ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮಳೆ ಅಭಾವದಿಂದಾಗಿ ಮುಂಗಾರು ಬೆಳೆಗಳು ಒಣಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡರು ಒತ್ತಾಯಿಸಿದರು.

ಗದಗ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬೆಳೆಗಳು ಸಂಪೂರ್ಣ ಒಣಗಿದ್ದು, ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಸಿಎಂಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮಳೆ ಅಭಾವದಿಂದಾಗಿ ಮುಂಗಾರು ಬೆಳೆಗಳು ಒಣಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡರು ಒತ್ತಾಯಿಸಿದರು. ರಾಷ್ಟ್ರೀಯಕೃತ, ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. 2025- 26ನೇ ಸಾಲಿನ ಬೆಳೆ ವಿಮೆ ಹಣವನ್ನು ಸಕಾಲದಲ್ಲಿ ಸಂಪೂರ್ಣವಾಗಿ ವಿತರಿಸಬೇಕು ಹಾಗೂ 2025- 26 ಮತ್ತು 2026- 27ನೇ ಸಾಲಿನ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು.

ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ಎದುರಾಗುತ್ತಿರುವ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಪ್ರತಿಯೊಬ್ಬ ರೈತರ ಬೆಳೆ ವಿವರ ಸರಿಯಾಗಿ ದಾಖಲಾಗುವಂತೆ ಕ್ರಮ ವಹಿಸಬೇಕು. 1978ರ ಪೂರ್ವದಿಂದಲೂ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಬಡ ಮತ್ತು ಅಲ್ಪಸಂಖ್ಯಾತ ರೈತರಿಗೆ ಹಕ್ಕುಪತ್ರ ನೀಡಬೇಕು. ಅರಣ್ಯ ಇಲಾಖೆಯಿಂದ ರೈತರ ವಿರುದ್ಧ ಹಾಕಲಾಗಿರುವ ಎಫ್ಐಆರ್ ಹಾಗೂ ವ್ಯಾಜ್ಯಗಳನ್ನು ಕೂಡಲೇ ಹಿಂಪಡೆಯಬೇಕು. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ರೈತರ ಮೇಲೆ ದಾಖಲಿಸಲಾದ ಮೊಕದ್ದಮೆಗಳನ್ನು ವಜಾಗೊಳಿಸುವುದು ಸೇರಿದಂತೆ ವಿವಿಧ ಮನವಿಗಳನ್ನು ಒಳಗೊಂಡ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ಉಪಸ್ಥಿತರಿದ್ದರು.