ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಆಹಾರ ಧಾನ್ಯಗಳು, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಸೇರಿ ಕೃಷಿ ಕ್ಷೇತ್ರದ ಸಮಗ್ರ ಅಧ್ಯಯನ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಎಲ್ಲವನ್ನೂ ಒಗ್ಗೂಡಿಸಿ ಮಂಡ್ಯ ಅಥವಾ ಮೈಸೂರು ನಗರದಲ್ಲಿ ಸಮಗ್ರ ಕೃಷಿ ವಿಶ್ವ ವಿದ್ಯಾಲಯ ಸ್ಥಾಪಿಸುವಂತೆ ರಾಜ್ಯ ರೈತಸಂಘ ಆಗ್ರಹಿಸಿದೆ.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡರು, ರಾಜ್ಯದ ರೈತ ಪ್ರತಿನಿಧಿಗಳನ್ನು ಒಳಗೊಂಡಂತೆ ತಜ್ಞರ ಸಮಿತಿ ರಚಿಸಿ, ಅಧ್ಯಯನ ನಡೆಸಿ ಕೃಷಿ ವಿವಿ ನೀತಿಯನ್ನು ರೂಪಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬರೆದಿರುವುದಾಗಿ ತಿಳಿಸಿದರು.
ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಆರ್.ಜಯರಾಂ ಮಾತನಾಡಿ, ಕೃಷಿಗೆ ಸಂಬಂಧಿಸಿದಂತೆ ಈಗಾಗಲೇ 6 ವಿಶ್ವ ವಿದ್ಯಾಲಯಗಳಿವೆ. ಮಂಡ್ಯದಲ್ಲೂ ಕೃಷಿ ವಿವಿ ಸ್ಥಾಪನೆ ಬಗ್ಗೆ ಕೃಷಿ ಸಚಿವರು ಮಾತನಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿಶ್ವ ವಿದ್ಯಾಲಯಗಳಲ್ಲಿ ಶೇ.60 ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ. ಮಂಡ್ಯ ವಿವಿ ಸ್ಥಾಪನೆಯಾಗಿ 5 ವರ್ಷಗಳಾದರೂ ಅನುದಾನ ಕೊರತೆಯಿಂದ ನಲುಗುತ್ತಿದೆ. ಈಗ ಅದನ್ನು ಮೈಸೂರು ವಿವಿಯಲ್ಲಿ ವಿಲೀನಗೊಳಿಸುವ ಮಾತುಗಳು ಕೇಳಿ ಬರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕಕ್ಕೆ ಧಾರವಾಡದಲ್ಲಿ ಮತ್ತು ದಕ್ಷಿಣ ಕರ್ನಾಟಕಕ್ಕೆ ಬೆಂಗಳೂರಿನಲ್ಲಿ ಕೃಷಿ ವಿವಿಗಳಿವೆ. ಈ ವಿಶ್ವ ವಿದ್ಯಾಲಯಗಳಲ್ಲಿ ಒಂದೇ ಸೂರಿನಡಿ ಆಹಾರ ಬೆಳೆಗಳು, ತೋಟಗಾರಿಕೆ, ವಾಣಿಜ್ಯ ಬೆಳೆಗಳು, ಪಶು ಸಂಗೋಪನೆ, ಕೃಷಿ ಮಾರುಕಟ್ಟೆ, ಕೃಷಿ ಇಂಜಿನಿಯರಿಂಗ್, ಅರಣ್ಯ ಕೃಷಿ ಮುಂತಾದ ವಿಷಯಗಳ ಬೋಧನೆ, ಸಂಶೋಧನೆ, ವಿಸ್ತರಣೆ ಮತ್ತು ಚಟುವಟಿಕೆಗಳು ನಡೆಯುತ್ತಿದ್ದವು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಎಂದು ವಿಂಗಡಿಸಿ ಪ್ರತ್ಯೇಕ ವಿವಿಗಳನ್ನು ಸ್ಥಾಪಿಸಿ ವಿಶ್ವ ವಿದ್ಯಾಲಯಗಳ ಪರಿಕಲ್ಪನೆಯ ಮಹತ್ವವನ್ನು ಕುಗ್ಗಿಸಿದೆ. ನೆರೆಯ ತಮಿಳುನಾಡು ನಮ್ಮ ರಾಜ್ಯಕ್ಕಿಂತಲೂ ಹೆಚ್ಚು ವಿಸ್ತಾರವಾಗಿದೆ. ಆದರೆ ಅಲ್ಲಿ ಒಂದೇ ಒಂದು ಕೃಷಿ ವಿಶ್ವ ವಿದ್ಯಾಲಯವಿದೆ. ತಮಿಳು ನಾಡಿನ ಕೃಷಿ ವಿ.ವಿ ಬಗ್ಗೆ ರಾಜ್ಯ ಸರ್ಕಾರ ಅಧ್ಯಯನ ಮಾಡಬೇಕು ಎಂದು ಆಗ್ರಹಿಸಿದರು.ವರ್ಷದಿಂದ ವರ್ಷಕ್ಕೆ ರಾಜಕಾರಣಿಗಳ ಬೇಡಿಕೆಗೆ ಅನುಸಾರವಾಗಿ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸುವ ಬದಲು ಅಗತ್ಯ ಇರುವ ಕಡೆ ಕೃಷಿಗೆ ಸಂಬಂಧಿಸಿದ ಕಾಲೇಜು ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಂಗಳೂರು ಕೃಷಿ ವಿವಿ ತನ್ನ ಮಹತ್ವ ಕಳೆದುಕೊಂಡಿದೆ. ಆದಕಾರಣ ಅದನ್ನು ಮಂಡ್ಯ ಅಥವಾ ಮೈಸೂರು ನಗರಕ್ಕೆ ವರ್ಗಾಯಿಸಿ ಅಲ್ಲಿ ಒಂದೇ ಸೂರಿನಡಿ ಆಹಾರ ಬೆಳೆಗಳು, ತೋಟಗಾರಿಕೆ, ವಾಣಿಜ್ಯ ಬೆಳೆಗಳು, ಪಶು ಸಂಗೋಪನೆ, ಕೃಷಿ ಮಾರುಕಟ್ಟೆ, ಕೃಷಿ ಇಂಜಿನಿಯರಿಂಗ್, ಅರಣ್ಯ ಕೃಷಿ ಮುಂತಾದ ವಿಷಯಗಳ ಬೋಧನೆ, ಸಂಶೋಧನೆ, ವಿಸ್ತರಣೆ ಮತ್ತು ಚಟುವಟಿಕೆಗಳು ನಡೆಯುವಂತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು. ಸುದ್ಧಿಗೋಷ್ಠಿಯಲ್ಲಿ ರಾಜ್ಯ ರೈತಸಂಘದ ಮುಖಂಡ ಎಲ್.ಬಿ.ಜಗದೀಶ್, ತಾಲೂಕು ರೈತಸಂಘದ ಮುಖಂಡ ನಗರೂರು ಕುಮಾರ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))