮುಖಂಡರಾದ ಚನ್ನವೀರಪ್ಪ ಕುದರಿ, ಸಂಗನಗೌಡ ಬಿರಾದಾರ, ಶಂಕರಗೌಡ ಪಾಟೀಲ, ಸಂಪತ್ ಜಮಾದಾರ, ಸಾಹೇಬಗೌಡ ರೆಡ್ಡಿ, ರಾಮು ದೇಸಾಯಿ, ಶ್ರೀಕಾಂತ ಭಜೆಂತ್ರಿ, ಶಿವಶರಣ ಅವರಾದಿ, ದಿನೇಶಗೌಡ ಪಾಟೀಲ, ಕರವೇ ತಾಲೂಕು ಅಧ್ಯಕ್ಷರಾದ ರಹೀಮಾನ ಕನಕಲ್, ವಿಜಯಕುಮಾರ ಯಂಬತ್ನಾಳ, ಹಸನ್ ನದಾಫ,ಶಿವರಾಜ ತಳವಾರ, ಲಕ್ಷ್ಮಿ ಭಜೆಂತ್ರಿ ಸೇರಿ ವಿವಿಧ ಸಂಘಟನೆಗಳ ಮುಖಂಡರು, ರೈತರು ಹಾಗೂ ಕಾರ್ಯಕರ್ತರು ಇತರರು ಭಾಗವಹಿಸಿದ್ದರು.