ವಿಜಯಪುರ ಜಿಲ್ಲೆಯ ಎಲ್ಲ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ಎಲ್ಲ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದರು.ನಗರದ ಮಹಾತ್ಮಗಾಂಧಿ ವೃತ್ತದಿಂದ ಮೆರೆವಣಿಗೆ ಮೂಲಕ ಆಗಮಿಸಿ ಡಾ.ಅಂಬೇಡ್ಕರ್ ವೃತ್ತದ ಹಿಂಭಾಗದ ಟೆಂಟ್‌ನಲ್ಲಿ ಧರಣಿ ಆರಂಭಿಸಿದರು. ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಹಲವು ಬೇಡಿಕೆ ಈಡೇರಿಸುವಂತೆ ರೈತರು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ,ಜಿಲ್ಲೆಯಲ್ಲಿ 2026-27ನೇ ಸಾಲಿನ ಮಳೆ ಸಂಪೂರ್ಣ ಕೈಕೊಟ್ಟಿದ್ದರೂ 3 ತಾಲೂಕುಗಳನ್ನು ಮಾತ್ರ ಬರಗಾಲವೆಂದು ಪರಿಗಣಿಸಿ ಉಳಿದ 10 ತಾಲೂಕು ಕೈಬಿಟ್ಟಿರುವುದು ಖಂಡನೀಯು. ಜಿಲ್ಲೆಯ 13 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಬೇಕು. ಬೆಳೆವಿಮೆ ತುಂಬಿರುವ ರೈತರಿಗೆ ಶೇ.50 ಮಧ್ಯಂತರ ವಿಮೆ ಕೂಡಲೇ ಬಿಡುಗಡೆ ಮಾಡಬೇಕು. ಜಿಲ್ಲೆಯ ಎಲ್ಲಾ ಹಳ್ಳ, ಕೊಳ್ಳ, ಕೆರೆ ಕಾಲುವೆಗಳನ್ನು ಭರ್ತಿ ಮಾಡಬೇಕು. ಜಿಲ್ಲೆಯ ಎಲ್ಲಾ ದನಕರುಗಳಿಗೆ ಮೇವಿನ ವ್ಯವಸ್ಥೆ ಒದಗಿಸಿ, ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಕೆಲಸ ಹಚ್ಚಿಕೊಡಬೇಕು. ನಮ್ಮ ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವ ವರೆಗೂ ನಾವು ಅನಿರ್ದಿಷ್ಟ ಧರಣಿ ಮುಂದುವರಿಯಲಿದೆ ಎಂದು ತಿಳಿಸಿದರು.ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲಾ 8 ಶಾಸಕರು ರಾಜೀನಾಮೆ ನೀಡಿ ನಮ್ಮ ಜತೆಗೆ ಬಂದು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ನಾದ ಕೆ.ಡಿ ಗ್ರಾಮದ ಮಠಾಧೀಶ ಶಿವಾನಂದ ಹಿರೇಮಠ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಮುಖಂಡರಾದ ಬಸನಗೌಡ ಪಾಟೀಲ, ರಾಮನಗೌಡ ಪಾಟೀಲ, ಶ್ರೀಶೈಲ ಮುಳಜಿ, ಅನಮೇಶ ಜಮಖಂಡಿ, ಸುರೇಶ ಕಿರೆಸೂರ, ಮಾಳು ಪೂಜಾರಿ, ಸಂಗಪ್ಪ ಟಕ್ಕೆ, ಈರಪ್ಪ ಕುಳೆಕುಮಟಗಿ, ಶ್ರೀಶೈಲ ವಾಲಿಕಾರ, ಎಸ್.ಟಿ.ಪಾಟೀಲ, ಶಿವಾನಂದ ಹಿರೇಮಠ, ಶಾನೂರ ನಂದರಗಿ, ಸಂಗೀತಾ ರಾಠೋಡ, ಜಗದೇವಿ ಬಿರಾದಾರ, ಲಕ್ಷ್ಮಿ ಬಿರಾದಾರ, ಪ್ರಶಾಂತ ಭೂಸಾನೂರ, ಚೆನ್ನಮ್ಮ ಮೈತ್ರಿ ಸೇರಿದಂತೆ ನೂರಾರು ರೈತರಿದ್ದರು.