ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಜಗಳೂರಿನಲ್ಲಿ ರೈತ ಸಂಘದಿಂದ ರಸ್ತೆ ತಡೆ

| Published : May 18 2025, 01:26 AM IST

ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಜಗಳೂರಿನಲ್ಲಿ ರೈತ ಸಂಘದಿಂದ ರಸ್ತೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರಬೇಕು ಮತ್ತು ಪ್ರಸ್ತುತ 3500 ರು. ದರದಲ್ಲಿ ಭತ್ತ ಖರೀದಿ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಶನಿವಾರ ಜಿಲ್ಲೆಯ 11 ಸ್ಥಳಗಳಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲಾಯಿತು

ಪ್ರತಿಭಟನೆ । ಜಿಲ್ಲೆಯ 11 ಸ್ಥಳಗಳಲ್ಲಿ ಧರಣಿ । ವಾಹನ ಸಂಚಾರಕ್ಕೆ ಅಡ್ಡಿ । ಕನಿಷ್ಠ ಬೆಂಬಲ ಬೆಲೆ ಜಾರಿ, 3500 ರು.ಗೆ ಭತ್ತ ಖರೀದಿಗೆ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರಬೇಕು ಮತ್ತು ಪ್ರಸ್ತುತ 3500 ರು. ದರದಲ್ಲಿ ಭತ್ತ ಖರೀದಿ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಶನಿವಾರ ಜಿಲ್ಲೆಯ 11 ಸ್ಥಳಗಳಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಲಾಯಿತು.

ಜಗಳೂರು ಬಳಿ ರಾಷ್ಟ್ರೀಯ ಹೆದ್ದಾರಿ-13, ಎಪಿಎಂಸಿ ರಾಗಿ ಖರೀದಿ ಕೇಂದ್ರದ ಎದುರು, ಆಲೂರು ಹಟ್ಟಿ, ಕೊಡಗನೂರು ಕ್ರಾಸ್, ಚಿಕ್ಕತೊಗಲೇರಿ, ಮರಡಿ, ಕಾರಿಗನೂರು ಅಡ್ಡರಸ್ತೆ, ಯರವನಾಗತಿಹಳ್ಳಿ, ಗುತ್ತೂರು ಸೇರಿದಂತೆ ಜಿಲ್ಲೆಯ 11 ಸ್ಥಳಗಳ ಮುಖ್ಯ ರಸ್ತೆಗಳಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಯಿತು.

ರಸ್ತೆ ತಡೆಯಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾದ ಹಿನ್ನೆಲೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿಭಟನಾನಿರತರ ಮನವೊಲಿಸಿದ ಪರಿಣಾಮ ರಸ್ತೆತಡೆ ಚಳುವಳಿಯನ್ನು ತಾತ್ಕಾಲಿಕವಾಗಿ ವಾಪಾಸು ಪಡೆಯಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ತಿಳಿಸಿದರು.

ದರ ನಿಗದಿಯಾಗುವವರೆಗೂ ಚಳವಳಿ ಮುಂದುವರಿಯಲಿದೆ. ಇದರ ಭಾಗವಾಗಿ ಮೇ19 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಗರ ಹೊರವಲಯದ ಆರಾಧ್ಯ ಕ್ಯಾನ್ಸರ್ ಆಸ್ಪತ್ರೆ ಬಳಿ ರಸ್ತೆ ತಡೆ ಚಳವಳಿ ಮಾಡಲು ನಿರ್ಧರಿಸಲಾಗಿದೆ. ಜಿಲ್ಲಾದ್ಯಂತ ಎಲ್ಲ ರೈತರು ಇಲ್ಲಿ ಸೇರಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಶಾಸಕರಿಗೆ ತಟ್ಟಿದ ರಸ್ತೆ ತಡೆ ಬಿಸಿ:

ಈ ಮಧ್ಯೆ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರಿಗೆ ಚನ್ನಗಿರಿಗೆ ಹೋಗುವ ಮಾರ್ಗಮಧ್ಯೆ ಚಿಕ್ಕತೊಗಲೇರಿ - ಮರಡಿ ಬಳಿ ರಸ್ತೆತಡೆ ಬಿಸಿ ತಟ್ಟಿತು. ಈ ವೇಳೆ ಪ್ರತಿಭಟನಕಾರರು ಶಾಸಕರ ಕಾರು ಮುಂದೆ ಸಾಗಲು ಅನುವು ಮಾಡಿಕೊಡದೇ ಪ್ರತಿಭಟನೆ ಮುಂದುವರಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾನಿರತ ರೈತರೊಂದಿಗೆ ಶಾಸಕ ಬಸವರಾಜ್ ಶಿವಗಂಗಾ ಮಾತನಾಡಿ, ಪ್ರತಿಭಟನೆ ವಿಚಾರ ನಮಗೆ ತಿಳಿದಿರಲಿಲ್ಲ. ಕನಿಷ್ಠ ಬೆಂಬಲ ಕಾಯ್ದೆ ಜಾರಿ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ. ಈ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ನಂತರ ಶಾಸಕರು ಪರ್ಯಾಯ ಮಾರ್ಗ ಬಳಸಿ ಚನ್ನಗಿರಿಗೆ ಪ್ರಯಾಣ ಬೆಳೆಸಿದರು.

ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಕಾರಿಗನೂರು ಕ್ರಾಸ್ ಬಳಿ ಶಿವಕುಮಾರ್, ಹೂವಿನ ಮಡು ನಾಗರಾಜ, ಗಂಗಾಧರ ಸ್ವಾಮಿ, ಕೈದಾಳ್ ವಸಂತಕುಮಾರ್, ಕೊಡಗನೂರು ಕ್ರಾಸ್‌ನಲ್ಲಿ ಚಿನ್ನ ಸಮುದ್ರ ಭೀಮಾನಾಯ್ಕ, ಆನಗೋಡು ಭೀಮಣ್ಣ, ಹೊನ್ನಮರಡಿ ಬಳಿ ಸತೀಶ್, ಉಪ್ಪನಾಯಕನಳ್ಳಿ ಉಮೇಶ್, ಚನ್ನಗಿರಿ ತಾಲೂಕಿನಲ್ಲಿ ಎಲೋದಹಳ್ಳಿ ರವಿಕುಮಾರ್, ಗಂಡುಗಲಿ, ಜಗಳೂರು ತಾಲ್ಲೂಕಿನಲ್ಲಿ ಚಿರಂಜೀವಿ, ರಾಜನಹಟ್ಟಿ ರಾಜು, ಗೌಡಗನಹಳ್ಳಿ ಸತೀಶ್, ಹರಿಹರ ತಾಲ್ಲೂಕಿನಲ್ಲಿ ಕಡರನಾಯಕನ ಹಳ್ಳಿ, ಪ್ರಭು, ಗರಡಿ ಮನೆ ಬಸವರಾಜ್, ಆಲೂರುಹಟ್ಟಿ ಬಳಿ ಆಲೂರು ಪರಶುರಾಮ್, ಪುಟ್ಟನಾಯ್ಕ, ಬೋರಗೊಂಡನಹಳ್ಳಿ ಕಲ್ಲೇಶ್ ಇತರರು ಇದ್ದರು.